ಕನ್ನಡಪ್ರಭ ವಾರ್ತೆ ಬೆಳಗಾವಿ ನಮ್ಮ ಮತ, ನಮ್ಮ ಹಕ್ಕು ಪ್ರಜಾಪ್ರಭುತ್ವದ ಮೂಲಮಂತ್ರವಾಗಿದ್ದು, ಪ್ರತಿಯೊಬ್ಬ ನಾಗರಿಕನ ಭವಿಷ್ಯವನ್ನು ರೂಪಿಸುವ ಶಕ್ತಿಯು ಮತದಾನ ಹೊಂದಿದೆ. ಮತದಾನವು ಕೇವಲ ಹಕ್ಕಲ್ಲ, ಬದಲಾಗಿ ದೇಶದ ಅಭಿವೃದ್ಧಿ ಮತ್ತು ಪ್ರಗತಿಗಾಗಿ ಪವಿತ್ರ ಕರ್ತವ್ಯ ಕೂಡ ಆಗಿದೆ. ಪ್ರತಿ ಮತವು ನಿರ್ಣಾಯಕವಾಗಿದ್ದು, ಮತದಾರರು ಜವಾಬ್ದಾರಿಯುತ ನಾಯಕರನ್ನು ಆಯ್ಕೆ ಮಾಡುವುದು ಅತ್ಯಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂದೀಪ ಪಾಟೀಲ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ನಮ್ಮ ಮತ, ನಮ್ಮ ಹಕ್ಕು ಪ್ರಜಾಪ್ರಭುತ್ವದ ಮೂಲಮಂತ್ರವಾಗಿದ್ದು, ಪ್ರತಿಯೊಬ್ಬ ನಾಗರಿಕನ ಭವಿಷ್ಯವನ್ನು ರೂಪಿಸುವ ಶಕ್ತಿಯು ಮತದಾನ ಹೊಂದಿದೆ. ಮತದಾನವು ಕೇವಲ ಹಕ್ಕಲ್ಲ, ಬದಲಾಗಿ ದೇಶದ ಅಭಿವೃದ್ಧಿ ಮತ್ತು ಪ್ರಗತಿಗಾಗಿ ಪವಿತ್ರ ಕರ್ತವ್ಯ ಕೂಡ ಆಗಿದೆ. ಪ್ರತಿ ಮತವು ನಿರ್ಣಾಯಕವಾಗಿದ್ದು, ಮತದಾರರು ಜವಾಬ್ದಾರಿಯುತ ನಾಯಕರನ್ನು ಆಯ್ಕೆ ಮಾಡುವುದು ಅತ್ಯಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂದೀಪ ಪಾಟೀಲ ತಿಳಿಸಿದರು.ಭಾರತ ಚುನಾವಣಾ ಆಯೋಗ, ಕರ್ನಾಟಕ ಜಿಲ್ಲಾ ಚುನಾವಣಾ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಮತ್ತು ಅಧ್ಯಕ್ಷರು ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಪಂಚಾಯತ್ ಬೆಳಗಾವಿ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ನಡೆದ 16ನೇ ರಾಷ್ಟ್ರೀಯ ಮತದಾರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮತದಾನದ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದರು.
ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಸುಭಾಷ ಸಂಕದ ಮಾತನಾಡಿ, ಮತದಾನ ದಿನಾಚರಣೆ ಕಾರ್ಯಕ್ರಮ ಇವತ್ತಿಗೆ ಮಾತ್ರ ಸೀಮಿತವಾಗಬಾರದು. 18 ವರ್ಷ ವಯಸ್ಸಿನ ನಂತರ ಎಲ್ಲರಿಗೂ ತಿಳುವಳಿಕೆ ಬರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಮತ ಚಲಾಯಿಸಬೇಕು. ಒಳ್ಳೆಯ ನಾಯಕರನ್ನು ಆಯ್ಕೆ ಮಾಡಲು ಕಡ್ಡಾಯವಾಗಿ ಮತ ಚಲಾಯಿಸಿ, ಸಂವಿಧಾನ ಪ್ರಜೆಗಳಿಗೆ ನೀಡಿರುವ ಹಕ್ಕುಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.ಮಹಾನಗರ ಪಾಲಿಕೆಗೆ ಉಪ ಆಯುಕ್ತ ಉದಯಕುಮಾರ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿ, ಜ.25 ರಂದು ಆಯೋಗ ಸ್ಥಾಪನೆಯಾಗಿರುವ ಕಾರಣ ಪ್ರತಿವರ್ಷ 25ರಂದು ರಾಷ್ಟ್ರಿಯ ಮತದಾರರ ದಿನಾಚರಣೆ ಹಾಗೂ ಮತದಾನ ಜಾಗೃತಿ ದಿನ ಎಂದು ಆಚರಿಸಲಾಗುತ್ತಿದೆ. ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಎಲ್ಲ ಯುವಕರು 18 ವರ್ಷಕ್ಕೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ತಪ್ಪದೇ ಸೇರಿಸಬೇಕು. ಈಗ ತಂತ್ರಜ್ಞಾನ ಬೆಳವಣಿಗೆ ಕಂಡ ನಂತರ ಆನ್ ಲೈನ್ ಮೂಲಕ ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸುವುದು ಸುಲಭವಾಗಿದೆ ಎಂದು ತಿಳಿಸಿದರು.ಮತದಾನ ಪ್ರತಿಜ್ಞಾವಿಧಿ ಬೋಧನೆ:
ಈ ವೇಳೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂದೀಪ ಪಾಟೀಲ ಪ್ರತಿಜ್ಞಾವಿಧಿ ಬೋಧಿಸಿದರು. ಬಳಿಕ ಚುನಾವಣಾ ಆಯೋಗದ ವತಿಯಿಂದ ಮತದಾನ ಜಾಗೃತಿ ಕುರಿತು ಕಲೆ, ಸಾಹಿತ್ಯದ ವಿಡಿಯೋ ಪ್ರದರ್ಶನ ಮಾಡಲಾಯಿತು. ನಂತರ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಮತದಾನ ಜಾಗೃತಿಯ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ರವಿ ಬಂಗಾರಪ್ಪ, ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ್ ನಾಯಕ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಹದೇವ ಕಾಂಬಳೆ, ಮಹಾನಗರ ಪಾಲಿಕೆ ಪರಿಷತ್ ಕಾರ್ಯದರ್ಶಿ ಪ್ರಿಯಾಂಕ ವಿನಾಯಕ್ ಉಪಸ್ಥಿತರಿದ್ದರು. ವಿವಿಧ ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಮತದಾನ ಜಾಗೃತಿ ಜಾಥಾ:
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆ-2026 ಪ್ರಯುಕ್ತ ಮತದಾನ ಕುರಿತು ವಿಶೇಷ ಅಭಿಯಾನಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂದೀಪ ಪಾಟೀಲ ಚಾಲನೆ ನೀಡಿದರು.ಜಾಗೃತಿ ಜಾಥಾ ಚನ್ನಮ್ಮ ವೃತ್ತದಿಂದ ಕೊಲ್ಲಾಪುರ ಸರ್ಕಲ್ ಮಾರ್ಗವಾಗಿ ಕುಮಾರ ಗಂಧರ್ವ ರಂಗ ಮಂದಿರದವರೆಗೆ ತಲುಪಿತು. ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳು ನಮ್ಮ ಮತ, ನಮ್ಮ ಹಕ್ಕು, ಕಡ್ಡಾಯ ಮತದಾನ, ನಿಮ್ಮ ಮತ ನಿಮ್ಮ ಭವಿಷ್ಯ, ಹಣ ಪಡೆಯಬೇಡಿ ಮತ ಮಾರಬೇಡಿ ಎಂಬ ವಿವಿಧ ಜಾಗೃತಿ ಫಲಕಗಳನ್ನು ಪ್ರದರ್ಶಿಸಿದರು.-----
ಕೋಟ್‌ಬಿಗ್ ಬಾಸ್ ನಂತಹ ರಿಯಾಲಿಟಿ ಶೋಗಳಿಗೆ ಯಾವುದೇ ಹಣ, ಜಾತಿ ನೋಡದೆ ಮತ ಹಾಕುತ್ತಾರೆ. ಆದರೆ, ನಮ್ಮ ಜೀವನದ ಮುಂದಿನ ಪೀಳಿಗೆಯ ವಿಚಾರ ಬಂದಾಗ ಯಾಕೆ ಜಾತಿ ಧರ್ಮ ಮೊರೆ ಹೋಗುತ್ತಾರೆ. ಅದರಿಂದ ನೀವುಗಳು ಯೋಚನೆ ಮಾಡಿ ಮತ ಹಾಕಿ ಒಳ್ಳೆಯ ನಾಯಕರನ್ನು ಆಯ್ಕೆ ಮಾಡಿ. ಆಯ್ಕೆಯಾದ ಜನಪ್ರತಿನಿಧಿಗಳನ್ನು ಧೈರ್ಯದಿಂದ ಪ್ರಶ್ನೆ ಮಾಡಬಹುದು.ನ್ಯಾ.ಸಂದೀಪ ಪಾಟೀಲ, ಹಿರಿಯ ಸಿವಿಲ್ ನ್ಯಾಯಾಧೀಶರು