ತಂಡದ ಸದಸ್ಯರ ಒಗ್ಗಟ್ಟಿನ ಪರಿಶ್ರಮ, ಸಹಕಾರದಿಂದ ಗೆಲ್ಲಲು ಸಾಧ್ಯ: ಜಿಪಂ ಸಿಇಒ ಕೆ.ಆರ್.ನಂದಿನಿ

| Published : Sep 27 2025, 12:00 AM IST

ತಂಡದ ಸದಸ್ಯರ ಒಗ್ಗಟ್ಟಿನ ಪರಿಶ್ರಮ, ಸಹಕಾರದಿಂದ ಗೆಲ್ಲಲು ಸಾಧ್ಯ: ಜಿಪಂ ಸಿಇಒ ಕೆ.ಆರ್.ನಂದಿನಿ
Share this Article
  • FB
  • TW
  • Linkdin
  • Email

ಸಾರಾಂಶ

ಇದೇ ವೇಳೆ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸ್ವಚ್ಛತೆಯೇ ಸೇವಾ 15 ದಿನಗಳ ಪಾಕ್ಷಿಕ ಅಭಿಯಾನ ನಡೆಸಲಾಗುತ್ತಿದೆ. ನೀರು ತುಂಬಾ ಅಮೂಲ್ಯವಾದ ಸಂಪನ್ಮೂಲ. ಪ್ರಸ್ತುತ ನೀರನ್ನು ಸಂರಕ್ಷಣೆ ಮಾಡಿದರೆ ಮಾತ್ರ ಮುಂದಿನ ಪೀಳಿಗೆಗೆ ನೀರು ಉಳಿಸಲು ಸಾಧ್ಯ ಎಂದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ರಾಫ್ಟಿಂಗ್ ಕ್ರೀಡೆ ತಂಡದಲ್ಲಿ ಸ್ಪರ್ಧಾಳುಗಳು ಎಷ್ಟೇ ಬಲಿಷ್ಠವಾಗಿ ಇದ್ದರೂ ತಂಡದ ಸದಸ್ಯರ ಒಗ್ಗಟ್ಟಿನ ಪರಿಶ್ರಮ ಹಾಗೂ ಸಹಕಾರ ನೀಡದಿದ್ದರೆ ಗೆಲ್ಲಲು ಸಾಧ್ಯವಿಲ್ಲ ಎಂದು ಜಿಪಂ ಸಿಇಒ ಕೆ.ಆರ್ ನಂದಿನಿ ತಿಳಿಸಿದರು.

ಪಟ್ಟಣದ ಹೋಟೆಲ್ ಮಯೂರ ರಿವರ್ ವ್ಯೂವ್ ಬಳಿ ಶ್ರೀರಂಗಪಟ್ಟಣ ದಸರಾ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ರಿವರ್ ರಾಫ್ಟಿಂಗ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.

ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸಾಹಸ ಕ್ರೀಡೆ, ಜಲ ಕ್ರೀಡೆಯಂತಹ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಯುವ ಜನತೆಯ ಸಾಮರ್ಥ್ಯವನ್ನು ಸರಿಯಾದ ದಿಕ್ಕಿಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಎಲ್ಲಾ ಯುವ ಜನತೆ ತಮ್ಮಲಿರುವ ಅದಮ್ಯ ಶಕ್ತಿಯನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ದರೆ ದಡ ಸೇರಬಹುದು. ಇಲ್ಲವಾದರೆ ಗುರಿ ತಲುಪಲು ಸಾಧ್ಯವಿಲ್ಲ ಎಂದು ಹೇಳಿದರು.

ಸ್ವಚ್ಛತೆಯೇ ಸೇವಾ ಅಭಿಯಾನ:

ಇದೇ ವೇಳೆ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸ್ವಚ್ಛತೆಯೇ ಸೇವಾ 15 ದಿನಗಳ ಪಾಕ್ಷಿಕ ಅಭಿಯಾನ ನಡೆಸಲಾಗುತ್ತಿದೆ. ನೀರು ತುಂಬಾ ಅಮೂಲ್ಯವಾದ ಸಂಪನ್ಮೂಲ. ಪ್ರಸ್ತುತ ನೀರನ್ನು ಸಂರಕ್ಷಣೆ ಮಾಡಿದರೆ ಮಾತ್ರ ಮುಂದಿನ ಪೀಳಿಗೆಗೆ ನೀರು ಉಳಿಸಲು ಸಾಧ್ಯ ಎಂದರು.

ಪ್ರವಾಸಿಗರಾಗಿ ಒಂದು ಜಾಗಕ್ಕೆ ಹೋದಾಗ ಅಲ್ಲಿನ ಪರಿಸರವನ್ನು ಕಾಪಾಡಬೇಕು. ಕನಿಷ್ಠ ಪ್ರವಾಸಿ ತಾಣಕ್ಕೆ ಯಾವುದೇ ಹಾನಿ ಉಂಟು ಮಾಡಬಾರದು ಎಂಬ ಸಂದೇಶವನ್ನು ಯುವ ಜನತೆ ಉಳಿದವರೂ ಸಾರಬೇಕು ಎಂಬ ಉದ್ದೇಶದಿಂದ ಇಂದು ಸ್ವಚ್ಛತೆಯೇ ಸೇವಾ ಅಭಿಯಾನವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಮೇಜರ್ ಜನರಲ್ ಎಂ.ಎನ್.ದೇವಯ್ಯ ಮಾತನಾಡಿ, ಸ್ಪರ್ಧಾಳುಗಳಿಗೆ ಶಿಸ್ತು ತುಂಬಾ ಮುಖ್ಯ, ಸ್ಪರ್ಧಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ರಿವರ್ ರಾಫ್ಟಿಂಗ್ ಮಾಡುವಾಗ ಪ್ರಕೃತಿ ಮಾಲಿನ್ಯ ಮಾಡುವ ಯಾವ ಕೆಲಸವನ್ನೂ ಮಾಡಬೇಡಿ ಎಂದು ಹೇಳಿದರು.

ನಂತರ ಜಿಪಂ ಸಿಇಒ ಕೆ.ಆರ್ ನಂದಿನಿ ಅವರು ಸ್ವಚ್ಛತೆಯೇ ಸೇವಾ ಅಭಿಯಾನದ ಕುರಿತು ಸ್ಪರ್ಧಾಳುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಂಟಿ ನಿರ್ದೇಶಕ ಸುಭಾಷ್ ಚಂದ್ರ, ಸಹಾಯಕ ನಿರ್ದೇಶಕ ಓಂಪ್ರಕಾಶ್, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಸ್ಪರ್ಧೆ ನಿರ್ದೇಶಕ ದಿನೇಶ್ ಸುವಣ್ಣ, ಪುರಸಭೆ ಪ್ರಭಾರ ಅಧ್ಯಕ್ಷ ಎಂ.ಎಲ್ ದಿನೇಶ್, ತಾಪಂ ಇಒ ವೇಣು, ಪುರಸಭೆ ಮುಖ್ಯಾಧಿಕಾರಿ ಸತೀಶ್ ಸೇರಿದಂತೆ ಇತರರು ಇದ್ದರು.