ಸ್ವಚ್ಛ ಪರಿಸರದಿಂದ ನೆಮ್ಮದಿ ಬದುಕು ಸಾಗಿಸಲು ಸಾಧ್ಯ

| Published : Jun 06 2024, 12:32 AM IST

ಸಾರಾಂಶ

ಮನಸ್ಸು ಖುಷಿಯಾಗಿ ಇರಬೇಕಾದರೆ ಸುತ್ತಮುತ್ತಲಿನ ಪರಿಸರ ಸುಂದರವಾಗಿರಬೇಕು. ಸ್ವಚ್ಚ ವಾತಾವರಣದಿಂದ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ಪ್ರಾಚಾರ್ಯ ತರುನ್ನಂ ನಿಖತ್ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರುಮನಸ್ಸು ಖುಷಿಯಾಗಿ ಇರಬೇಕಾದರೆ ಸುತ್ತಮುತ್ತಲಿನ ಪರಿಸರ ಸುಂದರವಾಗಿರಬೇಕು. ಸ್ವಚ್ಚ ವಾತಾವರಣದಿಂದ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ಪ್ರಾಚಾರ್ಯ ತರುನ್ನಂ ನಿಖತ್ ಹೇಳಿದರು.ನಗರದ ಸರ್ಕಾರಿ ಚಿತ್ರಕಲಾ ಪದವಿ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಪರಿಸರ ದಿನಾಚರಣೆ ಹಾಗೂ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾವು ಪರಿಸರ ಎಂದಾಕ್ಷಣ ಗಿಡ, ಮರಗಳ ಬಗ್ಗೆ ಮಾತನಾಡುತ್ತೇವೆ. ಅದರಾಚೆಗೆ ಸ್ವಚ್ಛ ಪರಿಸರಕ್ಕೂ ನಾವು ಆದ್ಯತೆ ನೀಡಬೇಕಾಗಿದೆ. ಇವತ್ತು ವಿವಿಧ ಕಾಯಿಲೆಗಳು ಅಪ್ಪಳಿಸಿ ಎಳೆ ವಯಸ್ಸಿಗೆ ಜೀವ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿರುವುದು ಅಘಾತಕಾರಿ ವಿಷಯವಾಗಿದೆ. ಈ ನಿಟ್ಟಿನಲ್ಲಿ ನಾವು ಸ್ವಚ್ಚ ಪರಿಸರದಲ್ಲಿ ಬದುಕು ಕಟ್ಟಿಕೊಳ್ಳುತ್ತ ಮುಖಮಾಡಬೇಕಿದೆ ಎಂದರು.

ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಚಾರ್ಯ ಕರಿಯಣ್ಣ ಮಾತನಾಡಿ, ತುಮಕೂರಿನಲ್ಲಿ ಸರ್ಕಾರಿ ಚಿತ್ರಕಲಾ ಕಾಲೇಜು ಇರುವುದು ನಮ್ಮ ಹೆಮ್ಮೆ. ಕುಟುಂಬವನ್ನು ಪ್ರೀತಿಸಿದಷ್ಟೇ ಸಿಕ್ಕ ಉದ್ಯೋಗವನ್ನು ಪ್ರೀತಿಸಿ ಗೌರವಿಸುವ ಗುಣ ಬೆಳೆಸಿಕೊಳ್ಳಬೇಕಿದೆ ಎಂದು ಹೇಳಿದರು.ಕಾನೂನು ಸಲಹೆಗಾರ ಶಿವಕುಮಾರ್ ಮೇಷ್ಟ್ರುಮನೆ ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ಚಿತ್ರಗಳ ಮೂಲಕ ತಿದ್ದುವ ಕೆಲಸ ಚಿತ್ರಕಲಾವಿದರಿಂದ ಆಗಬೇಕಿದೆ. ಸೃಜನಶೀಲ ಕಲಾತ್ಮಕ ವಿಷಯದಲ್ಲಿ ಪದವಿ ಪಡೆಯುವುದು ಉತ್ತಮ. ಆದಷ್ಡು ಚಿತ್ರಕಲೆ ಶಿಕ್ಷಣ ಪಡೆದವರು ನಿರುದ್ಯೋಗದಿಂದ ದೂರ ಉಳಿಯಲಿದ್ದಾರೆ ಎಂಬುದಂತು ಸತ್ಯ. ಹಾಗಾಗಿ ಈಗಿನ ಯುವಕರು ಶಿಕ್ಷಣ ಆಯ್ಕೆ ಮಾಡಿಕೊಳ್ಳುವಾಗ ಮುಂದಾಲೋಚನೆ ಬಹಳ ಮುಖ್ಯ ಎಂದು ಸಲಹೆ ನೀಡಿದರು.ಚಿತ್ರಕಲಾ ವಿದ್ಯಾಲಯದ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಿ.ಎಲ್.ನಟರಾಜ್ ಮಾತನಾಡಿ, ಪರಿಸರ ದಿನಾಚರಣೆ ಇಂದಿನ ಒಂದು ದಿನಕ್ಕೆ ಸೀಮಿತವಾಗದೇ ಪ್ರತಿ ದಿನವೂ ಸ್ವಚ್ಚ ಪರಿಸರ, ಗಿಡ ನೆಡುವುದು, ಮರಗಳ ಸಂರಕ್ಷಣೆಯತ್ತ ನಾವು ಮುಖಮಾಡಬೇಕಿದೆ. ಕಲಾ ವಿದ್ಯಾರ್ಥಿಗಳು ಪರಿಸರಕ್ಕೆ ಸಂಬಂಧಿಸಿದಂತೆ ಚಿತ್ರಕೃತಿಗಳನ್ನು ರಚಿಸಿ ಪ್ರದರ್ಶನ ಮಾಡುವ ಮೂಲಕ ಮುನ್ನಲೆಗೆ ಬರಬೇಕಿದೆ ಎಂದು ಹೇಳಿದರು.ಚಿತ್ರಕಲಾ ಪದವಿ ಕಾಲೇಜಿನ ಪ್ರಾಚಾರ್ಯ ಸಿ.ಸಿ.ಬಾರಕೇರ ಮಾತನಾಡಿ, ವಿವಿಯ ಆಡಳಿತ ಮಂಡಳಿಯ ಸಹಕಾರ ಪ್ರೋತ್ಸಾಹವನ್ನು ಮರೆಯಲು ಸಾಧ್ಯವಿಲ್ಲ. ಇದೀಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನಮ್ಮ ಕಾಲೇಜು ಶಿಪ್ಟ್ ಆಗಿರುವುದರಿಂದ ಇನ್ನು ಹೆಚ್ಚಿನ ಕೆಲಸ ಮಾಡಲು ಸಾಧ್ಯವಾಗಲಿದೆ ಎಂದರು.ಕಾಳಜಿ ಫೌಂಡೇಶನ್ ನಿರ್ದೇಶಕ ಎಂ.ಎಸ್.ಗಣೇಶ್ ಮಾರನಹಳ್ಳಿ, ಉಪನ್ಯಾಸಕ ಡಾ.ಸುರೇಂದ್ರನಾಥ್, ಆರ್.ರಂಗಸ್ವಾಮಿ, ಡಾ.ಸಂತೋಷ್ ಕುಮಾರ್, ಡಾ.ಶ್ವೇತ ಡಿ.ಎಸ್, ಸತ್ಯನಾರಾಯಣ ಟಿ.ಎಸ್ ಉಪಸ್ಥಿತರಿದ್ದರು.