ಸಾರಾಂಶ
ಜಿಲ್ಲಾ ಪಂಚಾಯ್ತಿಯಲ್ಲಿ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಿದ್ಯಾರ್ಥಿಗಳು ದೇಶದ ಆಸ್ತಿ, ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಅವರನ್ನು ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿ ಸಮಾಜದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಶಿಕ್ಷಕರ ಕರ್ತವ್ಯ ಎಂದು ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಹೇಳಿದರು.ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ, ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಸಂಸದೀಯ ಚಟುವಟಿಕೆಗಳ ಕುರಿತು ಮಾತನಾಡಿದರು.ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣ ಜೀವನದ ಬಹು ಮುಖ್ಯ ಭಾಗವಾಗಿದೆ. ಶಿಕ್ಷಣ ಇಲ್ಲದೆ ಸಮಾಜದ ನಡುವೆ ಜೀವಿಸುವುದು ಕಷ್ಟಕರ. ಹಾಗಾಗಿ ಸರ್ಕಾರ ಕಡ್ಡಾಯ ಶಿಕ್ಷಣ ಜಾರಿಗೆ ತರುವ ಮೂಲಕ ಎಲ್ಲಾ ಮಕ್ಕಳಿಗೂ ಉಚಿತ ಶಿಕ್ಷಣದ ಜೊತೆಗೆ ಶಿಕ್ಷಣದ ಪೂರಕಗಳನ್ನು ವ್ಯವಸ್ಥಿತವಾಗಿ ನೀಡುತ್ತಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದ ವಿಷಯ ಬೋಧಿಸಿ ಅವರಲ್ಲಿ ಜ್ಞಾನ ತುಂಬುವ ಜೊತೆಗೆ ಪಠ್ಯೇತರ ವಿಷಯಗಳಲ್ಲಿ ಅವರು ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದು ಅಗತ್ಯ ಎಂದರು.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳೆಂಬ ನಾಲ್ನುಡಿಯಂತೆ ಮಕ್ಕಳಲ್ಲಿ ಆಡಳಿತ ಹಾಗೂ ಸಂಸದೀಯ ಕಾರ್ಯ ಕಲಾಪ, ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಬೇಕು. ರಾಜಕೀಯ ವಿಷಯಗಳು ಕುರಿತು ಪ್ರತಿಯೊಬ್ಬರಲ್ಲೂ ಜ್ಞಾನವಿರಬೇಕು. ಇಂತಹ ಚಟುವಟಿಕೆಗಳು ಮಕ್ಕಳಲ್ಲಿ ರಾಜಕೀಯ ಪ್ರಜ್ಞೆ ಜೊತೆಗೆ ಪ್ರಶ್ನಿಸುವ ಮನೋಭಾವ, ಧೈರ್ಯದಿಂದ ಮಾತನಾಡುವ ಕಲೆ ಹಾಗೂ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮನಸ್ಥಿತಿ ರೂಪುಗೊಳ್ಳುತ್ತದೆ ಎಂದ ಅವರು, ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸಿ ಉತ್ತಮ ಸಮಾಜ ರೂಪಿಸಲು ಸಹಕಾರಿ ಎಂದು ತಿಳಿಸಿದರು.ಶಾಲಾ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ಕಾಂತರಾಜ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಓದುವಂತಹ ಪ್ರತಿ ಮಕ್ಕಳಿಗೆ ರಾಜಕೀಯ ವಿಷಯಗಳ ಕುರಿತು ಮಾಹಿತಿ ಹಾಗೂ ಸಂಸದೀಯ ಕಾರ್ಯ ವೈಖರಿ ಕುರಿತು ಪ್ರಜ್ಞೆ ಮೂಡಿಸಲು ಮತ್ತು ಅವರನ್ನು ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಸಕ್ರಿಯರಾಗಲು ಪ್ರೇರೆಪಿಸುವ ಉದ್ದೇಶದಿಂದ ಯುವ ಸಂಸತ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಉತ್ತಮ ವಾಕ್ ಚಾತುರ್ಯ, ಸ್ಪಷ್ಟ ವಿಷಯ ಮಂಡನೆ, ವಿದ್ಯಾರ್ಥಿ ವರ್ತನೆ ಹಾಗೂ ಇನ್ನಿತರ ವಿಷಯಗಳನ್ನು ಮಾನದಂಡವಾಗಿಸಿಕೊಂಡು ತಾಲೂಕು ಮಟ್ಟದಲ್ಲಿ ಭಾಗವಹಿಸಿ ವಿಜೇತರಾದ ಜಿಲ್ಲೆಯ 70 ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಇದೇ ಮಾನದಂಡಗಳ ಮೂಲಕ ಇಬ್ಬರು ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು. ಚಟುವಟಿಕೆಗಳ ಕುರಿತು ವಿದ್ಯಾರ್ಥಿ ಗಳಿಗೆ ಶಾಲಾ ಹಂತದಿಂದಲೂ ತರಬೇತಿ ನೀಡಿ ಸಿದ್ಧಪಡಿಸಲಾಗಿದೆ. ಇಂತಹ ಚಟುವಟಿಕೆಗಳಿಂದ ಮಕ್ಕಳು ರಾಜಕೀಯ ವಿಷಯಗಳಲ್ಲಿ ಸಕ್ರಿಯರಾಗಿ ಹೆಚ್ಚು ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಶಿಕ್ಷಕರಾದ ಸುರೇಶ್, ಕೃಷ್ಣೇಗೌಡ, ಲಕ್ಷ್ಮಣ ಹಾಗೂ ತೀರ್ಪುಗಾರರಾದ ಸತೀಶ್, ಮಹಾದೇವಪ್ಪ ಕುಂದರಗಿ ಉಪಸ್ಥಿತರಿದ್ದರು.
ಪೋಟೋ ಫೈಲ್ ನೇಮ್ 8 ಕೆಸಿಕೆಎಂ 3ಚಿಕ್ಕಮಗಳೂರಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ ನಡೆಯಿತು.