ಸಾರಾಂಶ
ಗೊರಜನಾಳ ಗ್ರಾಮದಲ್ಲಿ ಹೇಮ-ವೇಮ ಗ್ರಾಮೀಣಾಭಿವೃದ್ಧಿ ಯುವಕ ಸಂಘ ಹಮ್ಮಿಕೊಂಡಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ 602ನೇ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಎಸ್ಪಿ ಅಮರನಾಥರೆಡ್ಡಿ ಉದ್ಘಾಟಿಸಿದರು.
ಕನ್ನಡಪ್ರಭವಾರ್ತೆ ಅಮೀನಗಡ
ಗ್ರಾಮಸ್ಥರು ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ, ಸಾಮಾಜಿಕ ಬದ್ಧತೆ ಕಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಹೇಳಿದರು.ಸಮೀಪದ ಗೊರಜನಾಳ ಗ್ರಾಮದಲ್ಲಿ ಹೇಮ-ವೇಮ ಗ್ರಾಮೀಣಾಭಿವೃದ್ಧಿ ಯುವಕ ಸಂಘ ಹಮ್ಮಿಕೊಂಡಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ 602ನೇ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಾಲಕರು ಕಾರಣರಾಗುತ್ತಾರೆ. ಕಾರಣ ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಬೇಕು. ಗ್ರಾಮದ ಯುವಕರು ಗುರುಹಿರಿಯರ ಮಾತಿಗೆ ಗೌರವ ನೀಡಬೇಕು. ಸಂವಿಧಾನದ ನಿರಂತರ ಅಧ್ಯಯನದಿಂದ ಸಮಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಗೃಹಿಣಿಯರು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ತಾಳ್ಮೆ, ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲದ ಮಹಾತ್ಮರ ಸಂದೇಶಗಳನ್ನು ಪಾಲಿಸಬೇಕು ಎಂದರು.
ಮುಖ್ಯಅತಿಥಿಗಳಾಗಿ ಮಾತನಾಡಿದ ಜಿಲ್ಲಾ ಹಿರಿಯ ವಕೀಲ ಚಂದ್ರಶೇಖರ ರಾಠೋಡ, ಪ್ರತಿಭಾ ಪುರಸ್ಕಾರ ಮೂಲಕ ಗ್ರಾಮೀಣ ಬಡ ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಕಾರ್ಯ ಶ್ಲಾಘನೀಯ ಎಂದರು.ವಕೀಲ ಸಂತೋಷ ಬಗಲಿ ದೇಸಾಯಿ, ರಮೇಶ ಬದ್ನೂರ ಮಾತನಾಡಿದರು. ಪ್ರಾಸ್ತಾವಿಕವಾಗಿ ಸಾಹಿತಿ, ಶಿಕ್ಷಕ ಎಚ್.ಟಿ. ರಂಗಾಪುರ ಮಾತನಾಡಿದರು. ಗ್ರಾಮದ ಹಿರಿಯರಾದ ರಂಗನಗೌಡ ಬೇವೂರ, ಬಾಬುಗೌಡ ಪಾಟೀಲ, ವಕೀಲ ರಮಜಾನ ನದಾಫ್, ಈರಣ್ಣ ಬಡಿಗೇರ, ರಘುನಾತಗೌಡ ಬೇವೂರ ಉಪಸ್ಥಿತರಿದ್ದರು.