ಭಾನುವಾರ ಅಲ್ಲ, ಎಂದೂ ನಡೆಯಲಿಲ್ಲ ಇಲ್ಲಿ ಸಂತೆ!

| Published : Jul 09 2025, 12:17 AM IST / Updated: Jul 09 2025, 12:18 AM IST

ಸಾರಾಂಶ

2019ರಲ್ಲಿ ಬರೋಬ್ಬರಿ ₹69.12 ಲಕ್ಷ ಖರ್ಚು ಮಾಡಿ ನಿರ್ಮಿಸಲಾಗಿದೆ. ಇಲ್ಲಿ ರೈತರು, ವರ್ತಕರು ಯಾರೇ ಆದರೂ ಬಾಡಿಗೆ ಪಡೆದು ಮಾರಾಟ ಮಾಡಬಹುದಾಗಿದೆ. 14 ಮಳಿಗೆಗಳನ್ನು ನಿರ್ಮಿಸಲಾಗಿದೆ. ಬರೋಬ್ಬರಿ ಏಳು ವರ್ಷವಾದರೂ ಒಂದೇ ಒಂದು ದಿನವೂ ಇಲ್ಲಿ ಯಾರೋಬ್ಬರು ವ್ಯಾಪಾರ ಮಾಡಿಲ್ಲ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ನಿರ್ಮಾಣ ಮಾಡಿದ್ದು ತರಕಾರಿ, ಹೂವು, ಹಣ್ಣು ಹಂಪಲು ಮಾರಾಟಕ್ಕೆ. ಬಳಕೆ ಆಗುತ್ತಿರುವುದು ಮಾತ್ರ ನಿತ್ಯ ಸಂಜೆ ಮದ್ಯ ಸೇವನೆಗೆ...!

ಇದು ಇಲ್ಲಿನ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯಲ್ಲಿ ನಿರ್ಮಾಣ ಮಾಡಿರುವ ಭಾನುವಾರ ಸಂತೆಯ ದುಃಸ್ಥಿತಿ.

ರೈತರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಮಾಡಿರುವ "ಭಾನುವಾರ ಸಂತೆ " ಎಪಿಎಂಸಿಗೆ ಕಪ್ಪು ಚುಕ್ಕೆಯಂತಾಗಿದೆ. ಸರ್ಕಾರದ ಯೋಜನೆಗಳನ್ನು ಯೋಚಿಸದೇ ಬೇಕಾಬಿಟ್ಟಿಯಾಗಿ ಮಾಡಿದರೆ, ಅವುಗಳನ್ನು ಜಾರಿಗೊಳಿಸಿದರೆ ಏನಾಗುತ್ತದೆ ಎಂಬುದಕ್ಕೆ ಈ ಭಾನುವಾರ ಸಂತೆ ಉತ್ತಮ ಉದಾಹರಣೆ.

2019ರಲ್ಲಿ ಬರೋಬ್ಬರಿ ₹69.12 ಲಕ್ಷ ಖರ್ಚು ಮಾಡಿ ನಿರ್ಮಿಸಲಾಗಿದೆ. ಇಲ್ಲಿ ರೈತರು, ವರ್ತಕರು ಯಾರೇ ಆದರೂ ಬಾಡಿಗೆ ಪಡೆದು ಮಾರಾಟ ಮಾಡಬಹುದಾಗಿದೆ. 14 ಮಳಿಗೆಗಳನ್ನು ನಿರ್ಮಿಸಲಾಗಿದೆ. ಬರೋಬ್ಬರಿ ಏಳು ವರ್ಷವಾದರೂ ಒಂದೇ ಒಂದು ದಿನವೂ ಇಲ್ಲಿ ಯಾರೋಬ್ಬರು ವ್ಯಾಪಾರ ಮಾಡಿಲ್ಲ.

ಹಾಗಂತ ಎಪಿಎಂಸಿ ಸುಮ್ಮನೆ ಕುಳಿತಿಲ್ಲ. ಹತ್ತಾರು ಬಾರಿ ಬಾಡಿಗೆಗೆ ಪಡೆದುಕೊಳ್ಳಿ ಎಂದು ಪ್ರಕಟಣೆಯನ್ನು ಹೊರಡಿಸುತ್ತಲೇ ಇದೆ. ಟೆಂಡರ್‌ ಕರೆಯುತ್ತಲೇ ಇದೆ. ಆದರೆ, ಯಾರೊಬ್ಬರು ಇಲ್ಲಿನ ಮಳಿಗೆಗಳನ್ನು ಪಡೆಯಲು ಮುಂದೆ ಬಂದಿಲ್ಲ.

ಏನು ಕಾರಣ?: ಹೋಲ್‌ಸೇಲ್‌ ತರಕಾರಿ ಮಾರುಕಟ್ಟೆಯಿಂದ ಇದು ಸರಿಸುಮಾರು 2 ಕಿಮೀ ದೂರದಲ್ಲಿದೆ. ಹೋಲ್‌ಸೇಲ್‌ ಮಾರುಕಟ್ಟೆಯು ಬೆಳಗಿನ ಜಾವ ಶುರುವಾಗಿ ಬೆಳಗ್ಗೆ 7.30ರಿಂದ 8ರೊಳಗೆ ಮುಕ್ತಾಯಗೊಳ್ಳುತ್ತದೆ. ಬಳಿಕ ಅದೇ ಜಾಗೆಯಲ್ಲಿ ಚಿಲ್ಲರೆ ವ್ಯಾಪಾರಸ್ಥರು ತರಕಾರಿ, ಹಣ್ಣು ಹಂಪಲ ಇಟ್ಟು ವ್ಯಾಪಾರ ಮಾಡುತ್ತಾರೆ. ಜತೆಗೆ ಹೋಲ್‌ಸೇಲ್‌ ಮಾರುಕಟ್ಟೆಯಲ್ಲಿ ವಿಶಾಲವಾದ ಜಾಗೆಯಿದೆ. ಸರಿಸುಮಾರು 400ಕ್ಕೂ ಅಧಿಕ ವ್ಯಾಪಾರಸ್ಥರು ಅಲ್ಲೇ ಕುಳಿತು ವಹಿವಾಟು ನಡೆಸಬಹುದಾಗಿದೆ. ಅಲ್ಲೇ ಚೆನ್ನಾಗಿ ವ್ಯಾಪಾರ ಆಗುವಾಗ ಇಲ್ಲಿನ ಭಾನುವಾರ ಸಂತೆ ಎಂಬ ಹೆಸರಿನ ಮಾರುಕಟ್ಟೆಗೆ ಏಕೆ ಹೋಗಬೇಕು? ಎನ್ನುವ ಪ್ರಶ್ನೆ ವ್ಯಾಪಾರಸ್ಥರದ್ದು. ಹೀಗಾಗಿ ಎಪಿಎಂಸಿಯಲ್ಲಿ ರಸ್ತೆಯಲ್ಲೇ ಕುಳಿತು ವ್ಯಾಪಾರ ಮುಗಿಸಿಕೊಂಡು ಮನೆಯತ್ತ ಹೋಗುತ್ತೇವೆ ಎಂದು ನುಡಿಯುತ್ತಾರೆ ವರ್ತಕರು.

ಮದ್ಯದಂಗಡಿ ತಾಣ: ಇನ್ನು ಭಾನುವಾರ ಸಂತೆ ಪಡೆಯಲು ಮುಂದೆ ಬಾರದಿರುವುದರಿಂದ ಅದರ ನಿರ್ವಹಣೆಯನ್ನೂ ಎಪಿಎಂಸಿ ಮಾಡುವುದನ್ನೇ ಮರೆತಿದೆ. ಹೀಗಾಗಿ ಮಳಿಗೆಗಳಿಗೆ ಅಳವಡಿಸಿದ್ದ ಎಲೆಕ್ಟ್ರಿಲ್‌ ವಸ್ತುಗಳನ್ನು ಕಳ್ಳರ ಪಾಲಾಗಿವೆ. ಎಲ್ಲೆಂದರಲ್ಲಿ ಕಸ ಕಡ್ಡಿ ಬೆಳೆದಿವೆ. ಹುಳು ಹುಪ್ಪಡಿಗಳ ವಾಸಸ್ಥಾನ ಆಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಸಂಜೆಯಾದರೆ ಇಲ್ಲಿನ ಮಳಿಗೆ, ಅವುಗಳ ಎದುರಲ್ಲಿರುವ ಕಟ್ಟೆಗಳೆಲ್ಲ ಭರ್ತಿಯಾಗುತ್ತವೆ. ಹಾಗಂತ ಇಲ್ಲಿ ಆಗ ವ್ಯಾಪಾರವೇನೂ ನಡೆಯುವುದಿಲ್ಲ. ಬದಲಿಗೆ ಕುಡುಕರ ತಾಣವಾಗಿದೆ. ಮದ್ಯ ಸೇವನೆ ಮಾಡಲು ಇಲ್ಲಿ ಕಟ್ಟೆಗಳನ್ನು ಕೊಟ್ಟಂತಾಗಿದೆ. ಪ್ರತಿನಿತ್ಯ ಮದ್ಯಸೇವಕರು ಇದನ್ನು ತಮ್ಮ ಬಾರ್‌ನಂತೆ ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ಮದ್ಯದ ಟೆಟ್ರಾ ಪಾಕೆಟ್‌ಗಳ ರಾಶಿಯೇ ಇಲ್ಲಿವೆ.

ಹಾಗಂತ ಇದೆಲ್ಲ ಎಪಿಎಂಸಿ ಸಿಬ್ಬಂದಿಗಳಿಗೆಲ್ಲ ಗೊತ್ತಿಲ್ಲ ಅಂತೇನೂ ಇಲ್ಲ. ಏಕೆಂದರೆ ಇದು ಎಪಿಎಂಸಿ ಮುಖ್ಯ ರಸ್ತೆಯಲ್ಲೇ ಇದೆ. ಅಧಿಕಾರಿ, ನೌಕರರ ವರ್ಗ ಇದೇ ಮಾರ್ಗದಲ್ಲೇ ಪ್ರತಿನಿತ್ಯ ಓಡಾಡುತ್ತಾರೆ. ಇಲ್ಲಿನ ಅವ್ಯವಸ್ಥೆ ಕಣ್ಣಿಗೆ ಕಂಡೇ ಕಂಡಿರುತ್ತದೆ. ಆದರೆ, ಯಾರೊಬ್ಬರೂ ಇಲ್ಲಿನ ಪರಿಸ್ಥಿತಿ ಸುಧಾರಿಸಲು ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ.

ಹುಬ್ಬಳ್ಳಿ- ಧಾರವಾಡ ಮುಖ್ಯರಸ್ತೆಯಲ್ಲೇ ಭಾನುವಾರ ಸಂತೆಯ ಕಟ್ಟಡವಿದೆ. ಹೀಗಾಗಿ ಅದನ್ನು ಬೇರೆ ಯಾವುದಕ್ಕಾದರೂ ಬಳಕೆ ಮಾಡಿಕೊಳ್ಳಬಹುದಾ? ಎಂಬುದನ್ನು ಎಪಿಎಂಸಿ ಪರಿಶೀಲಿಸಿ ಕ್ರಮ ಕೈಗೊಂಡರೆ ಎಪಿಎಂಸಿಯ ಆದಾಯದ ಮೂಲವೂ ಆಗುತ್ತದೆ. ಈ ನಿಟ್ಟಿನಲ್ಲಿ ಎಪಿಎಂಸಿ ಅಧಿಕಾರಿ ವರ್ಗ ಯೋಚನೆ ಮಾಡಬೇಕಿದೆ ಎಂಬುದು ಪ್ರಜ್ಞಾವಂತರ ಆಗ್ರಹ.

ಭಾನುವಾರ ಸಂತೆ ಎಂಬ ಕಟ್ಟಡ ನಿರ್ಮಿಸಿ ಬರೋಬ್ಬರಿ 7 ವರ್ಷಕ್ಕೂ ಅಧಿಕವೇ ಆಗಿದೆ. ಒಂದೇ ಒಂದು ದಿನ ಅದು ಬಳಕೆಯಾಗಿಲ್ಲ. ಸಂಜೆಯಾದರೆ ಬಾರ್‌ನಂತಾಗುತ್ತದೆ. ಇದು ಮುಖ್ಯ ರಸ್ತೆಯಲ್ಲೇ ಇದೆ. ಮಳಿಗೆ ಪಡೆಯಲು ಯಾರೊಬ್ಬರು ಮುಂದೆ ಬರುತ್ತಿಲ್ಲ ಎಂದರೆ ಬೇರೆ ಯಾವುದಕ್ಕಾದರೂ ಬಳಕೆ ಮಾಡಿಕೊಳ್ಳಬೇಕು. ಇದರಿಂದ ಎಪಿಎಂಸಿ ಆದಾಯವೂ ಹೆಚ್ಚಾಗುತ್ತದೆ ಎಂದು ಸಾರ್ವಜನಿಕ ಪ್ರಕಾಶ ಶೆಟ್ಟಿ ಹೇಳಿದರು.