ನಮ್ಮ ನ್ಯಾಯಾಂಗ ವ್ಯವಸ್ಥೆಯು ಸಂವಿಧಾನದ ಆಶಯದಂತೆ ಕಾರ್ಯ ನಿರ್ವಹಿಸುತ್ತಿದೆ. ವೈವಿಧ್ಯತೆಯಲ್ಲಿ ಏಕತೆ ಇರುವ ದೇಶ ನಮ್ಮದು.
ಕನ್ನಡಪ್ರಭ ವಾರ್ತೆ ಮೈಸೂರು
ಸಂವಿಧಾನದ ಆಶಯ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರ ಕನಸು ನನಸು ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಕರ್ನಾಟಕ ರಾಜ್ಯ ಕಾನೂನು ವಿವಿ ಕುಲಪತಿ ಪ್ರೊ.ಸಿ. ಬಸವರಾಜು ತಿಳಿಸಿದರು.ನಗರದ ಜಯಲಕ್ಷ್ಮೀಪುರಂನಲ್ಲಿರುವ ಮಹಾಜನ ಕಾನೂನು ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಸಾಂವಿಧಾನಿಕ ಆಡಳಿತ ಮತ್ತು ನ್ಯಾಯಾಂಗ- ಮುಂದಿನ ಹಾದಿ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.ನಮ್ಮ ನ್ಯಾಯಾಂಗ ವ್ಯವಸ್ಥೆಯು ಸಂವಿಧಾನದ ಆಶಯದಂತೆ ಕಾರ್ಯ ನಿರ್ವಹಿಸುತ್ತಿದೆ. ವೈವಿಧ್ಯತೆಯಲ್ಲಿ ಏಕತೆ ಇರುವ ದೇಶ ನಮ್ಮದು. ಭಾರತೀಯರ ಮನೋಭಾವ ಒಂದಾಗಿರಬೇಕು. ಸಂವಿಧಾನದ ಆಶಯಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದರುನಮ್ಮಲ್ಲಿದ್ದ ಅಸಮಾನತೆ, ತಾರತಮ್ಯ, ಜಾತಿ ವ್ಯವಸ್ಥೆ ಬಳಸಿಕೊಂಡು ಪರಕೀಯರು ನೂರಾರು ವರ್ಷ ದೇಶ ಆಳಿದರು. ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿತು. ಈ ಹಿನ್ನೆಲೆಯ ಅರಿವು ಇದ್ದಿದ್ದರಿಂದಲೇ ಸಂವಿಧಾನದ ಕರಡು ಸಮಿತಿ ಅಧ್ಯಕ್ಷರಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರು, ಸಮ ಸಮಾಜ ನಿರ್ಮಾಣದ ಆಶಯದ ಸಂವಿಧಾನವನ್ನು ನಮಗೆ ಕೊಟ್ಟರು ಎಂದು ಅವರು ತಿಳಿಸಿದರು.ಒರಿಸ್ಸಾ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮಾತನಾಡಿ, ಸಾವಿರಾರು ನ್ಯಾಯಾಧೀಶರು ದೇಶದಾದ್ಯಂತ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲವೆಡೆ ರಾಜಕೀಯ, ಕಾರ್ಯಾಂಗದ ಒತ್ತಡ ನ್ಯಾಯಾಂಗದ ಅನುಭವಕ್ಕೂ ಬಂದಿರಬಹುದು. ಆದರೆ, ನ್ಯಾಯಾಂಗ ಸ್ವಾತಂತ್ರ್ಯ ವಿಷಯದಲ್ಲಿ ಎಂದಿಗೂ ಯಾವುದೇ ರಾಜಿಯಿಲ್ಲ ಎಂದು ಹೇಳಿದರು.ಮಹಾಜನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಟಿ. ಮುರುಳೀಧರ್ ಭಾಗವತ್, ಕಾರ್ಯದರ್ಶಿ ಡಾ.ಟಿ. ವಿಜಯಲಕ್ಷ್ಮೀ ಮುರುಳೀಧರ್, ಆಡಳಿತಾಧಿಕಾರಿ ಪ್ರೊ.ಪಿ. ಸರೋಜಮ್ಮ, ಪ್ರಾಂಶುಪಾಲೆ ಕೆ. ಸೌಮ್ಯಾ ಇದ್ದರು.