ಸಾರಾಂಶ
ಹಾವೇರಿ: ಸಂಕುಚಿತ ಮನೋಭಾವನೆ ಬಿಟ್ಟು ಮಕ್ಕಳಲ್ಲಿ ರಾಷ್ಟ್ರಪ್ರೇಮ ಮೂಡಿಸಿ ಅವರನ್ನು ಉತ್ತಮ ನಾಗರಿಕನನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಕೆಲಸ ಮಾಡುತ್ತಿದೆ ಎಂದು ಸಂಸ್ಥೆಯ ರಾಜ್ಯ ಆಯುಕ್ತ ಹಾಗೂ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.
ನಗರದ ಜಿಲ್ಲಾ ಗುರುಭವನದಲ್ಲಿ ಸೋಮವಾರ ಕರ್ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್, ಜಿಲ್ಲಾ ಸಂಸ್ಥೆ ವತಿಯಿಂದ ಕಬ್ಸ್- ಬುಲ್‌ಬುಲ್, ಸ್ಕೌಟ್ಸ್ -ಗೈಡ್ಸ್ ಮತ್ತು ರೋವರ್ಸ್ –ರೇಂಜರ್ಸ್ ಮಕ್ಕಳಿಗೆ ಹಮ್ಮಿಕೊಂಡಿದ್ದ ಬೆಳಗಾವಿ ವಿಭಾಗಮಟ್ಟದ ಗೀತಗಾಯನ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದ ನಿರ್ಮಾಣ ಕೇವಲ ಸರ್ಕಾರದ ಆಜ್ಞೆಗಳಿಂದ ಆಗಲ್ಲ, ಗಟ್ಟಿ ಸಮಾಜದ ನಿರ್ಮಾಣಕ್ಕೆ ಮನಃಪರಿವರ್ತನೆಯೇ ಆಗಬೇಕು. ನಮ್ಮ ರಾಷ್ಟ್ರಗೀತೆ ಅದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಇಂದಿನ ಸಂಕುಚಿತ ಜಾತಿ, ಧರ್ಮದ ವಿಚಾರಗಳಿಂದ ಮಕ್ಕಳನ್ನು ಕುಬ್ಜರನ್ನಾಗಿಸದೇ ಬೆಳೆಸಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ. ವಿವಿಧತೆಯಲ್ಲಿ ಏಕತೆ ಸಾರಿದ ನಾಡಿದು, ಭಾರತ ಮಾತೆಯ ರಕ್ಷಣೆ, ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮ ಬದ್ಧತೆ. ಬಲಿಷ್ಠ ಭಾರತ, ಮಾನವ ಕೋಟಿಯ ಕಲ್ಯಾಣ ನಮ್ಮ ಆದ್ಯತೆಯಾಗಿದೆ. ಸಂಸ್ಥೆಯಲ್ಲಿ ರಾಜ್ಯದ 8 ಲಕ್ಷ ಮಕ್ಕಳಿದ್ದು, ಅವರಲ್ಲಿ ರಾಷ್ಟ್ರಪ್ರೇಮ ಮೂಡಿಸಲು ನಾವು ಕೆಲಸ ಮಾಡುತ್ತಿದ್ದೇವೆ ಎಂದರು.ಸಂಗೀತ ಹೃದಯದ ಕಣ್ಣನ್ನು ತೆರೆಸುತ್ತದೆ, ಇದು ಅಂತಃಕರಣದ ಭಾಷೆಯಾಗಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಸಂಗೀತ ಶಿಕ್ಷಕರಿಲ್ಲ, ಹೀಗಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ರಾಜ್ಯದ 200 ತಾಲೂಕುಗಳಲ್ಲಿ ಸಂಗೀತ ಕ್ಷೇತ್ರದ ಪ್ರತಿಭಾವಂತ ಮಕ್ಕಳನ್ನು ಗುರುತಿಸಲು ಈ ಗೀತಗಾಯನ ಸ್ಪರ್ಧೆ ಹಮ್ಮಿಕೊಂಡಿದೆ. ಈ ಗೀತಗಾಯನ ಸ್ಪರ್ಧೆ ಮಕ್ಕಳಲ್ಲಿನ ಸಂಗೀತ ಪ್ರತಿಭೆಗೆ ಸಾಕ್ಷಿಯಾಗಲಿದೆ. ಇದೇ ರೀತಿ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರತಿ ಭಾನುವಾರ ಆನ್‌ಲೈನ್ ತರಗತಿಗಳನ್ನು ನಡೆಸುತ್ತಿದ್ದು, ಇದು 29 ವಾರಗಳಿಂದ ನಡೆದುಕೊಂಡು ಬರುತ್ತಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ಬೆಳವಣಿಗೆಗೆ ಶ್ರಮಿಸುವುದಷ್ಟೇ ಅಲ್ಲದೇ ಮಕ್ಕಳಲ್ಲಿನ ಗುಣಾತ್ಮಕ ಮತ್ತು ರಚನಾತ್ಮಕ ಕಾರ್ಯಚಟುವಟಿಕೆ ಉತ್ತೇಜಿಸಲು ಕೆಲಸ ಮಾಡುತ್ತಿದೆ. ಪರಿಸರ, ಆರೋಗ್ಯ, ನೀರು ಸಂರಕ್ಷಣೆ, ಪ್ರಾಣ-ಪಕ್ಷಿಗಳ ಜೀವ ವೈವಿಧ್ಯತೆ, ಪಕ್ಷಿ ಪ್ರಪಂಚದ ವಿಸ್ಮಯಗಳ ಕುರಿತು ಮಕ್ಕಳಲ್ಲಿನ ಕುತೂಹಲಕ್ಕೆ ಜ್ಞಾನ ಧಾರೆ ಎರೆಯುವುದಾಗಿದೆ ಎಂದು ಹೇಳಿದರು.ಈ ಗೀತಗಾಯನ ಸ್ಪರ್ಧೆ ಬೆಳಗಾವಿ ವಿಭಾಗಮಟ್ಟದ್ದಾಗಿದ್ದು, ಜಿಲ್ಲಾ ಹಂತದಲ್ಲಿ ವಿಜೇತ ಮಕ್ಕಳು ವಿಭಾಗಮಟ್ಟದ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಕಬ್ಸ್- ಬುಲ್‌ಬುಲ್ (ಪ್ರಾಥಮಿಕ ಹಂತ), ಸ್ಕೌಟ್ಸ್ -ಗೈಡ್ಸ್ (5ರಿಂದ 10ನೇ ತರಗತಿ) ಮತ್ತು ರೋವರ್ಸ್–ರೇಂಜರ್ಸ್ (ಕಾಲೇಜು ಹಂತದ) ಹೀಗೆ ಬೆಳಗಾವಿ ವಿಭಾಗದಿಂದ ಎಲ್ಲ ಜಿಲ್ಲೆಗಳ ಒಟ್ಟು 350-400 ಮಕ್ಕಳು ಇದರಲ್ಲಿ ಪಾಲ್ಗೊಂಡಿದ್ದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನ ದಂಡಿನ, ರಾಜ್ಯ ಉಪ ಆಯುಕ್ತೆ ಮಾಧುರಿ ದೇವಧರ, ಸಂಘಟನಾ ಆಯುಕ್ತೆ ಮಂಜುಳಾ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ, ಎಂ.ಆರ್. ಪಾಟೀಲ, ಮಹಾದೇವ, ಪಿ.ಬಿ. ಶಿಡೇನೂರ, ಬಸವರಾಜ ಚಳ್ಳಾಳ, ನಂದಿನಿ ಸೇರಿದಂತೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.;Resize=(128,128))
;Resize=(128,128))
;Resize=(128,128))