ಸಾರಾಂಶ
- ₹10 ಸಾವಿರಕ್ಕಿಂತ ಹೆಚ್ಚಾದಲ್ಲಿ ಆರ್‌ಟಿಜಿಎಸ್, ಚೆಕ್ ಮೂಲಕ ಪಾವತಿಸಬೇಕು: ಚುನಾವಣಾಧಿಕಾರಿ- - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಲೋಕಸಭಾ ಚುನಾವಣೆ ನಡೆಯುತ್ತಿದ್ದು ಚುನಾವಣಾ ಅಂತಿಮ ಕಣದಲ್ಲಿನ ಅಭ್ಯರ್ಥಿಗಳು ಚುನಾವಣಾ ಲೆಕ್ಕವನ್ನು ದಿನನಿತ್ಯ ನಿರ್ವಹಣೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದರು.ಸೋಮವಾರ ಚುನಾವಣಾಧಿಕಾರಿ ಕಚೇರಿಯಲ್ಲಿ ಅಂತಿಮ ಚುನಾವಣಾ ಕಣದಲ್ಲಿ ಉಳಿದ ಅಭ್ಯರ್ಥಿಗಳಿಗೆ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಿದ ಅವರು, ಪ್ರತಿ ಅಭ್ಯರ್ಥಿಗಳಿಗೆ ₹95 ಲಕ್ಷದವರೆಗೆ ಖರ್ಚು ವೆಚ್ಚ ಮಾಡಲು ಅವಕಾಶ. ಎಲ್ಲ ಅಭ್ಯರ್ಥಿಗಳು ಖರ್ಚು ವೆಚ್ಚದ ಲೆಕ್ಕವನ್ನು ಪಾರ್ಟ್-ಎ ಅಡಿ ಪ್ರತಿನಿತ್ಯದ ವರದಿ ಇದರಲ್ಲಿ ಖರ್ಚು ಮತ್ತು ಹಣದ ಮೂಲ ನಮೂದು ಮಾಡಬೇಕು. ದೇಣಿಗೆ ಬಂದಿದ್ದಲ್ಲಿ ಅವರ ವಿವರ ನಮೂದಿಸಬೇಕು ಎಂದರು.
ಪಾರ್ಟ್-ಬಿ ಅಡಿ ಕ್ಯಾಷ್‌ಬುಕ್ ನಿರ್ವಹಣೆ ಮಾಡಬೇಕು. ಪಾರ್ಟ್-ಸಿ ಅಡಿ ಬ್ಯಾಂಕ್ ಬುಕ್ ನಿರ್ವಹಣೆ ಮಾಡಬೇಕು. ₹10 ಸಾವಿರವರೆಗೆ ನಗದು ನೀಡಲು ಮಾತ್ರ ಅವಕಾಶವಿದೆ. ಇದಕ್ಕೂ ಮೇಲ್ಪಟ್ಟಲ್ಲಿ ಕ್ರಾಸ್ ಮಾಡಿದ ಚೆಕ್, ಆರ್‌ಟಿಜಿಎಸ್ ಮಾಡಬೇಕು. ಖರ್ಚು ಮಾಡಿದ ಎಲ್ಲ ವ್ಯವಹಾರಕ್ಕೂ ರಸೀದಿ ಮತ್ತು ಬಿಲ್‌ಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ ಎಂದು ಸೂಚಿಸಿದರು.ಅಭ್ಯರ್ಥಿಗಳು ಪ್ರತಿನಿತ್ಯದ ಖರ್ಚು ವೆಚ್ಚ ತಾಳೆಯನ್ನು ಏಪ್ರಿಲ್ 26, ಮೇ 2 ಮತ್ತು 6ರಂದು ಅಕೌಂಟಿಂಗ್ ಟೀಂನೊಂದಿಗೆ ತಾಳೆ ಮಾಡಿಸಿಕೊಳ್ಳಬೇಕು. ಅನಂತರ ಅಂತಿಮವಾಗಿ ಫಲಿತಾಂಶ ಪ್ರಕಟವಾದ 26ನೇ ದಿನ ವೆಚ್ಚ ವೀಕ್ಷಕರ ಸಮಕ್ಷಮ ಅಂತಿಮ ಹಂತದ ವೆಚ್ಚ ನಿರ್ವಹಣಾ ಸಭೆ ನಡೆಯಲಿದೆ. ಯಾರು ಸರಿಯಾಗಿ, ಸಮಯಕ್ಕೆ ನೀಡದಿದ್ದಲ್ಲಿ ಅಭ್ಯರ್ಥಿತನಕ್ಕೆ ತೊಂದರೆಯಾಗಲಿದೆ ಎಂದೂ ಎಚ್ಚರಿಸಿದರು.
ಅಭ್ಯರ್ಥಿಗಳು ವಾಹನಗಳನ್ನು ಇಂತಿಷ್ಟೇ ಪಡೆಯಬೇಕೆಂಬ ಮಿತಿ ಇಲ್ಲ. ಖರ್ಚುವೆಚ್ಚ ಮಾತ್ರ ಅಂದಾಜಿಸಲಾಗುತ್ತದೆ. ಯಾವುದೇ ಅಭ್ಯರ್ಥಿ ತನ್ನ ಹೆಸರಲ್ಲಿ ವಾಹನ ಪಡೆದು ಬೇರೊಬ್ಬರಿಗೆ ಉಪಯೋಗ ಮಾಡಲು ಅವಕಾಶ ಮಾಡಿದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದರು.ಎಂಸಿಎಂಸಿ ಅನುಮತಿ ಕಡ್ಡಾಯ:
ಯಾವುದೇ ಎಲೆಕ್ಟ್ರಾನಿಕ್ಸ್ ವಿನ್ಯಾಸ, ಮಾಧ್ಯಮ, ವೆಬ್‌ಸೈಟ್, ವಾಯ್ಸ್ ಮೆಸೇಜ್, ಇನ್ನಿತರೆ ಜಾಹಿರಾತು ನೀಡಲು ಪೂರ್ವಾನುಮತಿ ಕಡ್ಡಾಯ. ಅನುಬಂಧ-ಎ ಅಡಿ ಸಲ್ಲಿಸಿ ಅನುಬಂಧ-ಬಿ ಅಡಿ ಅನುಮತಿ ಪಡೆಯಬೇಕು. ಮತದಾನ ಮುಕ್ತಾಯ ಆಗುವ 48 ಗಂಟೆ ಮುಂಚಿತವಾಗಿ ಮುದ್ರಣ ಮಾಧ್ಯಮಗಳಲ್ಲಿ ಜಾಹಿರಾತು ನೀಡಲು ಮಾತ್ರ ಅನುಬಂಧ-ಸಿ ಅಡಿ ಮುಂಚಿತವಾಗಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಅನುಮತಿ ಇದ್ದಲ್ಲಿ ಮಾತ್ರ 48 ಗಂಟೆಗಳ ಅವಧಿಯಲ್ಲಿ ಮುದ್ರಣ ಮಾಧ್ಯಮಗಳಲ್ಲಿ ಜಾಹಿರಾತು ಪ್ರಕಟಿಸಲು ಅವಕಾಶ ಇದೆ ಎಂದರು.ಚುನಾವಣಾ ವೀಕ್ಷಕರು ಜಿಲ್ಲೆಯಲ್ಲಿದ್ದು ಎಂಸಿಸಿ ದೂರುಗಳಿದ್ದಲ್ಲಿ ಅವರಿಗೂ ಮತ್ತು ಸಿವಿಜಿಲ್‌ಗೆ, ಟೋಲ್ ಫ್ರೀ ಸಂಖ್ಯೆಗೂ ಮಾಹಿತಿ ನೀಡಬಹುದಾಗಿದೆ ಎಂದು ಚುನಾವಣಾ ಪ್ರಕ್ರಿಯೆಗಳ ಕುರಿತು ಅಭ್ಯರ್ಥಿಗಳಿಗೆ ಮಾಹಿತಿ ನೀಡಿದರು.
ಅಕೌಂಟಿಂಗ್ ನೋಡಲ್ ಅಧಿಕಾರಿ ಗಿರೀಶ್ ಪಿಪಿಟಿಯಲ್ಲಿ ಎಲ್ಲಾ ಮಾಹಿತಿ ನೀಡಿದರು. ಸಾಮಾನ್ಯ ವೀಕ್ಷಕರಾದ ಎಂ.ಲಕ್ಷ್ಮೀ, ವೆಚ್ಚ ವೀಕ್ಷಕರಾದ ಪ್ರತಿಭಾ ಸಿಂಗ್, ಸಹಾಯಕ ಚುನಾವಣಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್. ಬಳ್ಳಾರಿ, ಚುನಾವಣೆ ಅಭ್ಯರ್ಥಿಗಳು ಉಪಸ್ಥಿತರಿದ್ದರು.- - -
-22ಕೆಡಿವಿಜಿ55:ದಾವಣಗೆರೆಯಲ್ಲಿ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅಂತಿಮ ಚುನಾವಣಾ ಕಣದಲ್ಲಿ ಉಳಿದ ಅಭ್ಯರ್ಥಿಗಳಿಗೆ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಿದರು.