ಆನೆ ತುಳಿತ ಸಂಭವಿಸಿರುವುದು ದುರದೃಷ್ಟಕರ: ಸಚಿವ ಜಾರ್ಜ್‌

| Published : Nov 02 2025, 02:15 AM IST

ಸಾರಾಂಶ

ಶೃಂಗೇರಿ, ಮನುಷ್ಯನ ಜೀವ ಅತ್ಯಮೂಲ್ಯವಾದದ್ದು, ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ, ದುರದೃಷ್ಟವಶಾತ್‌ ಈ ದುರಂತ ಸಂಭವಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಹೇಳಿದರು.

- ಕೆರೆಕಟ್ಟೆ ಗ್ರಾಮದ ಕೆರೆಗದ್ದೆಯಲ್ಲಿ ಆನೆ ತುಳಿತಕ್ಕೊಳದವರ ಮನೆಗೆ ಭೇಟಿ: ಸಾಂತ್ವನ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಮನುಷ್ಯನ ಜೀವ ಅತ್ಯಮೂಲ್ಯವಾದದ್ದು, ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ, ದುರದೃಷ್ಟವಶಾತ್‌ ಈ ದುರಂತ ಸಂಭವಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಹೇಳಿದರು.

ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗೆ ಕೆರೆಕಟ್ಟೆ ಗ್ರಾಮದ ಕೆರೆಗದ್ದೆಯಲ್ಲಿ ಆನೆ ತುಳಿತಕ್ಕೊಳಗಾಗಿ ಮೃತಪಟ್ಟ ಹರೀಶ್ ಶೆಟ್ಟಿ ಮತ್ತು ಉಮೇಶ್ ಗೌಡ ಅವರ ಮನೆಗೆ ಶನಿವಾರ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.ಮನುಷ್ಯನ ಜೀವನೂ ಉಳಿಯಬೇಕು, ಪ್ರಾಣಿ ಸಂಕುಲವೂ ಉಳಿಯಬೇಕು. ಇಂದು ಆನೆಗಳ ಸಂಖ್ಯೆ, ಹುಲಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ನೈಸರ್ಗಿಕ ಸಂಪತ್ತಿನಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕಾಗಿದೆ. ನಗರೀಕರಣದಿವ್ದಾಗಿ ಅರಣ್ಯದ ವಿಸ್ತೀರ್ಣ ಕಡಿಮೆ ಆಗುತ್ತಿದೆ. ಪ್ರಾಣಿ ದಾಳಿಯಿಂದ ರಾಜ್ಯದಲ್ಲಿ 30-40 ಜನರು ಮೃತರಾಗುತ್ತಿರುವ ಘಟನೆಗಳು ಸಂಭವಿಸುತ್ತಿದೆ.

ಕುಟುಂಬದ ನಿರ್ವಹಣೆ ಮಾಡುತ್ತಿದ್ದ ಹರೀಶ್ ಶೆಟ್ಟಿ ಮತ್ತು ಉಮೇಶ್ ಗೌಡ ಮನೆಗೆ ಮೂಲವಾಗಿದ್ದರು. ಅವರು ಇಬ್ಬರು ಮಕ್ಕಳು, ಪತ್ನಿಯನ್ನು ಬಿಟ್ಟು ಹೋಗಿರುವುದು ತುಂಬಾ ನೋವಿನ ಸಂಗತಿ. ಈ ಕುಟುಂಬದ ನೋವಿನ ಜೊತೆಗೆ ಇಲಾಖೆ ಹಾಗೂ ನಾವು ಸದಾ ಇರುತ್ತೇವೆ. ಅವರ ಕಷ್ಟ ಸುಖಕ್ಕೆ ಸ್ಪಂದಿಸಲಿದ್ದೇವೆ ಎಂದರು.

ಮೃತರ ಕುಟುಂಬಕ್ಕೆ ಸರ್ಕಾರದಿಂದ ತಲಾ ₹20 ಲಕ್ಷ ನೀಡಲಾಗಿದೆ. ನಾನು ವೈಯಕ್ತಿಕವಾಗಿ 1 ಕುಟುಂಬಕ್ಕೆ ತಲಾ ₹5 ಲಕ್ಷ ಮತ್ತು ಶಾಸಕ ಟಿ.ಡಿ. ರಾಜೇಗೌಡರಿಂದ ಎರಡು ಕುಟುಂಬಕ್ಕೆ ತಲಾ ಒಂದು ಲಕ್ಷವನ್ನು ಶಾಸಕರ ಮೂಲಕ ತಲುಪಿಸಲಾಗುತ್ತದೆ. ಖಾಯಂ ಉದ್ಯೋಗ ಕಲ್ಪಿಸಲು ಅವಕಾಶವಿಲ್ಲ ದಿರುವುದರಿಂದ ಕುಟುಂಬದ ಒಬ್ಬರಿಗೆ ಅರಣ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ತಕ್ಷಣ ಉದ್ಯೋಗ ನೀಡಲು ಸೂಚಿಸಲಾಗಿದೆ. ಪರಿಹಾರದ ಧನ ಸದ್ಬಳಕೆ ಮಾಡಿಕೊಳ್ಳಿ, ಜೀವ ತಂದುಕೊಡಲು ಸಾಧ್ಯವಾಗುವುದಿಲ್ಲ. ಅವರ ಕುಟುಂಬಕ್ಕೆ ಸಾಂತ್ವನ ಮಾತ್ರ ಹೇಳಿ ಪರಿಹಾರ ನೀಡಬಹುದು ಎಂದರು.

ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನಮ್ಮ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕಾರ್ಯೋನ್ಮುಖರಾಗಿದ್ದಾರೆ. ಆನೆ ಯಾವ ಸಮಯದಲ್ಲಿ ಬರುತ್ತವೆ. ಹೇಗೆ ಬರುತ್ತವೆ, ಎಂದು ಗೊತ್ತಾಗೋಲ್ಲ. ಅರಣ್ಯ ಪ್ರದೇಶ ಜಾಸ್ತಿ ಇರುವುದರಿಂದ ವನ್ಯ ಜೀವಿಗಳೊಂದಿಗೆ ಸಹಬಾಳ್ವೆ ಮಾಡಿ ಕೊಳ್ಳುವ ಕಲೆ ಕರಗತ ಮಾಡಿಕೊಳ್ಳುವ ಅವಶ್ಯಕತೆ ಇದೆ. ಎಲ್ಲರೂ ಸಹಬಾಳ್ವೆ ಬದುಕನ್ನು ಮೈಗೂಡಿಸಿಕೊಳ್ಳಬೇಕು ಎಂದರು.ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಅರಣ್ಯ ಇಲಾಖೆ ಸಚಿವರು ಮೃತರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾನವೀಯತೆಯಿಂದ ಮಾಡಿದ್ದಾರೆ. ಶುಕ್ರವಾರ ಇಬ್ಬರನ್ನು ತುಳಿದು ಸಾಯಿಸಿದ ಆನೆಯನ್ನು ಹಿಡಿಯಲು ಸರ್ಕಾರದಿಂದ ಅನುಮತಿ ಸಿಕ್ಕಿದೆ. ಇಂದು ರಾತ್ರಿ ಕೊಡಗಿನ ದುಬಾರೆ ಮತ್ತು ಶಿವಮೊಗ್ಗದ ಸಕ್ರೆಬೈಲಿನಿಂದ 6 ಕುಮ್ಕಿ ಆನೆಗಳು ಮತ್ತು ಆನೆ ಕಾರ್ಯಪಡೆ ಸಿಬ್ಬಂದಿ ಶನಿವಾರ ರಾತ್ರಿ ಯಿಂದ ಬಿಡುಬಿಡಲಿದ್ದಾರೆ ಎಂದರು.ಈ ಸಂದರ್ಭದಲ್ಲಿ ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ ಅಂಶುಮಂತ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಎಸ್‌ಪಿ ವಿಕ್ರಮ್ ಅಮ್ಟೆ, ಮಂಗಳೂರು ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಳನ್, ವನ್ಯಜೀವಿ ವಿಭಾಗದ ಡಿಎಫ್‌ಓ ಶಿವರಾಮ್ ಬಾಬು, ಎಸಿಎಫ್ ಮೋಹನ್ ಕುಮಾರ್, ವಲಯ ಅರಣ್ಯ ಸಂರಕ್ಷಣಾಧಿಕಾರಿ ಮಧುಕರ್, ವನ್ಯಜೀವಿ ವಲಯ ಅರಣ್ಯ ಸಂರಕ್ಷಣಾಧಿಕಾರಿ ಅನಿಲ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಭಟ್, ಪುಟ್ಟಪ್ಪ ಹೆಗ್ಡೆ, ದಿನೇಶ್ ಹೆಗ್ಡೆ, ಎಂ.ಎಚ್ ನಟರಾಜ್, ನೂತನ್ ಕುಮಾರ್, ಭಾಸ್ಕರ್ ನಾಯ್ಕ, ವೆಂಕಟೇಶ್ ಕುರದಾಮನೆ, ರಾಜೇಶ್ ದ್ಯಾವಂಟು, ಜನಪ್ರತಿನಿಧಿಗಳು, ಕೆರೆಕಟ್ಟೆ ಗ್ರಾಮದ ಸ್ಥಳೀಯ ಮುಖಂಡರು, ಮೃತರ ಕುಟುಂಬಸ್ಥರು, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿ, ಸ್ಥಳೀಯ ಕಾಂಗ್ರೆಸ್, ಬಿಜೆಪಿ ಮುಖಂಡರು ಇದ್ದರು.

-- ಬಾಕ್ಸ್‌ -

17 ಕುಟುಂಬಗಳ ಸ್ಥಳಾಂತರಿಸಲು ಡಿಸಿಗೆ ಸೂಚನೆಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿ ಜನರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿದ್ದು, ಪುನರ್ವಸತಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ. ಅಪಾಯದಲ್ಲಿರುವ ಕೆರೆಗದ್ದೆಯ 17 ಕುಟುಂಬವನ್ನು ಕೂಡಲೇ ಪರಿಹಾರ ನೀಡಿ ತಕ್ಷಣ ಸ್ಥಳಾಂತರಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ನ.17ಕ್ಕೆ ಕೆರೆಕಟ್ಟೆಯಲ್ಲಿ ಜನ ಸಂಪರ್ಕ ಸಭೆ ಆಯೋಜಿಸಲಾಗುತ್ತದೆ. ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಎಲ್ಲಾ ಕುಟುಂಬ ಸ್ಥಳಾಂತರಿಸಲು ₹300 ಕೋಟಿ ಅಗತ್ಯವಿದ್ದು, ಕೇಂದ್ರದ ಸಹಭಾಗಿತ್ವ ಅಗತ್ಯವಿದೆ. ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಹೇಳಿದರು. 1 ಕೆಸಿಕೆಎಂ 3ಕಾಡಾನೆ ತುಳಿತದಿಂದ ಮೃತಪಟ್ಟಿರುವ ಶೃಂಗೇರಿ ತಾಲೂಕಿನ ಕೆರೆಗದ್ದೆ ಗ್ರಾಮದ ಹರೀಶ್‌ ಶೆಟ್ಟಿ ಹಾಗೂ ಉಮೇಶ್‌ ಗೌಡ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಹಾಗೂ ಶಾಸಕ ಟಿ.ಡಿ. ರಾಜೇಗೌಡ, ಡಿಸಿ ಮೀನಾ ನಾಗರಾಜ್‌, ಎಸ್ಪಿ ಡಾ. ವಿಕ್ರಂ ಅಮಟೆ ಭೇಟಿ ನೀಡಿದ್ದರು.