ಇದು ಬಡವರು, ಉಳ್ಳವರ ನಡುವಿನ ಚುನಾವಣೆ: ಎಚ್ಕೆಪಾ

| Published : May 04 2024, 12:30 AM IST

ಸಾರಾಂಶ

ರಾಜ್ಯದಲ್ಲಿ ₹೧.೧೦ ಕೋಟಿ ಕುಟುಂಬವನ್ನು ಬಡತನ ರೇಖೆಗಿಂತ ಮೇಲೆತ್ತುವ ಕೆಲಸ ಮಾಡಿದ್ದೇವೆ

ಗದಗ: ಮೇ ೭ರಂದು ನಡೆಯುವ ಚುನಾವಣೆ ಅತೀ ಮಹತ್ವದ ಚುನಾವಣೆಯಾಗಿದ್ದು, ಬಡವರು ಮತ್ತು ಉಳ್ಳವರ ನಡುವಿನ ಚುನಾವಣೆಯಾಗಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನಗರದ ೩ ಮತ್ತು ೪ನೇ ವಾರ್ಡಿನಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪ್ರಚಾರಾರ್ಥವಾಗಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ ೮ನೇ ಮಾಸಿಕ ಕಂತು ಬಂದಿದೆ. ಗೃಹಜ್ಯೋತಿ ಈಗಾಗಲೇ ೨೦೦ ಯುನಿಟ್ ಬಳಕೆದಾರರಿಗೆ ಝೀರೋ ಬಿಲ್ ಬರುತ್ತಿದೆ. ಅನ್ನಭಾಗ್ಯ ಯೋಜನೆಯಡಿ ೫ ಕೆಜಿ ಅಕ್ಕಿ, ಉಳಿದ ೫ ಕೆಜಿ ಅಕ್ಕಿಯ ಹಣ ನೀಡಲಾಗುತ್ತಿದೆ. ಒಂದು ಕುಟುಂಬಕ್ಕೆ ಗ್ಯಾರಂಟಿ ಯೋಜನೆಗಳ ಮೂಲಕ ಮಾಸಿಕ ₹೫ ಸಾವಿರಯಂತೆ ವಾರ್ಷಿಕ ₹೬೦ ಸಾವಿರ ನೀಡಲಾಗಿದೆ. ಒಟ್ಟಾರೆ ರಾಜ್ಯದಲ್ಲಿ ₹೧.೧೦ ಕೋಟಿ ಕುಟುಂಬವನ್ನು ಬಡತನ ರೇಖೆಗಿಂತ ಮೇಲೆತ್ತುವ ಕೆಲಸ ಮಾಡಿದ್ದೇವೆ ಎಂದರು.

ನುಡಿದಂತೆ ನಡೆದಿದ್ದೇವೆ. ನಿಮಗೆ ಕೊಟ್ಟ ಆಶ್ವಾಸನೆ ಪೂರೈಸಿದ್ದೇವೆ. ಈಗ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ವಾರ್ಷಿಕ ₹೧ ಲಕ್ಷ, ಯುವಕರಿಗೆ ₹೧ ಲಕ್ಷ, ರೈತರ ಸಾಲ ಮನ್ನಾ, ಪ್ರತಿ ಕುಟುಂಬಕ್ಕೆ ಉಚಿತವಾಗಿ ₹೨೫ ಲಕ್ಷ ಮೊತ್ತದ ವಿಮೆ, ಜಾತಿ ಗಣತಿ ಸೇರಿ ಪಂಚ ನ್ಯಾಯದ ಕಾರ್ಡಗಳನ್ನು ವಿತರಿಸಲಾಗಿದೆ. ಆದ್ದರಿಂದ ಮತದಾರರು ಈ ಬಾರಿ ಕಾಂಗ್ರೆಸ್‌ಗೆ ಬೆಂಬಲ ನೀಡುವುದರ ಜತೆಗೆ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ತಾಳಿ ಕಿತ್ತು ಮುಸ್ಲಿಮರಿಗೆ ನೀಡುತ್ತಾರೆ ಎಂಬ ಕಟ್ಟು ಕಥೆಗಳನ್ನು ಹೇಳುವ ಮೂಲಕ ಮತದಾರರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಸ್ವತಃ ಮೋದಿ ಅವರೇ ಭಾರತ ಮಾತೆಯ ಆಭರಣಗಳಾದ ರೈಲು, ರಸ್ತೆ, ಏರ್‌ಪೋರ್ಟ್, ವಿದ್ಯುತ್ ಕಂಪನಿಗಳು, ಬಂದರುಗಳು ಸೇರಿ ಒಂದೊಂದರಂತೆ ಆಭರಣಗಳನ್ನು ಕಿತ್ತು ಆದಾನಿ, ಅಂಬಾನಿಯವರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ವೇಳೆ ೪ನೇ ವಾರ್ಡಿನ ಸದಸ್ಯೆ ಶಕುಂತಲಾ ಅಕ್ಕಿ, ಶಹರ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ.ಬಿ. ಅಸೂಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಎಚ್.ಎ.ಅಕ್ಕಿ, ಮಹಮ್ಮದ್ ಶಾಲಗಾರ, ಸೂರಜಸಿಂಗ್ ಜಮಾದಾರ, ಮಂಜುನಾಥ ಮುಳಗುಂದ, ಶಂಕರಸಿಂಗ್ ರಜಪೂತ, ಮಣ್ಣೇಶ ಹುಲಕೋಟಿ, ತುಳಸಿ ಕೆಂಚಿ, ರಾಮಣ್ಣ ಇರಕಲ್ಲ, ಗುರು ಭಜಂತ್ರಿ, ವೆಂಕಟೇಶ ಭಜಂತ್ರಿ, ಲಕ್ಷ್ಮಣ ಭಜಂತ್ರಿ, ವಾಸು ಹುಣಸಿಮರದ, ರಾಮಣ್ಣ ಅರಮನಿ, ಗಣೇಶ ಮಿಠಡೆ ಸೇರಿ ಅನೇಕರು ಇದ್ದರು.