ಸಾರಾಂಶ
ಕೊಪ್ಪಳ: ರೈಲ್ವೆ ಕಾಮಗಾರಿ ಸಂದರ್ಭದಲ್ಲಿ ಹಾನಿಗೊಳಗಾದ ಸರ್ಕಾರಿ ಕಟ್ಟಡಗಳನ್ನು ರೈಲ್ವೆ ಇಲಾಖೆಯಿಂದಲೇ ಮರು ನಿರ್ಮಿಸಿ ಕೊಡಬೇಕು ಎಂದು ಜಿಲ್ಲಾಧಿಕಾರಿ ನಳಿನ್ ಅತುಲ್ ಸೂಚಿಸಿದರು.ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ಜಮೀನು/ ನಿವೇಶನಗಳ ಅವಶ್ಯಕತೆ ಮತ್ತು ಸಮಸ್ಯೆಗಳ ಕುರಿತು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಂತರ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಗದಗ-ವಾಡಿ ರೈಲ್ವೆ ಮಾರ್ಗ ನಿರ್ಮಾಣ ವೇಳೆಯಲ್ಲಿ ಕುಷ್ಟಗಿ ಪಟ್ಟಣದ ಶಾಲೆಯೊಂದಕ್ಕೆ ಹಾನಿಯಾಗಿದೆ. ಹಾನಿ ವೆಚ್ಚ ಭರಿಸುವ ಬದಲಾಗಿ ನಮಗೆ ಹೊಸ ಕಟ್ಟಡ ನಿರ್ಮಿಸಿಕೊಡಿ. ಇದರಂತೆ ಇನ್ನು ಮುಂದೆಯೂ ಯಾವುದೇ ಸರ್ಕಾರಿ ಕಟ್ಟಡಕ್ಕೆ ಕಾಮಗಾರಿ ಸಂದರ್ಭದಲ್ಲಿ ಹಾನಿಯಾದಲ್ಲಿ ರೈಲ್ವೆ ಇಲಾಖೆಯೇ ಕಟ್ಟಡ ಮರು ನಿರ್ಮಿಸಿಕೊಡಬೇಕು ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆಯನ್ನು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ನೀಡಿದರು.ಜಿಲ್ಲೆಯ ಕೊಪ್ಪಳ ಮತ್ತು ಕುಷ್ಟಗಿ ತಾಲೂಕುಗಳಲ್ಲಿ ಶಾಶ್ವತ ಹೆಲಿಪ್ಯಾಡ್ ನಿರ್ಮಾಣಕ್ಕೆ ಜಮೀನು ಗುರುತಿಸಿ ವರದಿ ತಯಾರಿಸಲು ಆಯಾ ತಹಶೀಲ್ದಾರರು ಕೂಡಲೇ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ಸ್ಥಾಪಿಸಲು ಜಮೀನು ಗುರುತಿಸಬೇಕು. ವಸತಿ ಶಿಕ್ಷಣ ಸಂಸ್ಥೆಗಳ ಅಧೀನದಲ್ಲಿ ಬರುವ ವಸತಿ ಶಾಲೆ, ವಸತಿನಿಲಯಗಳ ಕಟ್ಟಡ ನಿರ್ಮಾಣಕ್ಕಾಗಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕಟ್ಟಡ ನಿರ್ಮಾಣಕ್ಕಾಗಿ ಆಯಾ ಇಲಾಖೆಗಳಿಂದ ಬರುವ ಪ್ರಸ್ತಾವನೆಗಳನ್ನು ಪರಿಶೀಲಿಸಿ ಜಮೀನು, ನಿವೇಶನ ಒದಗಿಸಲು ಕ್ರಮ ಕೈಗೊಳ್ಳಬೇಕು. ಈಗಾಗಲೇ ಶಾಲಾ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿಗಳನ್ನು ಯಥಾರೀತಿ ಮುಂದುವರಿಸಿ ಎಂದು ಜಿಲ್ಲಾಧಿಕಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಲ ಶುದ್ಧೀಕರಣ ಘಟಕ, ಪಶು ಚಿಕಿತ್ಸಾಲಯ, ಹೊಸ ಪದವಿ ಪೂರ್ವ ಕಾಲೇಜು, ಶಾಲಾ ಕಟ್ಟಡಗಳ ನಿರ್ಮಾಣ, ತ್ಯಾಜ್ಯ ನೀರು ಶುದ್ಧೀಕರಣ ಮತ್ತು ಘನ ತ್ಯಾಜ್ಯ ವಿಲೇವಾರಿ ಘಟಕ, ಬಸ್ ನಿಲ್ದಾಣ, ಬಸ್ ಡಿಪೋ, ವಿದ್ಯುತ್ ಉಪ ಘಟಕಗಳ ಸ್ಥಾಪನೆ, ಜಿಲ್ಲೆಯ ಹೋಬಳಿ ಮಟ್ಟದ ಕ್ರೀಡಾ ಚಟುವಟಿಕೆಗಳಿಗೆ ಜಮೀನು ಸೇರಿದಂತೆ ಇತರ ಇಲಾಖೆಗಳ ಕಚೇರಿ ಅಥವಾ ನೌಕರರ ವಸತಿಗೃಹಗಳ ನಿರ್ಮಾಣಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು ಅವಶ್ಯವಿರುವ ಜಮೀನು ಗುರುತಿಸಿ, ಆಯಾ ತಾಲೂಕುಗಳ ತಹಶೀಲ್ದಾರರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಬಳಿಕ ವಿವರದ ಪ್ರಸ್ತಾವನೆ ಸಲ್ಲಿಸಬೇಕು. ಯಾವುದೇ ಸಮಸ್ಯೆಗಳಿದ್ದಲ್ಲಿ ಅದನ್ನು ಪುನಃ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.ಸಭೆಯಲ್ಲಿ ಸಹಾಯಕ ಆಯುಕ್ತ ಕ್ಯಾ.ಮಹೇಶ್ ಮಾಲಗಿತ್ತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ತಹಶೀಲ್ದಾರ ವಿಠ್ಠಲ್ ಚೌಗಲಾ, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕುಗಳ ತಹಶೀಲ್ದಾರರು, ಭೂ ಸ್ವಾಧೀನ ಕಚೇರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.