ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ೨೦೨೫-೨೬ನೇ ಸಾಲಿನಲ್ಲಿ ಉತ್ತಮ ಸಾಧನೆ ಮಾಡಿದ ೨೧ ಮಕ್ಕಳಿಗೆ ಬೃಹತ್ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿತ್ತು.

ಕಾಲೇಜು ಆವರಣದಲ್ಲಿ ಶುಕ್ರವಾರ ನಡೆದ ಪ್ರತಿಭಾ ಪುರಸ್ಕಾರ ನೂರಾರು ಪೋಷಕರು ಹಾಗೂ ಮಕ್ಕಳ ಸಮ್ಮುಖದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಪುರಸಭೆ ಮುಖ್ಯಾಧಿಕಾರಿ ಪರಶುರಾಮ್ ಗಣ್ಯರ ಸಮ್ಮುಖದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ದಿನಗಳಲ್ಲಿ ಶಿರಾಳಕೊಪ್ಪ ಸರ್ಕಾರಿ ಶಾಲೆ ಇಲ್ಲಿಯ ಶಿಕ್ಷಕರ ಸಹಕಾರದಿಂದ ಅತ್ಯುತ್ತಮ ಸಾಧನೆ ಮಾಡಿದೆ. ವಿದ್ಯಾರ್ಥಿಗಳು ವಿದ್ಯೆ ಬೇಕು ಎಂದರೆ ಗುರು ವಿರಬೇಕು, ನಮಗೆ ಗುರಿ ಮಾತ್ರ ಇದ್ದರೆ ಸಾಲದು ಆ ಗುರಿಯನ್ನು ಸಾಧಿಸುವ ಮಾಗರ್ವನ್ನು ತೋರಿಸುವವರು ಶಿಕ್ಷಕರಾಗಿರುತ್ತಾರೆ. ಇಲ್ಲಿ ಇರುವಂತಹ ಉತ್ತಮ ಶಿಕ್ಷಕರ ಮಾರ್ಗದರ್ಶನ ಪಡೆದು ಸದುಪಯೋಗ ಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಶಾಲೆಗೆ ಉತ್ತಮ ಹೆಸರನ್ನು ತರಲು ನಿರಂತರ ಪರಿಶ್ರಮ ಪಡಬೇಕು ಎಂದರು.

ತಾಳಗುಂದ ಬಿಎಡ್ ಕಾಲೇಜ್ ಪ್ರಾಂಶುಪಾಲ ಡಾ.ಪರಮೇಶ್ವರ ಮಾತನಾಡಿ, ಕಳೆದ ೨೦ ವರ್ಷಗಳ ಹಿಂದೆ ಪ್ರಥಮ ಬಾರಿಗೆ ಪ್ರತಿ‘ಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿದ್ದೆ. ಪ್ರತಿಭೆ ಎಂದಾಕ್ಷಣ ಓದಿನಲ್ಲಿ ಮಾತ್ರ ಮುಂದೆ ಇದ್ದರೆ ಸಾಲದು, ಇತರ ಸಾಂಸ್ಕ್ರತಿಕ ಕಾರ್ಯಕ್ರಮ ಕ್ರೀಡೆಯಲ್ಲಿಯೂ ಮುಂದೆ ಬರುವಂತಾಗಬೇಕು. ಒಬ್ಬ ಕವಿ ಹೇಳುತ್ತಾರೆ ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಎಂದೂ ಹಾಳಾಗುವದಿಲ್ಲ ಎಂದರು.


ಪಟ್ಟಣದ ಖ್ಯಾತ ಉದ್ಯಮಿ ಸಾಯಿಬಾಬಾ ಹೋಂ ಅಪ್ಲೆಯನ್ಸ್ ಮನೋಹರ್ (ಪ್ರತಿ ವರ್ಷ ೧ ಲಕ್ಷ ರು. ಕೊಡುವದಾಗಿ ಘೋಷಣೆ) ಅತಿ ಹೆಚ್ಚು ಅಂಕ ೯೪.೨೮ ಪಡೆದ ಬೇಬಿ ಎಂಬ ಬಡ ಪ್ರತಿಭೆಗೆ ೫೦ ಸಾವಿರ ರು. ಪುರಸ್ಕಾರ ನೀಡಿದರು. ಹಾಗೆಯೇ ಶೇ.೯೦ ರ ಮೇಲೆ ಅಂಕ ಪಡೆದ ೪ ವಿದ್ಯಾರ್ಥಿಗಳಿಗೆ ತಲಾ ೧೨.೫೦ ಸಾವಿರ ರು ನನಂತೆ ಒಟ್ಟು ೧ ಲಕ್ಷ ರು. ಪುರಸ್ಕಾರ ನೀಡುವದಾಗಿ ಘೋಷಿಸಿದರು. ನಂತರ ಶಾಲೆಯ ಎಲ್ಲಾ ಮಕ್ಕಳಿಗೆ ಹಾಗೂ ಪೋಷಕರಿಗೆ ಹೋಳಿಗೆ, ಸೀಕರಣೆ ಊಟ ಸಿದ್ದಪಡಿಸಿ ಬಡಿಸಿದರು.

ತಾಲೂಕು ಶಿಕ್ಷಕ ಸಂಘದ ನಿವೇದಿತಾ ಮಾತನಾಡಿದರು. ಹಾಗೆಯೇ ಇತರ ದಾನಿಗಳಾದ ವಿಷ್ಣುಭಟ್ ತಲಾ ಸಾವಿರ ರು., ನಿವೇದಿತಾ ಸಾವಿರ ರು.ಗಳನ್ನು ಇದೇ ಸಂದರ್ಭ ವಿತರಿಸಿದರು.

ಶಾಲಾ ಸಮಿತಿ ಅಧ್ಯಕ್ಷ ಬಸವರಾಜಪ್ಪ ಅಕ್ಕಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಾಗರಾಜ್, ದಾನಿ ಮನೋಹರ್, ರವಿ ಶಾನುಭೋಗ, ದ್ಯಾವಪ್ಪ, ಮಾರುತಿ, ನಾಗರಾಜ್, ಎಲ್ಲಪ್ಪ ಸೇರಿ ಶಾಲಾ ಸಮಿತಿಯ ಇತರ ಸದಸ್ಯರು, ಶಿಕ್ಷಕರು ಹಾಜರಿದ್ದರು.