ಸಾರಾಂಶ
ಹಿರಿಯೂರು: ಮಹನೀಯರನ್ನು ಕೇವಲ ಜಯಂತಿಗಳಲ್ಲಿ ಮಾತ್ರ ನೆನಪಿಸಿಕೊಳ್ಳುವುದು, ಒಂದು ವರ್ಗಕ್ಕೆ ಮಾತ್ರ ಸೀಮಿತಗೊಳಿಸುವುದು ದುರಂತದ ಸಂಗತಿ ಎಂದು ತಾಲೂಕು ಕುಂಬಾರ ಸಂಘದ ಮಾಜಿ ಅಧ್ಯಕ್ಷ ಕೇಶವಮೂರ್ತಿ ಅಭಿಪ್ರಾಯಪಟ್ಟರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಮಂಗಳವಾರ ನಡೆದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಎಲ್ಲಾ ದಾರ್ಶನಿಕರಂತೆ ಸರ್ವಜ್ಞರನ್ನು ಸಹ ಒಂದು ವರ್ಗಕ್ಕೆ ಸೀಮಿತಗೊಳಿಸಿ ಜಯಂತೋತ್ಸವ ಆಚರಿಸುವುದು ಶೋಚನೀಯವಾದುದು. ಸರ್ವಜ್ಞರನ್ನು ಆರಾಧಿಸುವ ಕುಂಬಾರ ಸಮಾಜಕ್ಕೆ ಎಲ್ಲಾ ಸರ್ಕಾರಗಳು ಕೊಟ್ಟಿರುವ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸವಲತ್ತುಗಳ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಸರ್ಕಾರದ ಸವಲತ್ತುಗಳ ನಿರೀಕ್ಷೆ ಇಟ್ಟುಕೊಳ್ಳದೆ ಕುಂಬಾರ ಸಮಾಜ ತಮ್ಮ ಮಕ್ಕಳನ್ನು ಹೆಚ್ಚೆಚ್ಚು ವಿದ್ಯಾವಂತರನ್ನಾಗಿ ಮಾಡುವತ್ತ ಗಮನ ಹರಿಸಿ. ಆಗ ಮಾತ್ರ ಯಾವ ಸವಲತ್ತಿನ ಹಂಗಿಲ್ಲದೆ ಬದುಕಬಹುದು ಮತ್ತು ಸಮಾಜದ ಏಳ್ಗೆಯು ಸಾಧ್ಯವಾಗುತ್ತದೆ ಎಂದರು.
ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಆರ್.ಲೇಪಾಕ್ಷಿ ಮಾತನಾಡಿ, 16ನೇ ಶತಮಾನದ ದಾರ್ಶನಿಕ ಸರ್ವಜ್ಞರು ತ್ರಿಪದಿ, ವಚನಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದಲು ಪ್ರಯತ್ನಿಸಿದರು. ಅತ್ಯಂತ ಸರಳವಾಗಿ ಬದುಕಿದ ಅವರು ಏಳು ಸಾವಿರಕ್ಕೂ ಹೆಚ್ಚಿನ ವಚನ ಹಾಗೂ ಎರಡು ಸಾವಿರಕ್ಕೂ ಹೆಚ್ಚು ತ್ರಿಪದಿಗಳನ್ನು ರಚಿಸಿದ್ದಾರೆ. ಜಯಂತಿಗಳಲ್ಲಿ ಮಾತ್ರ ಅವರ ಜಪ ಮಾಡಿ ಸೀಮಿತ ವರ್ಗದ ಕಾರ್ಯಕ್ರಮವನ್ನಾಗಿಸದೇ ಅವರ ಚಿಂತನೆಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಿದೆ ಎಂದರು.ಈ ಸಂದರ್ಭದಲ್ಲಿ ಶಿರಸ್ತೇದಾರ್ ತಿಪ್ಪೇಸ್ವಾಮಿ, ದೈಹಿಕ ಶಿಕ್ಷಣ ಸಂಯೋಜಕ ಕೆ.ಎಂ.ಮನೋಹರ್, ಸಿಡಿಪಿಓ ರಾಘವೇಂದ್ರ, ಬಿಸಿಎಂ ಇಲಾಖೆಯ ಕೃಷ್ಣಮೂರ್ತಿ, ರಾಜಸ್ವ ನೀರಿಕ್ಷಕ ವರದರಾಜು, ವೇದಾವತಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರಸನ್ನ ಕುಮಾರ್, ರೇಷ್ಮೆ ಇಲಾಖೆ ಈಶ್ವರಪ್ಪ, ಆರೋಗ್ಯ ನೀರಿಕ್ಷಕ ಅಶೋಕ್, ಕುಂಬಾರ ಸಂಘದ ಪ್ರಧಾನ ಕಾರ್ಯದರ್ಶಿ ಸಣ್ಣ ಭೀಮಣ್ಣ, ಉಪಾಧ್ಯಕ್ಷ ರಂಗಸ್ವಾಮಿ, ಖಜಾಂಚಿ ಮಂಜುನಾಥ್, ಕಲ್ಪನಾ, ರಾಧಾ, ಕೆಂಚಪ್ಪ ಜಯಲಕ್ಷ್ಮಿ, ಶ್ರೀರಂಗಮ್ಮ ಮುಂತಾದವರು ಹಾಜರಿದ್ದರು.