ಪಾನಮುಕ್ತರಾಗಲು ಸಾಧ್ಯವಿಲ್ಲ ಎಂಬ ಭಯ ನಿವಾರಿಸಲು ಮದ್ಯವರ್ಜನ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದು ಸುತ್ತೂರು ಮಠಾಧೀಶ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು

ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ

ಪಾನಮುಕ್ತರಾಗಲು ಸಾಧ್ಯವಿಲ್ಲ ಎಂಬ ಭಯ ನಿವಾರಿಸಲು ಮದ್ಯವರ್ಜನ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದು ಸುತ್ತೂರು ಮಠಾಧೀಶ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಜೆಎಸ್‌ಎಸ್ ಅನುಭವ ಮಂಟಪದಲ್ಲಿ ಸುತ್ತೂರು ಶ್ರೀ ಶಿವರಾತ್ರೀಶ್ವರ ಮಹಾಸಂಸ್ಥಾನ ಮಠ, ಜೆಎಸ್‌ಎಸ್ ಮಹಾವಿದ್ಯಾಪೀಠ,ಹಾಲಹಳ್ಳಿ ಸಂಗಮ ಪ್ರತಿಷ್ಠಾನ ಸಂಯುಕ್ತಾಶ್ರಯದಲ್ಲಿ ನಡೆದ 21ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸಾಂಕ್ರಾಮಿಕ ರೋಗಗಳಂತೆ ಮದ್ಯಪಾನವು ಇದು ಒಂದು ರೋಗವಾಗಿದ್ದು, ಕುಡಿದರೆ ಮಾತ್ರ ಬದುಕುತ್ತೇವೆ ಎಂಬ ಭ್ರಮೆಯಿಂದ ವ್ಯಸನಿಗಳು ಹೊರಬರಬೇಕು. ಶಾಲಾ ಕಾಲೇಜು,ಹಾಸ್ಟೆಲ್ ಹಂತಕ್ಕೆ ಡ್ರಗ್ ಬಂದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಹೆಣ್ಣು ಮಕ್ಕಳ ವ್ಯಸನಕ್ಕೆ ಬಲಿಯಾಗುತ್ತಿರುವುದು ಬೇಸರ ಸಂಗತಿ ಎಂದರು.

ಶ್ರೀಮಂತರು ಶೋಕಿಗೆ ಕುಡಿಯುತ್ತಾರೆ. ಆದರೆ ದುಡಿಯುವ ಮಂದಿ ಕುಡಿಯಬೇಡಿ. ಕುಡಿತಕ್ಕೆ ಸ್ನೇಹಿತರು, ಜಗಳ ಇತ್ಯಾದಿ ಕಾರಣಗಳಿಗೆ ಕಾರಣ ನೀಡವ ಬದಲು ಇಂದು ಕುಡಿಯಲ್ಲ-ಎದುರಿಗಿದ್ದರೂ ಕುಡಿಯಲ್ಲ ಎಂದು ಪ್ರತಿಜ್ಞೆ ಮಾಡಿ. ಅಪ್ಪಿ ತಪ್ಪಿಯೂ ಕುಡಿತದ ಕಡೆಗೆ ಮುಖ ಮಾಡಬೇಡಿ ಎಂದು ಸಲಹೆ ನೀಡಿದರು.

ಅಬಕಾರಿ ಇಲಾಖೆಯೇ ಸರ್ಕಾರದ ಆದಾಯದ ಮೂಲ. ಆದರೆ ನಾವು ಕುಡಿಯುವರಿಂದಲೇ ಸರ್ಕಾರ ನಡೆಯುತ್ತಿದೆ ಎಂದು ದಡ್ಡತನ ಪ್ರದರ್ಶನ ಮಾಡಬೇಡಿ ಎಂದು ಕಿವಿಮಾತು ಹೇಳಿದರು.

ಕಡಿಮೆ ಜನ ಕುಡಿತ ಬಿಟ್ಟರೂ ಅದು ಸಮಾಜಕ್ಕೆ ಕೊಡುಗೆ ಎಂಬ ಆಶಯದಲ್ಲಿ ಜೆಎಸ್‌ಎಸ್ ಸಂಸ್ಥೆಯು ಸಹಯೋಗದಲ್ಲಿ ಮದ್ಯವರ್ಜನ ಶಿಬಿರಗಳನ್ನು ನಡೆಸುತ್ತಿದೆ ಮದ್ಯ ವಸನಿಗಳು ಉಪಯೋಗ ಪಡಿಸಿಕೊಳ್ಳಿ ಎಂದರು.

ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಮಾತನಾಡಿ, ಮದ್ಯ ನಿಮ್ಮ ಕುಟುಂಬ ಮತ್ತು ಸಮಾಜದ ಭವಿಷ್ಯವನ್ನೇ ಕಿತ್ತುಕೊಳ್ಳುತ್ತದೆ. ಸಮಾಜ ವ್ಯಸನಮುಕ್ತವಾಗಿ ಎಲ್ಲರೂ ಉತ್ತಮ ಜೀವನ ನಡೆಸುವಂತಾಗಲಿ. ಶಿಬಿರಾರ್ಥಿಗಳು, ಕುಟುಂಬಸ್ಥರು ಮತ್ತು ನವಜೀವನ ನಡೆಸುವ ಮಂದಿ ಅನಿಸಿಕೆಗಳನ್ನು ಹಂಚಿಕೊಳ್ಳುವ ಮೂಲಕ ಮದ್ಯ ವ್ಯಸನಿಗಳು ವ್ಯಸನಮುಕ್ತರಾಗಿ ನವಜೀವನ ನಡೆಸುವಂತೆ ಪ್ರೇರಣೆ ನೀಡಿದರು. ಮಾಜಿ ಶಾಸಕ ಸಿ.ಎಸ್.ನಿರಂಜನ್‌ಕುಮಾರ್, ಮೈಸೂರು ಪರಂಪರೆ ಸಂಸ್ಥೆ ಕಾರ್ಯ ನಿರ್ವಾಹಕ ಪಿ.ಕೃಷ್ಣಕುಮಾರ್, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ ಮಾತನಾಡಿದರು.

ಶಿಬಿರದ ಯಶಸ್ಸಿಗೆ ಶ್ರಮಿಸಿದವರನ್ನು ಸುತ್ತೂರು ಮಠಾಧೀಶ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಶಿಬಿರಾರ್ಥಿಗಳು ವ್ಯಸನ ಮುಕ್ತರಾಗುವ ಬಗ್ಗೆ ಸಾಮೂಹಿಕ ಪ್ರತಿಜ್ಞೆ ಕೈಗೊಂಡರು. ಶಿಬಿರದಲ್ಲಿ ಚಿಕ್ಕತುಪ್ಪೂರು ಚನ್ನವೀರಸ್ವಾಮೀಜಿ,ಶಿಬಿರ ಸಂಚಾಲಕ ಡಾ.ಎಂ.ಪಿ.ಸೋಮಶೇಖರ್ ಹಾಗು ಪುರಸಭೆ ಅಧ್ಯಕ್ಷ ಮಧು ಇದ್ದರು.