ಸಾರಾಂಶ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
‘ಅದು ೧೯೯೨ ನ.೨೦ನೇ ತಾರೀಕು. ಸಂಘಟನೆಯ ಹಿರಿಯರು ಕರೆದ ಬೈಠಕ್‌ನಲ್ಲಿ ಭಾಗಿಯಾಗಿದ್ದೆ. ಅವತ್ತಿನ ವರೆಗೆ ನಾನು ಅಯೋಧ್ಯೆಗೆ ಹೋಗುವ ಬಗ್ಗೆ ಯಾವುದೇ ನಿರ್ಧಾರವಾಗಿರಲಿಲ್ಲ.
ಬೈಠಕ್‌ನಲ್ಲಿ ಏಕಾಏಕಿ ನಾಳೆ ಅಯೋಧ್ಯೆಗೆ ಹೊರಡಬೇಕಾದ ತಂಡವನ್ನು ಹೆಸರಿಸಲಾಯಿತು. ಅದರಲ್ಲಿ ನನ್ನ ಹೆಸರೂ ಇತ್ತು. ನಾನು ದುಡಿಯುವ ಸಂಸ್ಥೆಗೆ ರಜೆ ಅರ್ಜಿ ಸಲ್ಲಿಸುವುದಕ್ಕೂ ಸಮಯವಕಾಶವಿರಲಿಲ್ಲ.
ಮನೆ ಮಂದಿಗೆ ತಿಳಿಸುವುದಕ್ಕೂ ಅವಕಾಶ ದೊರಕಲಿಲ್ಲ. ನನಗಿದ್ದ ಕೆಲವೇ ಗಂಟೆಗಳ ಕಾಲವಕಾಶದಲ್ಲಿ ಅಯೋಧ್ಯಾ ಕರಸೇವೆಗೆ ಪ್ರಯಾಣಿಸುವ ಸಿದ್ಧತೆಯನ್ನು ಮಾಡಿ, ರೈಲನ್ನೇರಿದ್ದೆ.
ಉತ್ತರ ಪ್ರದೇಶದಲ್ಲಿ ಕಲ್ಯಾಣ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಇದ್ದ ಕಾರಣ ಅಯೋಧ್ಯೆ ತಲುಪಲು ೧೯೯೦ರ ಸಂಕಷ್ಟ ಎದುರಾಗಲಿಲ್ಲ...’
ಹೀಗೆ ಅಂದಿನ ಅಯೋಧ್ಯೆ ಕರಸೇವೆಯ ಕತೆಯನ್ನು ಬಿಟ್ಟಿಟ್ಟವರು ಉಪ್ಪಿನಂಗಡಿಯ ಗಾಂಧೀ ಪಾರ್ಕ್ ನಿವಾಸಿ ಶಿವಕುಮಾರ್.ಅಯೋಧ್ಯೆಯಲ್ಲಿ ಡಿ.೬ರಂದು ಕರಸೇವೆ ನಿಗದಿಯಾಗಿತ್ತು.
ನಾವು ಮುಂಚಿತವಾಗಿಯೇ ಅಯೋಧ್ಯೆ ತಲುಪಿದ್ದು, ನಮಗೆ ಈಗಿನ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ನೇತೃತ್ವದ ರಕ್ಷಣಾ ತಂಡದಲ್ಲಿ ಕಾರ್ಯನಿರ್ವಹಿಸುವ ಹೊಣೆ ಲಭಿಸಿತು. ನಮ್ಮ ತಂಡಕ್ಕೆ ಪ್ರಧಾನವಾಗಿ ವಿವಾದಿತ ಕಟ್ಟಡತ್ತ ಯಾರೂ ಹೋಗದಂತೆ ತಡೆಯುವುದೇ ನೀಡಲಾದ ಹೊಣೆಯಾಗಿತ್ತು.
ವಿವಾದಿತ ಕಟ್ಟಡ ಹಿಂಭಾಗದಲ್ಲಿ ನಮ್ಮ ವಸತಿಯೂ ಇತ್ತು. ಪೂರ್ವ ಸೂಚನೆಯಂತೆ ಕರಸೇವೆ ಸರಯೂ ನದಿಯಿಂದ ಮಣ್ಣು ಯಾ ಮರಳನ್ನು ತಂದು ನಿರ್ದಿಷ್ಟ ಸ್ಥಳದಲ್ಲಿ ಹಾಕಿ ರಾಮಲಲ್ಲನ ದರ್ಶನ ಮಾಡಿ ಹೋಗುವುದಾಗಿತ್ತು.
ಈ ನಿರ್ದಿಷ್ಟ ಕರಸೇವೆಯಿಂದ ಕರಸೇವಕರು ಯಾವುದೇ ಕಾರಣಕ್ಕೂ ವಿವಾದಿತ ಕಟ್ಟಡದತ್ತ ಹೋಗಬಾರದೆಂದು ಕಟ್ಟಡದ ಹಿಂಭಾಗದಲ್ಲಿ ನಮ್ಮ ತರುಣ ತಂಡ ಅನುಶಾಸನ ಪಾಲನೆಯ ಪಣ ತೊಟ್ಟಿತ್ತು.
ಡಿ.೬ ಮುಂಜಾನೆಯಿಂದಲೇ ಪ್ರವಾಹೋಪಾದಿಯಲ್ಲಿ ಕರಸೇವಕರು ಜಮಾಯಿಸಿದ್ದರು. ಈ ಜನಸಾಗರದ ಮಧ್ಯೆ ಗಣ್ಯರಾದ ಪೇಜಾವರ ಶ್ರೀ, ಆಡ್ವಾಣಿ, ಅಶೋಕ್ ಸಿಂಘಾಲ್, ಹೂ.ವೆ. ಶೇಷಾದ್ರಿಯಂತಹ ಮಹಾನ್ ನಾಯಕರು ಆಗಮಿಸಿ ವೇದಿಕೆಯಲ್ಲಿ ಅನುಶಾಸನ ಪಾಲನೆಯ ಬಗ್ಗೆ ಕರೆ ನೀಡುತ್ತಿದ್ದರು.
ಎಲ್ಲವೂ ಸುಗಮವಾಗಿಯೇ ನಡೆಯುತ್ತಿತ್ತು. ವಿವಾದಿತ ಕಟ್ಟಡದ ಹಿಂಭಾಗದಿಂದ ಯಾರನ್ನೂ ಕೂಡ ಕಟ್ಟಡತ್ತ ನುಸುಳಲು ನಾವು ಅವಕಾಶ ನೀಡಿರಲಿಲ್ಲ. ಒಮ್ಮಿಂದೊಮ್ಮೆಲೇ ವಿವಾದಿತ ಕಟ್ಟಡದ ಗುಮ್ಮಟದ ಮೇಲೆ ಕೇಸರಿ ಧ್ವಜ ಹಾರತೊಡಗಿತು.
ಕ್ಷಣಾರ್ಧದಲ್ಲಿ ಕರಸೇವಕರ ಗುಂಪು ಗುಮ್ಮಟ್ಟದ ಮೇಲೆ ಪ್ರಭುತ್ವ ಸ್ಥಾಪಿಸಿತು ಎಂದು ಅವರು ಅಂದಿನ ಅನುಭವ ನೆನಪಿಸಿದ್ದಾರೆ. ರಾತ್ರಿಯಾಗುತ್ತಿದ್ದಂತೆಯೇ ಮಿಲಿಟರಿ ಪ್ರವೇಶಿಸುವ ಸುಳಿವು ದೊರಕಿತು.
ಎಲ್ಲರೂ ರಸ್ತೆಯಲ್ಲಿಯೇ ಇರಬೇಕೆಂಬ ಸೂಚನೆ ಬಂತು. ಆ ವೇಳೆಗೆ ಪರಿಣತ ಕರಸೇವಕರ ಸಹಕಾರದೊಂದಿಗೆ ತಾತ್ಕಾಲಿಕ ಮಂದಿರದ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ರಾಜ್ಯ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತವನ್ನು ಹೇರಲ್ಪಟ್ಟ ಕಾರಣ ಮುಂದಿನ ಬೆಳವಣಿಗೆಯ ಬಗ್ಗೆ ಸೂಚನೆಗಳು ಲಭಿಸತೊಡಗಿತ್ತು.
ರಾತ್ರಿ ಹೊತ್ತು ಸೇನಾ ತುಕಡಿಗಳು ಬಂದವಾದರೂ ಯಾವುದೇ ಬಲಪ್ರಯೋಗ ನಡೆಸಲಿಲ್ಲ. ಬಳಿಕದ ದಿನಗಳಲ್ಲಿ ಸರ್ಕಾರವೇ ರೈಲು ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದು, ಅಯೋಧ್ಯೆಯಿಂದ ಲಕ್ನೋ ವರೆಗೆ ಕರಸೇವಕರು ಪ್ರಯಾಣಿಸುವ ರೈಲಿಗೆ ಕಲ್ಲೆಸೆಯುವ ಕೃತ್ಯಗಳು ಎದುರಾದವು.
ಜಿಲ್ಲೆಯಿಂದ ಅಯೋಧ್ಯೆಗೆ ತಲುಪುವ ವರೆಗೆ ಇದೊಂದು ಜನಜಾಗೃತಿಯ ನೆಲೆಯಲ್ಲಿ ನಡೆಸಲಾಗುವ ಕರಸೇವೆ ಎಂದೇ ತಿಳಿದಿದ್ದೆ. ಅಲ್ಲಿಯೂ ಕರಸೇವಕರನ್ನು ನಿಯಂತ್ರಿಸಲು ನಮಗೆ ಹೊಣೆಗಾರಿಕೆ ನೀಡಿದಾಗ ವಿವಾದಿತ ಕಟ್ಟಡದ ಧ್ವಂಸ ಈ ಬಾರಿಯೂ ಅಸಾಧ್ಯ ಎಂದೇ ಭಾವಿಸಿದ್ದೆ.
ಆದರೆ ರಾಮನ ಇಚ್ಛೆ ಬೇರೆಯೇ ಆಗಿತ್ತು. ಯಾವ ಸೂಚನೆ- ನಿರ್ದೇಶನ- ಮನವಿಗೂ ಮಾನ್ಯತೆ ನೀಡದ ಒಂದು ಗುಂಪು ಯಾವುದೇ ಆಯುಧ ಯಾ ಉಪಕರಣವಿಲ್ಲದೆ ಅಲ್ಲೇ ಸಿಕ್ಕಿದ ವಸ್ತುಗಳ ಸಹಾಯದಿಂದ ಕಟ್ಟಡವನ್ನು ನಿರ್ನಾಮಗೊಳಿಸಿದ್ದು ಮಾತ್ರ ವಿಸ್ಮಯಕಾರಿಯಾಗಿತ್ತು.
ಹೆತ್ತವರೂ ಬಂದಿದ್ದರು!
ಅಂದು ನಾನು ಅಯೋಧ್ಯೆಗೆ ಹೋಗುವುದನ್ನು ಮನೆಗೆ ತಿಳಿಸಿರಲಿಲ್ಲ. ನನ್ನ ಹೆತ್ತವರು ಅಯೋಧ್ಯೆಗೆ ಬರುವುದು ನನಗೂ ತಿಳಿದಿರಲಿಲ್ಲ. ಆದರೆ ಡಿ.೩ನೇ ತಾರೀಕಿಗೆ ನನ್ನ ತಂದೆ ಮತ್ತು ತಾಯಿ ಕರಸೇವಕರಾಗಿ ಅಯೋಧ್ಯೆಗೆ ತಲುಪಿದಾಗ ಅವರು ನನ್ನನ್ನು ಭೇಟಿಯಾದರು.
ಅಯೋಧ್ಯೆಯಲ್ಲಿ ಹೆತ್ತವರನ್ನು ಕಂಡು ಸಂತಸವಾಯಿತು. ರಾಮನ ಸೇವೆಗೆ ನನ್ನ ಇಡೀ ಕುಟುಂಬ ಧುಮುಕಿರುವ ಬಗ್ಗೆ ಹೆಮ್ಮೆಯೂ ಆಗಿತ್ತು. ಡಿಸೆಂಬರ್‌ನ ಕೊರೆಯುವ ಚಳಿಯಲ್ಲಿ ಅಲ್ಲಿನ ಜನರ ಉಪಚಾರ ಮರೆಯುವಂತಿರಲಿಲ್ಲ.
ಮೈತುಂಬ ಬಟ್ಟೆ ಬರೆ ಇಲ್ಲದಿದ್ದರೂ, ಮಕ್ಕಳು ಚಳಿಯಲ್ಲಿ ನಡುಗುತ್ತಿದ್ದರೂ ಹಲವು ಮಾತೆಯರು ಅವರ ಬಡತನವನ್ನು ಸಾಕ್ಷೀಕರಿಸುವಂತೆ ಒಂದು ಕೆ.ಜಿ.ಯಷ್ಟು ಗೋಧಿ ಹಿಟ್ಟನ್ನು ತಂದು ನಾವಿದ್ದಲ್ಲಿಗೆ ಬಂದು ಚಪಾತಿ ಮಾಡಿಕೊಟ್ಟು ಸಾಕ್ಷತ್ ರಾಮನ ಸೇವೆ ಮಾಡುತ್ತಿದ್ದೇವೆ ಎಂಬ ಧನ್ಯತೆಯ ಭಾವ ಹೊಂದುತ್ತಿದ್ದರು ಎಂದು ಅಂದಿನ ದಿನಗಳನ್ನು ಮೆಲುಕು ಹಾಕಿದ್ದಾರೆ.
ಕರಸೇವೆ ಮುಗಿಸಿ ಊರಿಗೆ ಬಂದಾಗಲೇ ನನಗೆ ನನ್ನ ಕರ್ತವ್ಯದ ಅರಿವು ಉಂಟಾಗಿದ್ದು. ಸುಧೀರ್ಘ ೨೦ ದಿನಗಳ ಮಾಹಿತಿ ನೀಡದೆ ರಜೆ ಹಾಕಿದ ಕಾರಣಕ್ಕೆ ಕಂಪನಿಯಿಂದ ಮೆಮೋ ಲಭಿಸಿತ್ತು.
ಕ್ಷಮಾಪಣೆ ಪತ್ರ ಬರೆದು ಕರ್ತವ್ಯಕ್ಕೆ ಹಾಜರಾದೆ ಎಂದರು. ಅವರ ತಂದೆ ದಿ.ಮೋನಪ್ಪ ಸಪಲ್ಯ, ತಾಯಿ ರಾಧಾ ಕೂಡ ಕರಸೇವೆಯಲ್ಲಿ ಭಾಗಿಯಾಗಿದ್ದು ವಿಶೇಷ.