ಕನ್ನಡ ನಾಡಿನ ಇತಿಹಾಸ, ಪರಂಪರೆ ಹಾಗೂ ಸಂಸ್ಕೃತಿಯನ್ನು ಯುವಪೀಳಿಗೆಗೆ ಪರಿಚಯಿಸುವ ಇಂತಹ ಕಾರ್ಯಕ್ರಮಗಳು ಶ್ಲಾಘನೀಯ. ಸ್ಪರ್ಧಾರ್ಥಿಗಳು ಕನ್ನಡದ ಶ್ರೀಮಂತ ಪರಂಪರೆಯ ಅರಿವು ಬೆಳೆಸಿಕೊಳ್ಳಬೇಕು.
ಹುಬ್ಬಳ್ಳಿ:
ಕನ್ನಡ ನಾಡು-ನುಡಿಗೆ ಋಣಿಯಾಗಿರುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕಿ ಡಾ. ಸುಧಾ ಕೌಜಗೇರಿ ಹೇಳಿದರು.ನಗರದ ಕೆಎಲ್ಇ ಸಂಸ್ಥೆಯ ಜ. ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದ ಐಕ್ಯೂಎಸಿ ಹಾಗೂ ಕನ್ನಡ ವಿಭಾಗದ ವತಿಯಿಂದ ಮಂಗಳವಾರ ಆಯೋಜಿಸಿದ್ದ ರಾಜ್ಯಮಟ್ಟದ "ಕನ್ನಡ ಗತವೈಭವ " ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಕೆಎಲ್ಇ ಸಂಸ್ಥೆಯ ಸಪ್ತ ಋಷಿಗಳ ಆಶಯದಂತೆ ತನು, ಮನ, ಧನದಿಂದ ಶ್ರಮಿಸುವ ಶಿಕ್ಷಕ ವರ್ಗದ ಸಹಕಾರದಿಂದ ಇಂತಹ ರಾಜ್ಯಮಟ್ಟದ ಕನ್ನಡ ಸಾಂಸ್ಕೃತಿಕ ಉತ್ಸವವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿದೆ. ಕನ್ನಡ ನಾಡಿನ ಇತಿಹಾಸ, ಪರಂಪರೆ ಹಾಗೂ ಸಂಸ್ಕೃತಿಯನ್ನು ಯುವಪೀಳಿಗೆಗೆ ಪರಿಚಯಿಸುವ ಇಂತಹ ಕಾರ್ಯಕ್ರಮಗಳು ಶ್ಲಾಘನೀಯ. ಸ್ಪರ್ಧಾರ್ಥಿಗಳು ಕನ್ನಡದ ಶ್ರೀಮಂತ ಪರಂಪರೆಯ ಅರಿವು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಎಸ್.ಎಲ್. ಪಾಟೀಲ, ಸ್ಪರ್ಧಾತ್ಮಕ ಯುಗದಲ್ಲಿಯೂ ಕನ್ನಡ ಭಾಷೆಯ ಪ್ರಸ್ತುತತೆಯನ್ನು ಉಳಿಸಿ-ಬೆಳೆಸುವಲ್ಲಿ ಗ್ರಾಮೀಣ ಜನರ ಕೊಡುಗೆ ಮಹತ್ವದ್ದಾಗಿದೆ. ನಾವೆಲ್ಲರೂ ಕನ್ನಡ ನಾಡು-ನುಡಿಗೆ ಋಣಿಯಾಗಿದ್ದು, ಭಾಷೆಯ ಗೌರವ ಮತ್ತು ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ಅತಿಥಿಯಾಗಿ ಪಾಲ್ಗೊಂಡಿದ್ದ ನಿವೃತ್ತ ಪ್ರಾಚಾರ್ಯ ಡಾ. ಲಿಂಗರಾಜ ಮುಳ್ಳಳ್ಳಿ, ಸಂಯೋಜಕಿ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ನೇತ್ರಾವತಿ ಗಬ್ಬೂರ ಮಾತನಾಡಿದರು. ಇದೇ ವೇಳೆ ಡಾ. ಸುಧಾ ಕೌಜಗೇರಿ ಹಾಗೂ ಡಾ. ಲಿಂಗರಾಜ ಮುಳ್ಳಳ್ಳಿ ಅವರನ್ನು ಸನ್ಮಾನಿಸಲಾಯಿತು.ಉತ್ಸವದಲ್ಲಿ ವಿಡಿಯೋಗ್ರಫಿ, ಗುಂಪು ನೃತ್ಯ, ಆಶುಭಾಷಣ, ವೈಯಕ್ತಿಕ ಗಾಯನ, ವೇಷಭೂಷಣ ಹಾಗೂ ರಂಗೋಲಿ ಸೇರಿದಂತೆ ಆರು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಮಹಾವಿದ್ಯಾಲಯಗಳ 180 ವಿದ್ಯಾರ್ಥಿಗಳು, 35 ಮಹಾವಿದ್ಯಾಲಯಗಳ ಪ್ರತಿನಿಧಿಗಳಾಗಿ ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಎಸ್.ಎಲ್. ಪಾಟೀಲ ವಿದ್ಯಾರ್ಥಿಗಳ ಪ್ರತಿಭೆಯನ್ನು ಶ್ಲಾಘೀಸಿದರು. ವಿಜೇತರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ನೀತಿನ್ ಎಸ್.ಎನ್, ಆಂಗ್ಲ ವಿಭಾಗದ ಮುಖ್ಯಸ್ಥ ಡಾ. ಗುರು ಪಾಟೀಲ, ಪ್ರೊ. ನಾಗನಗೌಡ ದೊಡ್ಡಗೌಡ, ಪ್ರೊ. ಪೂಜಾ ನಲವಡಿ, ಡಾ. ಪ್ರೀತಿ ಪಾಟೀಲ, ಪ್ರೊ. ಮ್ಯಾಗ್ಲಿನಾ ಕ್ರೂಜ್ ಸೇರಿದಂತೆ ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿದ್ದರು.