ಸಾರಾಂಶ
ಪಂಚ ಗ್ಯಾರೆಂಟಿ ಯೋಜನೆ ಫಲಾನುಭವಿಗಳ ಸಮಾವೇಶದಲ್ಲಿ ಎಂ. ಸಿ. ಶಿವಾನಂದ ಸ್ವಾಮಿ
ಕನ್ನಡಪ್ರಭ ವಾರ್ತೆ, ಅಜ್ಜಂಪುರಜನಪರವಾದ ಪಂಚ ಗ್ಯಾರಂಟಿಗಳ ಅನುಷ್ಠಾನ ವಿಚಾರದಲ್ಲಿ ಚಿಕ್ಕಮಗಳೂರು ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದು ಇದಕ್ಕಾಗಿ ಶ್ರಮಿಸಿದ ಎಲ್ಲಾ ಜನಪ್ರತಿನಿಧಿ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಬೇಕಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಂ. ಸಿ. ಶಿವಾನಂದ ಸ್ವಾಮಿ ಹೇಳಿದರು.ಅಜ್ಜಂಪುರ ತಾಲೂಕಿನ ಶಿವನಿ ಹೋಬಳಿ ಕೇಂದ್ರದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ. ವಿಶ್ವ ಮಹಿಳಾ ದಿನಾಚರಣೆ, ಸೀಮಂತ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿ ತಿಂಗಳು ಜಿಲ್ಲೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಒಂದಿಲ್ಲೊಂದು ಯೋಜನೆ ವ್ಯಾಪ್ತಿಗೆ ಒಳಪಡಲಿದ್ದು ಸುಮಾರು ₹75 ರಿಂದ 80 ಕೋಟಿ ತಿಂಗಳಿಗೆ ಜಿಲ್ಲೆಗೆ ಯಾವುದೇ ಮಧ್ಯ ವರ್ತಿಗಳಿಲ್ಲದೆ ಬಂದು ಜನರಿಗೆ ತಲುಪುತ್ತಿದೆ. ಇದೊಂದು ವಿಶೇಷ ಕಾರ್ಯಕ್ರಮವಾಗಿದೆ ಎಂದರು.
ಪಂಚ ಗ್ಯಾರಂಟಿಗಳಿಂದ ಸರ್ಕಾರ ದಿವಾಳಿಯಾಗಲಿದೆ ಎಂದು ಟೀಕೆ ಮಾಡಿದ ಪ್ರತಿಪಕ್ಷಗಳು ಕೂಡ ಬೇರೆ ರಾಜ್ಯದ ಚುನಾವಣೆಗಳಲ್ಲಿ ಗ್ಯಾರಂಟಿ ಯೋಜನೆ ಕೊಡುವುದಾಗಿ ಘೋಷಿಸಿರುವುದನ್ನು ನೋಡಿದರೆ ಇದರ ಮಹತ್ವ ತಿಳಿಯುತ್ತದೆ ಎಂದರು.ಶಾಸಕ ಜಿ.ಎಚ್. ಶ್ರೀನಿವಾಸ್ ಮಾತನಾಡಿ ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿದ್ದೇನೆ. ಭದ್ರಾ ಯೋಜನೆ ಯಿಂದ ನೀರು ತುಂಬಿಸುವ ಕೆಲಸವಾಗುತ್ತಿದೆ. ಅಜ್ಜಂಪುರದಲ್ಲಿ ಆಡಳಿತ ಸೌದಕ್ಕಾಗಿ 18 ಎಕರೆ ಭೂಮಿ ಮಂಜೂರಾಗಿದೆ. ಕುಡಿಯುವ ನೀರು. ಆಸ್ಪತ್ರೆ. ಗ್ರಂಥಾಲಯ, ಶಾಲೆಗಳಲ್ಲಿ ಅಡುಗೆ ಕೋಣೆಗಳು, ಸುಸಜ್ಜಿತ ವಾದ ಅಂಗನವಾಡಿಗಳು, ಸಂಜೀವಿನಿ ಸಂಘಗಳಿಗೆ ಕೋಟ್ಯಂತರ ರು. ಪೂರಕ ಧನ ಸಹಾಯ ಮಾಡಲಾಗಿದೆ.
ತರೀಕೆರೆ ಪಟ್ಟಣದ ಮುಖ್ಯ ರಸ್ತೆಗೆ ₹55 ಕೋಟಿ ಅನುದಾನದೊಂದಿಗೆ ಕ್ಷೇತ್ರದ ಎಲ್ಲಾ ಊರುಗಳಲ್ಲಿ ಕಾಂಕ್ರಿಟ್ ರಸ್ತೆ ಕುಡಿಯುವ ನೀರಿಗಾಗಿ ಆದ್ಯತೆ ಕೊಡಲಾಗುತ್ತಿದೆ. ಎಲ್ಲರ ಸಹಕಾರ ನಮ್ಮ ಒಳ್ಳೆಯ ಕೆಲಸಕ್ಕೆ ಇರಲಿ ಎಂದು ಮನವಿ ಮಾಡಿದರು.ಪಂಚಾಯಿತಿ ಅಧ್ಯಕ್ಷೆ ಸುನಿತಾ, ಕೆಡಿಪಿ ಸದಸ್ಯೆ ರಚನಾ, ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಕುಮಾರ್. ತರೀಕೆರೆ ಅಧ್ಯಕ್ಷ ರಮೇಶ್, ಪಂಚಾಯತ್ ರಾಜ್ ಇಲಾಖೆಗಳ ಅಧಿಕಾರಿಗಳು, ವಿವಿಧ ಜನ ಪ್ರತಿನಿಧಿಗಳು ಭಾಗವಹಿಸಿದ್ದರು.