ಕನ್ನಡಪ್ರಭ ವಾರ್ತೆ ಹೊಸಕೋಟೆ
ಮನುಷ್ಯ ದೈಹಿಕ ಸಮತೋಲನ ಕಾಪಾಡಿಕೊಳ್ಳಲು ಯೋಗ ಪೂರಕವಾಗಿದ್ದು, ನಿತ್ಯ ಯೋಗದಲ್ಲಿ ತೊಡಗಿಸಿಕೊಳ್ಳಲು ಸ್ವಯಂ ಇಚ್ಛಾಶಕ್ತಿ ಬೇಕು ಎಂದು ಗ್ರಾಪಂ ಸದಸ್ಯೆ ವಿನೋದಮ್ಮ ತಿಳಿಸಿದರು.ತಾಲೂಕಿನ ಅನಗೊಂಡನಹಳ್ಳಿ ಹೋಬಳಿಯ ಮುತ್ಸಂದ್ರ ಗ್ರಾಮದ ಸ್ತ್ರೀಶಕ್ತಿ ಭವನದಲ್ಲಿ ಜನಮಿತ್ರ ಸಿಎಸ್‌ಸಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಯೋಗವು ಪ್ರತಿಯೊಬ್ಬರ ದೈನಂದಿನ ಜೀವನದ ಭಾಗವಾಗಬೇಕು. ನಿಯಮಿತ ಯೋಗಾಭ್ಯಾಸದಿಂದ ದೇಹದ ಆರೋಗ್ಯ ಸುಧಾರಿಸುವುದರ ಜೊತೆಗೆ ಮನಸ್ಸಿಗೆ ಶಾಂತಿ ಹಾಗೂ ಏಕಾಗ್ರತೆ ದೊರೆಯುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ಪರಿಶ್ರಮದ ಫಲವಾಗಿ 2014ರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗದಿನ ಆಚರಣೆ ಮಾಡಿದ ಕೀರ್ತಿ ಸಲ್ಲುತ್ತದೆ ಎಂದು ತಿಳಿಸಿದರು.
ಯೋಗ ಬಂಧು ಯಶೋಧಮ್ಮ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇಂದಿಗೂ ಸಹ ಯೋಗದ ಬಗ್ಗೆ ದಿವ್ಯ ನಿರ್ಲಕ್ಷ್ಯ ಇದೆ. ಆರೋಗ್ಯ ಸಮಸ್ಯೆ ಎದುರಾದಾಗ ಸಾವಿರಾರು ರುಪಾಯಿಗಳ ಹಣ ಆಸ್ಪತ್ರೆಗೆ ಖರ್ಚು ಮಾಡುವ ಬದಲಾಗಿ ಪ್ರತಿದಿನ ಅರ್ಧ ಗಂಟೆ ಕಾಲ ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡರೆ ರೋಗಗಳು ದೂರವಾಗುತ್ತವೆ. ಉತ್ತಮ ಆರೋಗ್ಯ ನಮ್ಮದಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಮಹಿಳೆಯರು, ಯುವಕರು ಹಾಗೂ ಹಿರಿಯ ನಾಗರಿಕರು ಉತ್ಸಾಹದಿಂದ ಭಾಗವಹಿಸಿ ವಿವಿಧ ಯೋಗಾಸನಗಳನ್ನು ಅಭ್ಯಾಸ ಮಾಡಿದರು. ಯೋಗದ ಮಹತ್ವ, ಆರೋಗ್ಯಕರ ಜೀವನಶೈಲಿ, ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಯೋಗದ ಪಾತ್ರದ ಕುರಿತು ಜಾಗೃತಿ ಮೂಡಿಸಲಾಯಿತು.
ಯೋಗ ಬಂಧುಗಳಾದ ಶುಭಾ, ವೆಂಕಟಲಕ್ಷ್ಮಮ್ಮ, ಅಮರಾವತಿ, ಮಾನಸಾ, ಸಿಎಸ್‌ಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯವಸ್ಥಾಪಕ ಮೃತ್ತ್ಯುಂಜಯ, ಎಚ್.ಎಸ್. ವ್ಯವಸ್ಥಾಪಕ ವಿನೋದ್, ಮೇಲ್ವಿಚಾರಕ ಅಶೋಕ್, ಸಂಪನ್ಮೂಲ ಅಧಿಕಾರಿ ಸಂಪಣ್ಣ, ಸಿಬ್ಬಂದಿ ಲಿಖಿತ್, ಶಿವಂ ಚೌಧರಿ ಹಾಜರಿದ್ದರು.