ಸಾರಾಂಶ
ತಾಲ್ಲೂಕು ಮಟ್ಟದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮಕ್ಕಳಲ್ಲಿ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಅರಿವಿಲ್ಲದೇ ಹುದುಗಿರುತ್ತವೆ. ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಪಾಲಕರ ಹಾಗೂ ಶಿಕ್ಷಕರ ಕರ್ತವ್ಯ ಎಂದು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಗರದ ಹೌಸಿಂಗ್ ಬೋರ್ಡ್ ಸಮೀಪ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳು ಬಾಲ್ಯದಿಂದಲೇ ಒಂದಿಲ್ಲೊಂದು ವಿಷಯಗಳಲ್ಲಿ ಆಸಕ್ತಿ ಹೊಂದಿರುವುದು ಸಹಜ. ಆ ಕಲಾಸಕ್ತಿಯನ್ನು ಸಮಾಜದ ಮುಂಚೂಣಿಗೆ ತರುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ. ಹೀಗಾಗಿ ವಿದ್ಯಾರ್ಥಿಗಳ ಜೀವನದಲ್ಲೇ ಕಲೆಯನ್ನು ಪ್ರೋತ್ಸಾಹಿಸಿ ಗೌರವಿಸುವ ಕಾರ್ಯವಾಗಬೇಕಿದೆ ಎಂದರು.
ಪ್ರತಿಭಾ ಕಾರಂಜಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನ್ಮವಿತ್ತ ಪುಣ್ಯಭೂಮಿ. ಮಕ್ಕಳು ಪಠ್ಯದ ಜೊತೆಗೆ ಶೈಕ್ಷಣಿಕ, ಸಾಮಾಜಿಕ ವಾಗಿ ಬೆಳವಣಿಗೆ ಹೊಂದುವ ದೃಷ್ಟಿಯಿಂದ ಶಿಕ್ಷಣ ಮಂತ್ರಿ ಗೋವಿಂದೇಗೌಡ ಕಾಲದಲ್ಲಿ ಮಕ್ಕಳ ಮೇಳ ಎಂಬ ಹೆಸರಿನಲ್ಲಿ ಆರಂಭಗೊಂಡು ಇದೀಗ ರಾಜ್ಯಾದ್ಯಂತ ಪ್ರತಿಭಾ ಕಾರಂಜಿ ರೂಪದಲ್ಲಿ ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹಿಸುತ್ತಿದೆ ಎಂದರು.ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪುರವರ ನಾಡಗೀತೆಗೆ ಸಮಾಜದ ನಾಗರಿಕರು ಗೌರವ ಸೂಚಿಸುವುದು ಅತಿ ಮುಖ್ಯ. ನಾಡಿನ ಕವಿಸಂತರು, ದಾರ್ಶನಿಕರು ಹಾಗೂ ಪ್ರಸಿದ್ಧ ತಾಣಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿಸಿರುವ ಮಹಾ ಕಾವ್ಯ ನಾಡಗೀತೆಗೆ ಧಾರ್ಮಿಕ ಚೌಕಟ್ಟಿಲ್ಲ, ಎಷ್ಟೇ ದೊಡ್ಡ ವ್ಯಕ್ತಿಯಾದರೂ ಎದ್ದು ನಿಂತು ಗೌರವಿಸದಿದ್ದರೆ ಸಾಧಕರಿಗೆ ಅವಮಾನಿಸಿದಂತೆ ಎಂದು ಹೇಳಿದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ವಿದ್ಯಾರ್ಥಿಗಳ ಸೃಜನಶೀಲತೆ ಹೊರತರುವ ಉದ್ದೇಶದಿಂದ ಸರ್ಕಾರ ಪ್ರತಿಭಾ ಕಾರಂಜಿ ಆಯೋಜಿಸುತ್ತಿದೆ. ವಿಜೇತರಾದವರು ಜಿಲ್ಲಾ, ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಬಹುದು. ಸೋಲುಂಡವರು ಧೃತಿಗೆಡದೇ ಭಾಗವಹಿಸಿರುವ ಅನುಭವವೇ ದೊಡ್ಡದೆಂದು ಅರಿತು ಮುಂದಿನ ಪ್ರಯತ್ನಕ್ಕೆ ಅಣಿಯಾಗಬೇಕು ಎಂದರು.ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿ ಪ್ರತಿಭಾ ಕಾರಂಜಿ ಆಯೋಜಿಸುವ ಉದ್ದೇಶವೇ ನಾಯಕತ್ವ ಗುಣ ಬೆಳೆಸುವುದಕ್ಕಾಗಿ ಎಂದ ಅವರು, ತೀರ್ಪುಗಾರರು ಕಾರಂಜಿಯಲ್ಲಿ ಸ್ಪರ್ಧಿಸಿದ ಮಕ್ಕಳಿಗೆ ಸಮಗ್ರ ಕಲೆಯನ್ನು ಗುರುತಿಸಿ ಪ್ರಾಮಾಣಿಕಾಗಿ ಆಯ್ಕೆ ಗೊಳಿಸಿದರೆ ಭವಿಷ್ಯದಲ್ಲಿ ಆ ವಿದ್ಯಾರ್ಥಿ ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸಲು ಸಾಧ್ಯ ಎಂದು ಹೇಳಿದರು.
ನಗರಸಭೆ ಸದಸ್ಯೆ ಕವಿತಾ ಶೇಖರ್ ಮಾತನಾಡಿ, ವಿದ್ಯಾಭ್ಯಾಸದಲ್ಲಿನ ಮಕ್ಕಳ ಬದುಕು ಖಾಲಿ ಚೀಲ ವಿದ್ದಂತೆ. ಶಿಕ್ಷಣ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆ ಎಂಬ ಜ್ಞಾನ ಭಂಡಾರವನ್ನು ವಿದ್ಯಾರ್ಥಿಗಳಿಗೆ ಶಿಕ್ಷಕರು ತುಂಬಿಸಿ ಬಾಲ್ಯ ದಲ್ಲಿಯೇ ವಿದ್ಯಾರ್ಜನೆಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಪಿಯು ಕಾಲೇಜು ಪ್ರಾಂಶುಪಾಲ ಸುರೇಂದ್ರ, ಪ್ರೌಢಶಾಲೆ ಮುಖ್ಯೋಪಾಧ್ಯಾಯ ಜಿ.ಆರ್.ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಸಿ.ರವೀಶ್, ಶಿಕ್ಷಣ ಸಂಯೋಜಕ ಟಿ.ಜಿ. ಕೃಷ್ಣಮೂರ್ತಿ ರಾಜ್ ಅರಸ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಚಂದ್ರನಾಯ್ಕ್, ತಾಲೂಕು ಅಧ್ಯಕ್ಷ ಗಂಗಾಧರ್, ಕಾರ್ಯದರ್ಶಿ ಪ್ರಹ್ಲಾದ್, ಸಹ ಶಿಕ್ಷಕರ ತಾಲೂಕು ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಉಮೇಶ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಂಕರೇಗೌಡ ಉಪಸ್ಥಿತರಿದ್ದರು. 22 ಕೆಸಿಕೆಎಂ 1ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡ್ ಸಮೀಪ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ಧ ತಾಲೂಕು ಮಟ್ಟದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ, ಕಲೋತ್ಸವವನ್ನು ಶ್ರೀ ಗುಣನಾಥ ಸ್ವಾಮೀಜಿ ಉದ್ಘಾಟಿಸಿದರು. ಶಾಸಕ ಎಚ್.ಡಿ. ತಮ್ಮಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ರವೀಶ್, ಪ್ರಾಂಶುಪಾಲ ಸುರೇಂದ್ರ ಇದ್ದರು.