ಪೌರ ಕಾರ್ಮಿಕರ ಬೇಡಿಕೆ ಈಡೇರಿಕೆ ಸರ್ಕಾರದ ಕರ್ತವ್ಯ: ನಾರಾಯಣ

| Published : May 05 2025, 12:45 AM IST

ಪೌರ ಕಾರ್ಮಿಕರ ಬೇಡಿಕೆ ಈಡೇರಿಕೆ ಸರ್ಕಾರದ ಕರ್ತವ್ಯ: ನಾರಾಯಣ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದ ಕೊಳಕನ್ನು ಹಗಲಿರುಳೆನ್ನದೇ, ಸಾವಿಗೂ ಭಯಪಡದೇ ಶುಚಿಗೊಳಿಸುವ ಕಾರ್ಯದಲ್ಲಿ ನಿರತರಾಗಿರುವ ಪೌರ ಕಾರ್ಮಿಕರ ಬೇಡಿಕೆಯನ್ನು ಈಡೇರಿಸುವುದು ಸರ್ಕಾರದ ಆದ್ಯ ಕರ್ತವ್ಯ ಎಂದು ಪೌರ ಕಾರ್ಮಿಕರ ಮಹಾ ಸಂಘದ ರಾಜ್ಯಾಧ್ಯಕ್ಷ ನಾರಾಯಣ ಹೇಳಿದರು.

ಅಂಬೇಡ್ಕರ್‌ ಜಯಂತಿ । ಜಗಜೀವನ್‌ ರಾಮ್‌ ಸ್ಮರಣೆ । ಪೌರ ಕಾರ್ಮಿಕರ ಮಹಾ ಸಂಘದ ಜಿಲ್ಲಾ ಘಟಕ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸಮಾಜದ ಕೊಳಕನ್ನು ಹಗಲಿರುಳೆನ್ನದೇ, ಸಾವಿಗೂ ಭಯಪಡದೇ ಶುಚಿಗೊಳಿಸುವ ಕಾರ್ಯದಲ್ಲಿ ನಿರತರಾಗಿರುವ ಪೌರ ಕಾರ್ಮಿಕರ ಬೇಡಿಕೆಯನ್ನು ಈಡೇರಿಸುವುದು ಸರ್ಕಾರದ ಆದ್ಯ ಕರ್ತವ್ಯ ಎಂದು ಪೌರ ಕಾರ್ಮಿಕರ ಮಹಾ ಸಂಘದ ರಾಜ್ಯಾಧ್ಯಕ್ಷ ನಾರಾಯಣ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಡಾ. ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನ್‌ ರಾಮ್‌ ಜಯಂತಿ ಹಾಗೂ ಪೌರ ಕಾರ್ಮಿಕರ ಮಹಾಸಂಘದ ಜಿಲ್ಲಾ ಘಟಕ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸ್ವಚ್ಛತಾ ದೃಷ್ಟಿಯಿಂದ ದುಡಿಯುತ್ತಿರುವ ಪೌರ ಕಾರ್ಮಿಕರಿಗೆ ಅಧಿಕಾರಿಗಳು ಹೆಚ್ಚು ಕಾಳಜಿ ವಹಿಸುತ್ತಿರಲಿಲ್ಲ. ಕಾರ್ಮಿಕರ ಕಷ್ಟ, ಸುಖ ಹಾಗೂ ಸವಲತ್ತು ಒದಗಿಸಲು ಜಿಲ್ಲಾ ಹಾಗೂ ರಾಜ್ಯಾದ್ಯಂತ ಎಂದಿಗೂ ಪ್ರಯತ್ನಿಸಿಲ್ಲ ಎಂದರು.

ಇಂದಿಗೂ ಹಲವಾರು ಜಿಲ್ಲೆಗಳ ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆಗಳಲ್ಲಿ ಪೌರ ಸೇವಕರು ಕಡಿಮೆ ವೇತನದಲ್ಲಿ ಗುತ್ತಿಗೆ ನೌಕರರಾಗಿ ದುಡಿಯುತ್ತಿದ್ದಾರೆ. ಈ ಪದ್ಧತಿ ಹೋಗಲಾಡಿಸಿ ಶಾಶ್ವತ ಕೆಲಸ, ನೆಮ್ಮದಿ ಹಾಗೂ ಸದೃಢ ಆರೋಗ್ಯದ ನಿಟ್ಟಿನಲ್ಲಿ ಹೋರಾಟ ರೂಪಿಸುವ ಮೂಲಕ ಪೌರ ಕಾರ್ಮಿಕರಿಗೆ ಬೆನ್ನೆಲುಬಾಗಿ ನಿಲ್ಲುವುದಾಗಿ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಸಮಾಜದ ಯಾವುದೇ ಕಾರ್ಯಕ್ರಮಗಳಲ್ಲಿ ಪೌರ ನೌಕರರ ಸೇವೆ ಅತ್ಯವಶ್ಯಕ. ದುಡಿಮೆಗೆ ತಕ್ಕ ಪ್ರತಿಫಲ ಸಿಗಲೇಬೇಕು. ಆ ನಿಟ್ಟಿನಲ್ಲಿ ನೌಕರರ ಜೊತೆ ಒಬ್ಬ ಸಹೋದರನಾಗಿ ಸಾಮಾಜಿಕ, ಆರ್ಥಿಕವಾಗಿ ಸಹಕಾರ ನೀಡುವ ಮೂಲಕ ಕೈ ಜೋಡಿಸುತ್ತೇನೆ ಎಂದು ಹೇಳಿದರು.

ಬಿ.ಆರ್.ಅಂಬೇಡ್ಕರ್‌ ಹೇಳಿರುವ ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮೂರು ಅಂಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅನ್ಯಾಯದ ವಿರುದ್ಧ ಸಂಘಟನಾತ್ಮಕವಾಗಿ ತಯಾರಾಗಿ ನ್ಯಾಯಕ್ಕಾಗಿ ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ನ್ಯಾಯಾಧೀಶರಾದ ವಿ. ಹನುಮಂತಪ್ಪ ಮಾತನಾಡಿ, ಅಂಬೇಡ್ಕರ್ ಮತದಾನ ಹಕ್ಕನ್ನು ನೀಡಿ ರಾಷ್ಟ್ರದ ಪ್ರಜೆಗಳು ಸೂಕ್ತ ನಾಯಕರನ್ನು ಆರಿಸುವ ಸಲುವಾಗಿ ಪ್ರಜೆಗಳನ್ನು ಆಳ್ವಿಕೆಯ ಒಂದು ಭಾಗವಾಗಿಸಿದರು ಎಂದರು.

ಸಂಘದ ನೂತನ ಜಿಲ್ಲಾಧ್ಯಕ್ಷ ಮುರುಗೇಶ್, ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ದಸಂಸ ರಾಜ್ಯ ಸಂಚಾಲಕ ತರೀಕೆರೆ ಎನ್.ವೆಂಕಟೇಶ್, ನಗರಸಭಾ ಸದಸ್ಯರಾದ ಮುನೀರ್‌ ಅಹ್ಮದ್, ಗೋಪಿ, ರಿಯಾಜ್, ಮಾಜಿ ಸದಸ್ಯ ಸಿ.ನರಸಿಂಹ, ಮೈಸೂರು ವಿಭಾಗೀಯ ಸಂಚಾಲಕ ಕೀರ್ತಿಕುಮಾರ್, ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ, ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷ್ಮಣ್, ವಕೀಲರ ಸಂಘದ ಕಾರ್ಯದರ್ಶಿ ಅನಿಲ್ ಕುಮಾರ್, ಹೊನ್ನೇಶ್, ರಮೇಶ್, ಅನಿಲ್‌ ಆನಂದ್, ಮೋಹನ್ ಹಾಜರಿದ್ದರು.

ಪದಾಧಿಕಾರಿಗಳು :

ಮುರುಗೇಶ್ (ಅಧ್ಯಕ್ಷ), ಸಿ.ಬಿ.ನಾಗರಾಜ್ (ಗೌರವಾಧ್ಯಕ್ಷ), ಪ್ರವೀಣ್‌ಕುಮಾರ್ (ಪ್ರಧಾನ ಕಾರ್ಯದರ್ಶಿ), ದೇವೇಂದ್ರ, ಹನುಮಂತ, ನಾಗರಾಜ್, ಬಿ.ಎ.ಭರತ್ (ಉಪಾಧ್ಯಕ್ಷರು), ವೆಂಕಟರಾಮ್ (ಸಹ ಕಾರ್ಯದರ್ಶಿ), ಪ್ರದೀಪ್ (ಖಜಾಂಚಿ), ಮಹಿಳಾ ಘಟಕ : ಸುಮಾ (ಅಧ್ಯಕ್ಷೆ), ಗೀತಾ (ಪ್ರಧಾನ ಕಾರ್ಯದರ್ಶಿ), ಸುನೀತಾ, ಕಣ್ಣಮ್ಮ (ಉಪಾಧ್ಯಕ್ಷರು), ಶೈಲಮ್ಮ, ಸರಸ್ವತಿ (ಸಹ ಕಾರ್ಯದರ್ಶಿ), ಜ್ಯೋತಿ (ಖಜಾಂಚಿ).