ಶ್ರೀರಾಮನ ಇರುವಿಕೆ ಪರಿಚಯಿಸಿದ ಆದಿಕವಿ ವಾಲ್ಮೀಕಿ

| Published : Oct 18 2024, 01:17 AM IST

ಶ್ರೀರಾಮನ ಇರುವಿಕೆ ಪರಿಚಯಿಸಿದ ಆದಿಕವಿ ವಾಲ್ಮೀಕಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹರ್ಷಿ ವಾಲ್ಮೀಕಿ ಅವರು ರಾಮಾಯಣದಂತಹ ಶ್ರೇಷ್ಠ ಕೃತಿಯನ್ನು ರಚಿಸಿ, ಈ ಸಮಾಜಕ್ಕೆ ರಾಮನ ಇರುವಿಕೆಯನ್ನು ಪರಿಚಯಿಸಿದ್ದಾರೆ. ಇವರ ತತ್ವ- ಆದರ್ಶಗಳು ಪ್ರತಿಯೊಬ್ಬರಿಗೂ ಮಾದರಿಯಾಗಿವೆ ಎಂದು ತಹಸೀಲ್ದಾರ್ ಜಿ.ಎಸ್.ಶಂಕರಪ್ಪ ಚನ್ನಗಿರಿಯಲ್ಲಿ ಹೇಳಿದ್ದಾರೆ.

- ತಹಸೀಲ್ದಾರ್ ಜಿ.ಎಸ್.ಶಂಕರಪ್ಪ ಅಭಿಮತ । ಚನ್ನಗಿರಿ ಪಟ್ಟಣದಲ್ಲಿ ವಾಲ್ಮೀಕಿ ಜಯಂತಿ ಸಮಾರಂಭ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ಮಹರ್ಷಿ ವಾಲ್ಮೀಕಿ ಅವರು ರಾಮಾಯಣದಂತಹ ಶ್ರೇಷ್ಠ ಕೃತಿಯನ್ನು ರಚಿಸಿ, ಈ ಸಮಾಜಕ್ಕೆ ರಾಮನ ಇರುವಿಕೆಯನ್ನು ಪರಿಚಯಿಸಿದ್ದಾರೆ. ಇವರ ತತ್ವ- ಆದರ್ಶಗಳು ಪ್ರತಿಯೊಬ್ಬರಿಗೂ ಮಾದರಿಯಾಗಿವೆ ಎಂದು ತಹಸೀಲ್ದಾರ್ ಜಿ.ಎಸ್.ಶಂಕರಪ್ಪ ಹೇಳಿದರು.

ಗುರುವಾರ ಪಟ್ಟಣದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಪುರಸಭೆ ಹಾಗೂ ತಾಲೂಕು ನಾಯಕ ಸಮಾಜ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ನಾಯಕ ಸಮಾಜವು ಹೋರಾಟಕ್ಕೆ ಹೆಸರಾದ ಸಮಾಜವಾಗಿದ್ದು, ವಾಲ್ಮೀಕಿಯಂತಹ ಶ್ರೇಷ್ಠ ವ್ಯಕ್ತಿಗಳು ಜನಿಸಿದ ಸಮುದಾಯವಾಗಿದೆ. ಈ ಜನಾಂಗದಲ್ಲಿ ಹುಟ್ಟಿದ ನೀವುಗಳೇ ಧನ್ಯರು. ಪ್ರಸ್ತುತ ಸಮಾಜ ಅಭಿವೃದ್ಧಿ ಆಗಬೇಕಾದರೆ ಶಿಕ್ಷಣ ಬಹಳ ಮುಖ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಉತ್ತಮ ಶಿಕ್ಷಣವನ್ನು ನೀಡಬೇಕು ಎಂದರು.

ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಹೊದಿಗೆರೆ ರಮೇಶ್ ಮಾತನಾಡಿ, ಶೋಷಿತ ಸಮುದಾಯಗಳಿಗೆ ಹೋರಾಟ ಅನಿವಾರ್ಯ ಮತ್ತು ನಿರಂತರವಾಗಿದೆ. ದಾರ್ಶನಿಕರ ಜಯಂತಿ ಆಚರಣೆಗಳು ಸಮಾಜದ ಪ್ರಗತಿಗೆ ಪೂರಕವಾಗುವಂತಹ ಮಾಹಿತಿ ನೀಡುವ ಕಾರ್ಯಕ್ರಮಗಳಾಗಬೇಕು ಎಂದರು.

ಪ್ರಸ್ತುತ ದಿನಗಳಲ್ಲಿ ಸಮುದಾಯದ ಯುವಕರು ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಯುವಜನರು ಅಂಥವುಗಳಿಂದ ದೂರವಿದ್ದು, ಪ್ರತಿಯೊಬ್ಬರು ಉನ್ನತ ಶಿಕ್ಷಣ ಪಡೆಯಬೇಕು. ಆ ಮೂಲಕ ಸಮುದಾಯದ ಪ್ರಗತಿಗೆ ಸಹಕಾರಿಯಾಗಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಮಹರ್ಷಿ ವಾಲ್ಮೀಕಿ ಅವರನ್ನು ಕುರಿತಂತೆ ವಿಶೇಷ ಉಪನ್ಯಾಸವನ್ನು ದಾಗಿನಕಟ್ಟೆ ಗ್ರಾಮದ ವಾಲ್ಮೀಕಿ ಪ್ರೌಢಶಾಲೆ ಶಿಕ್ಷಕ ಡಿ.ಜಿ.ರಾಮಚಂದ್ರಪ್ಪ ಮಾಡಿದರು. ಸಮಾರಂಭಕ್ಕೂ ಮುನ್ನ ಅಲಂಕೃತ ಸಾರೋಟಿನಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿ ಪ್ರತಿಷ್ಠಾಪಿಸಿ, ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಮುಖ್ಯ ಅತಿಥಿಗಳಾಗಿ ತಾಪಂ ಕಾರ್ಯನಿರ್ವಾಹಕಾಧಿಕಾರಿ ಬಿ.ಕೆ.ಉತ್ತಮ, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಜಿ.ಎಸ್.ರುದ್ರೇಶ್, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಅಭಿಯಂತರ ಲೋಹಿತ್, ಲೋಕೋಪಯೋಗಿ ಇಲಾಖೆ ಅಭಿಯಂತರ ರವಿಕುಮಾರ್, ಶಿವಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರವೀಂದ್ರಕುಮಾರ್ ಅಥರ್ಗ, ಪುರಸಭೆಯ ಸದಸ್ಯರಾದ ಗಾದ್ರಿ ರಾಜು, ಕೆ.ಬಿ. ಜಿತೇಂದ್ರರಾಜ್, ಪಟ್ಲಿ ನಾಗರಾಜ್, ಪಾರಿ ಪರಮೇಶ್, ಮೊಟ್ಟೆ ಚಿಕ್ಕಣ್ಣ, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಡಿ.ಸಿ. ಕುಮಾರಸ್ವಾಮಿ, ನವೀನ್ ಚನ್ನಗಿರಿ, ಪಿ.ಬಿ,ನಾಯಕ ಮೊದಲಾದವರು ಹಾಜರಿದ್ದರು.

- - -

ಬಾಕ್ಸ್‌ * "ಮುಂದಿನ ವರ್ಷ ವಾಲ್ಮೀಕಿ ವೃತ್ತ ನಿರ್ಮಾಣ " ಸಮಾಜದ ಮುಖಂಡ ಮಂಗೇನಹಳ್ಳಿ ಪಿ.ಲೋಹಿತ್ ಕುಮಾರ್ ಮಾತನಾಡಿ, ಪಟ್ಟಣದಲ್ಲಿ ವಾಲ್ಮೀಕಿ ವೃತ್ತ ನಿರ್ಮಿಸಲು ಈಗಾಗಲೇ ಎಲ್ಲ ರೀತಿಯ ಸಿದ್ಧತೆಗಳು ನಡೆದಿವೆ. ಮುಂದಿನ ವರ್ಷದ ವಾಲ್ಮೀಕಿ ಜಯಂತಿಯ ಒಳಗಾಗಿ ವಾಲ್ಮೀಕಿ ವೃತ್ತ ನಿರ್ಮಾಣವಾಗಲಿದೆ. ಸಮಾಜದ ಯುವಕರು ತಾಳ್ಮೆಯಿಂದ ಇರಬೇಕು. ನಮ್ಮ ಸಮಾಜದವರು ರಾಜಕೀಯ ಪಕ್ಷಗಳಲ್ಲಿಯೂ ಗುರುತಿಸಿಕೊಂಡಿದ್ದು, ಚುನಾವಣೆಯ ಸಂದರ್ಭ ರಾಜಕಾರಣ ಮಾಡೋಣ. ಚುನಾವಣೆಗಳು ಮುಗಿದ ನಂತರ ಒಗ್ಗಟ್ಟಿನಿಂದ ಸಮಾಜದ ಸಂಘಟನೆಯಲ್ಲಿ ತೊಡಗೋಣ ಎಂದರು.

- - - -17ಕೆಸಿಎನ್ಜಿ1:

ಚನ್ನಗಿರಿ ಪಟ್ಟಣದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು.