ವಿಧಾನ ಪರಿಷತ್ ಚುನಾವಣೆಯಲ್ಲಿ ಶಾಸಕರಿಂದ ಅಡ್ಡ ಮತದಾನ ಕುರಿತು ಎಸ್.ಎನ್. ಚನ್ನಬಸಪ್ಪ ಹೇಳಿಕೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗಬೇರೆಯವರು ಗೆಲ್ಲಲು ನಮ್ಮ ಪಕ್ಷಕ್ಕೆ ಕೈ ಹಾಕಿದ್ದಾರೆ. ಹಿರಿಯರು ಹೇಳಿದ ಗಾದೆ ಹಾಗೆ ಮಾಡಿದ್ದುಣ್ಣೋ ಮಾರಾಯ ಎಂಬುದು ಸತ್ಯ ಎನಿಸುತ್ತಿದೆ. ನಾವು ಆಗ ಮಾಡಿದ್ದೆವು. ಈಗ ಅವರು ನಮ್ಮ ಬುಟ್ಟಿಗೆ ಕೈಹಾಕಿದ್ದಾರೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.ವಿಧಾನ ಪರಿಷತ್ ಚುನಾವಣೆಯಲ್ಲಿ ಶಾಸಕರಿಂದ ಅಡ್ಡಮತದಾನ ಹಿನ್ನೆಲೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಮೇಲೆ ಆಣೆ ಪ್ರಮಾಣ ಮಾಡಿಸಲು ಬಿಜೆಪಿ ರಾಜ್ಯಾಧ್ಯಕ್ಷರು ಮುಂದಾಗಿದ್ದು, ಇದಕ್ಕಾಗಿ ಈ ವಾರ ಅಥವಾ ಮುಂದಿನ ವಾರ ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷ ಕರೆಯಲಾಗುವುದು ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಧರ್ಮಸ್ಥಳ ಮಂಜುನಾಥ ಸ್ವಾಮಿ ಬಳಿ ಹೋಗಬೇಕಾ ಅಥವಾ ತಿರುಪತಿ ತಿಮ್ಮಪ್ಪನ ಬಳಿ ಹೋಗಬೇಕಾ. ಅಯೋಧ್ಯೆ ಶ್ರೀರಾಮನ ಜನ್ಮ ಭೂಮಿಗೆ ಹೋಗಬೇಕಾ. ಕಾಶಿ ವಿಶ್ವನಾಥನ ಬಳಿ ಹೋಗಬೇಕಾ ಎಂಬುದು ತೀರ್ಮಾನ ಮಾಡಬೇಕು. ವ್ಯತ್ಯಾಸ ಆಗಿರುವುದಂತೂ ಮೇಲ್ನೋಟಕ್ಕೆ ಕಾಣುತ್ತಿದೆ. ಇದೆಲ್ಲಾದಕ್ಕೂ ಒಂದು ಅಂತ್ಯ ಈಗ ಬೇಕಾಗಿದೆ ಎಂದರು.ನಾವು ಪಕ್ಷವನ್ನು ತಾಯಿ ಎಂದು ಸ್ವೀಕಾರ ಮಾಡಿದವರು. ಪಕ್ಷದ ನೇತೃತ್ವ ಏನು ಹೇಳುತ್ತದೆ ಅದನ್ನು ಇಷ್ಟು ವರ್ಷ ಕೇಳಿಕೊಂಡು ಬಂದವರು. ಪಕ್ಷ ಯಾರಿಗೆ ಮತ ಹಾಕಬೇಕು ಎಂದು ಹೇಳಿದೆ ಅವರಿಗೆ ಮತ ಹಾಕಿದ್ದೇವೆ. ಈ ಹಿಂದೆ ಬಿಜೆಪಿ ಅಧಿಕಾರಕ್ಕೆ ಬರಲು ಬೇರೆಯವರನ್ನು ಕರೆದುಕೊಂಡು ಬಂದಿದ್ದೇವೆ. ಆದರೆ, ನಮ್ಮ ಬುಟ್ಟಿಗೆ ಕೈ ಹಾಕಿದಾಗ ನಾವು ಹೇಗೆ ನಡೆದುಕೊಳ್ಳಬೇಕು ಎಂಬದನ್ನು ಯೋಚಿಸಬೇಕು ಎಂದು ತಿಳಿಸಿದರು.ಪಕ್ಷದ ಕಾರ್ಯಾಲಯವೇ ನಮಗೆ ದೇವಾಲಯ. ಈಗ ಬಂದ ಪರಿಸ್ಥಿತಿಯ ಕುರಿತು ಒಂದು ತಾರ್ಕಿಕ ಹಂತಕ್ಕೆ ತರಬೇಕು. ಧರ್ಮಸ್ಥಳದಲ್ಲೂ ನಮ್ಮ ಪಕ್ಷದ ಕಾರ್ಯಾಲಯ ಇದೆ. ಅಲ್ಲೇ ಶಾಸಕಾಂಗ ಸಭೆ ಮಾಡಿ. ಕಾರ್ಯಕರ್ತರು ಹಾಗೂ ಚುನಾಯಿತ ಪ್ರತಿನಿಧಿಗಳನ್ನ ನಂಬದೇ ಇರುವ ಸ್ಥಿತಿ ನಿರ್ಮಾಣವಾಗಿದೆ. ಈ ರೀತಿಯ ಸ್ಥಿತಿ ಭಾರತೀಯ ಜನತಾ ಪಾರ್ಟಿಗೆ ಬರಬಾರದು. ಕಾರ್ಯಾಲಯವೇ ನಮಗೆ ದೇವಾಲಯ. ಮೊದಲು ಅಲ್ಲಿ ಕುಳಿತು ಎಲ್ಲವನ್ನ ಚರ್ಚೆ ಮಾಡುವ ಅಗತ್ಯ ಇದೆ. ನಂತರ ದೇವಾಲಯಕ್ಕೆ ಹೋಗಬೇಕು ಎಂದು ಹೇಳಿದರು.
ಆ ರೀತಿ ಮಾಡಿದವರನ್ನು ಗಲ್ಲಿಗೆ ಹಾಕಲು ಸಾಧ್ಯವಿಲ್ಲ. ಅವರನ್ನ ಪಕ್ಷದಿಂದ ಹೊರ ಹಾಕಬೇಕು. ಈ ರೀತಿಯ ಅಡ್ಡ ಮತದಾನ ಕೇವಲ ರಾಜ್ಯಾಧ್ಯಕ್ಷರಿಗೆ ಮಾಡಿದ ಅವಮಾನ ಅಲ್ಲ. ಇದು ಸಂಘಟನೆಗೆ ಮಾಡಿದ ಅವಮಾನ. ಅವರು ಈ ಪಕ್ಷದಲ್ಲಿ ಇರಲು ನಾಲಾಯಕ್. ಯಾರಿಗೆ ಯಾರ ಮೇಲೆ ಸಿಟ್ಟಿದೆ ಎಂಬುದು ನನಗೆ ಗೊತ್ತಿಲ್ಲ ಎಂದರು.ಆದರೆ, ಈ ರೀತಿಯ ಕೃತ್ಯ ಮಾಡಿದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇದು ಬಿಜೆಪಿಯ ಸಂಘಟನೆಗೆ ಮಾಡಿದ ಅವಮಾನ ಯಾರು ಈ ರೀತಿ ಕೃತ್ಯ ಮಾಡಿದ್ದೀರಿ. ಅವರು ನಮ್ಮ ಸಂಘಟನೆಯ ಹಿರಿಯರ ಬಳಿ ಹೋಗಿ ಒಪ್ಪಿಕೊಳ್ಳಿ ಎಂದು ಸಲಹೆ ನೀಡಿದರು.
