ಸಾರಾಂಶ
ದಾಬಸ್‌ಪೇಟೆ : ನಮ್ಮ ಕಾಂಗ್ರೆಸ್ ಸರ್ಕಾರ ರಚನೆಯಾದ ಎರಡು, ಮೂರು ತಿಂಗಳಿನಿಂದ ಬಿಜೆಪಿಯವರು ನಮ್ಮ ಪಕ್ಷದ ಶಾಸಕರಿಗೆ ಆಸೆ- ಆಮಿಷ ಒಡ್ಡುವ ಪ್ರಯತ್ನ ಮಾಡುತ್ತಿರುವುದು ಸತ್ಯ. ಆದರೆ ಆ ಪ್ರಯತ್ನದಲ್ಲಿ ಯಶಸ್ಸು ಸಿಗುವುದಿಲ್ಲ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ರಚನೆಯಾದ ಒಂದೂವರೆ ವರ್ಷದಿಂದ ಸರ್ಕಾರ ಬೀಳಿಸಲು ಅನೇಕ ಪ್ರಯತ್ನಗಳನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಕಳೆದ ನಾಲ್ಕೈದು ತಿಂಗಳ ಹಿಂದೆ ಮಂತ್ರಿ ಹಾಗೂ ರೇಟ್ ಫಿಕ್ಸ್ ಮಾಡುವಂತಹ ಆಸೆ ತೋರಿಸಿ ಬಿಜೆಪಿಯವರು ಕಾಂಗ್ರೆಸ್ ಶಾಸಕರ ಸಂಪರ್ಕ ಮಾಡುತ್ತಿರುವುದು ಸತ್ಯ. ಆದರೆ ನಮ್ಮ ಯಾವ ಶಾಸಕರೂ ಆಮಿಷಕ್ಕೆ ಒಳಗಾಗಿಲ್ಲ, 136 ಕಾಂಗ್ರೆಸ್ ಶಾಸಕರು ಸಿಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಜೊತೆಗೆ ಭದ್ರವಾಗಿ ನಿಂತಿದ್ದೇವೆ ಎಂದರು.
ನನಗೆ ಆಫರ್ ಕೊಟ್ಟವರು ಕಾಂಗ್ರೆಸ್ ಗೆ :
ನನಗೆ ಈಗ ಯಾರು ಪ್ರಯತ್ನ ಮಾಡಿಲ್ಲ, ಆದರೆ ಈ ಹಿಂದೆ ಒಬ್ಬರು ಆಫರ್ ನೀಡುವ ಪ್ರಯತ್ನ ಮಾಡುತ್ತಿದ್ದರು. ಸರಿಯಾದ ಉತ್ತರ ನೀಡಿದ್ದೆ. ಆಗ ನಿನ್ನ ಬಳಿ ನಾನು ಮಾತನಾಡಲು ಆಗಲ್ಲ ಬಿಡಪ್ಪಾ ಎಂದು ಸುಮ್ಮನಾಗಿದ್ದರು. ಅವರೇ ಉಪಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ಗೆ ಸೇರಿದ್ದಾರೆ. ಬಿಜೆಪಿ, ಜೆಡಿಎಸ್ ಕುತಂತ್ರ ನಡೆಯಲ್ಲ ಎಂದರು.
ಸಿಎಂ ಬದಲಾವಣೆ ಇಲ್ಲ:
ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿ ಸುಭದ್ರ ಆಡಳಿತ ನೀಡುತ್ತಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ, ಈ ಸಮಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆ ಉದ್ಭವ ಆಗುವುದಿಲ್ಲ. ನನಗೆ ತಿಳಿದಂತೆ ಚುನಾವಣೆ ನಂತರ ಬದಲಾವಣೆ ಎಂಬ ಚರ್ಚೆಯೂ ಆಗಿಲ್ಲ ಎಂದರು.
ಸಿ.ಪಿ.ಯೋಗೇಶ್ವರ ಗೆಲುವು ನಿಶ್ಚಿತ:
ಚನ್ನಪಟ್ಟಣ ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಗೆಲ್ಲುವುದು ನಿಶ್ಚಿತವಾಗಿದೆ. ನಾನು ಸಹ ಉಪಚುನಾಚಣೆಯಲ್ಲಿ ಜವಾಬ್ದಾರಿ ಹೊತ್ತು ಕೆಲಸ ಮಾಡಿದ್ದೇನೆ. ಇನ್ನೆರಡು ಕ್ಷೇತ್ರಗಳಲ್ಲೂ ಗೆಲ್ಲುವ ವಿಶ್ವಾಸವಿದೆ ಎಂದರು.