ಸಾರಾಂಶ
ರಾಣಿಬೆನ್ನೂರು: ರೈತರು ವಾಣಿಜ್ಯ ಬೆಳೆಗಳನ್ನು ಬೆಳೆದಾಗ ಸಿಗುವ ಲಾಭಕ್ಕಿಂತ ಬೀಜೋತ್ಪಾದನೆಯಲ್ಲಿ ಹೆಚ್ಚಿನ ಆದಾಯ ಪಡೆಯಲು ಸಾಧ್ಯವಾಗಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಸದಸ್ಯ ವೀರನಗೌಡ ಪೋಲೀಸಗೌಡರ ಹೇಳಿದರು. ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗ್ರಾಮೀಣ ಯುವಕರಿಗೆ ಏರ್ಪಡಿಸಲಾಗಿದ್ದ ಮೂರು ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಾವೇರಿ ಜಿಲ್ಲೆಯು ಬೀಜೋತ್ಪಾದನೆಗೆ ಅನುಕೂಲವಾದ ವಾತಾವರಣವನ್ನು ಹೊಂದಿರುವುದರಿಂದ ಏಷ್ಯಾ ಖಂಡದಲ್ಲಿಯೇ ಪ್ರಸಿದ್ಧಿಯನ್ನು ಪಡೆದಿದೆ. ಹಾಗಾಗಿ ಬೀಜೋತ್ಪಾದನೆಯಲ್ಲಿ ಹೆಚ್ಚಿನ ಯುವಕ, ಯುವತಿಯರು ಪಾಲ್ಗೊಂಡು ಉದ್ಯಮಶೀಲರಾಗಿ ಬೆಳೆಯಬೇಕು ಎಂದರು. ಬುಡಪನಹಳ್ಳಿ ಗ್ರಾಮದ ಪ್ರಗತಿಪರ ರೈತ ಶಂಕರಗೌಡ ಪಾಟೀಲ ಮಾತನಾಡಿ, ಯುವಕರು ಬೀಜೋತ್ಪಾದನೆ ತರಬೇತಿಯಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸದ ವಿಷಯ. ಮುಂದಿನ ದಿನಗಳಲ್ಲಿ ಹೆಚ್ಚಿನ ಯುವಕರು ಕೃಷಿಗೆ ಮರಳಬೇಕು ಎಂದರು. ಇದೇ ವೇಳೆ ಬೀಜೋತ್ಪಾದನೆಯಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡರು. ಕಾಕೋಳದ ಪ್ರಗತಿಪರ ರೈತ ಮಾಲತೇಶ ಶಿಡಗನಹಾಳ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಗುರುಪ್ರಸಾದ ಜಿ. ಎಸ್. ಮಾತನಾಡಿ, ಪ್ರತಿಯೊಬ್ಬ ರೈತನಿಗೆ ತಳಿಯ ಶುದ್ಧತೆ ಹೊಂದಿರುವ ಉತ್ತಮ ಮೊಳಕೆ ಹೊಡೆಯುವ ಸಾಮರ್ಥ್ಯ ಹೊಂದಿರುವ ಬೀಜಗಳು ಬಿತ್ತನೆಗೆ ದೊರಕಬೇಕು. ಬೀಜಗಳು ಕೃಷಿ ಮತ್ತು ತೋಟಗಾರಿಕೆಯಲ್ಲಿ ಅತಿ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತವೆ. ಪ್ರಸ್ತುತ, ಗುಣಮಟ್ಟದ ಪ್ರಮಾಣಿತ ಬೀಜಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ ಎಂದರು.ಕೇಂದ್ರದ ಎಲ್ಲಾ ವಿಜ್ಞಾನಿ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಜಿಲ್ಲೆಯ ಆಸಕ್ತ ಗ್ರಾಮೀಣ ಯುವಕ ಮತ್ತು ಯುವತಿಯರು ಪಾಲ್ಗೊಂಡಿದ್ದರು.