ಸಚಿವ ಜಮೀರ ಸುಮ್ಮನಿದ್ದರೆ ಸಾಕು

| Published : May 04 2025, 01:30 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜಮೀರ ಅಹಮ್ಮದ ಶಾಂತವಾಗಿದ್ದರೆ ಸಾಕು, ನೀವೇನೂ ಮಾಡೋದು ಬೇಡ. ಸುಮ್ಮನಿದ್ದರೆ ಸಾಕು. ಮಿಲಿಟರಿಯನ್ನು ನಂಬಿ ನೀವು ಸುಮ್ಮನಿರಿ. ನಿಮ್ಮ ಭಾಷಣ ಬೇಡ, ನೀವು ಹೋಗೋದು ಬೇಡ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಮೀರ ಅಹಮ್ಮದ ಶಾಂತವಾಗಿದ್ದರೆ ಸಾಕು, ನೀವೇನೂ ಮಾಡೋದು ಬೇಡ. ಸುಮ್ಮನಿದ್ದರೆ ಸಾಕು. ಮಿಲಿಟರಿಯನ್ನು ನಂಬಿ ನೀವು ಸುಮ್ಮನಿರಿ. ನಿಮ್ಮ ಭಾಷಣ ಬೇಡ, ನೀವು ಹೋಗೋದು ಬೇಡ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಬಾಂಬ್ ಕಟ್ಟಿಕೊಂಡು ಪಾಕಿಸ್ತಾನ ಗಡಿಗೆ ಹೋಗುತ್ತೇನೆ ಎಂದು ಸಚಿವ ಜಮೀರ್‌ ಅಹ್ಮದ್‌ ಹೇಳಿದ್ದ ವಿಚಾರಕ್ಕೆ ತಿಕೋಟಾ ತಾಲೂಕಿನ ತೊರವಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೈನ್ಯದ ಶಕ್ತಿ, ಸೈನಿಕರು, ಇಂಟಲಿಜೆನ್ಸ್ ಬಗ್ಗೆ ವಿಶ್ವಾಸವಿಡಿ. ಹೇಳಿಕೆಗಳನ್ನು ಕೊಡದೆ ಬಾಯಿ ಮುಚ್ಚಿಕೊಂಡಿದ್ದರೆ ಸಾಕು ಎಂದು ಜಮೀರ ಹೇಳಿಕೆಗೆ ಟಾಂಗ್ ನೀಡಿದರು.

ಜಮೀರ ಶಾಂತವಾಗಿರೋದೆ ದೇಶಕ್ಕೆ ಮಾಡೋ ದೊಡ್ಡ ಸೇವೆ. ಜಮೀರ ದೊಡ್ಡ ತ್ಯಾಗಕ್ಕೆ ಹೊರಟಿದ್ದಾರೆ, ಅವರಂತ ದೊಡ್ಡ ತ್ಯಾಗದವರು ಯಾರೂ ಇಲ್ಲ ಎಂದು ವ್ಯಂಗ್ಯವಾಡಿದರು. ನೀವು ನಿಮ್ಮ ಪಕ್ಷದವರು ಶಾಂತದಿಂದಿರಿ. ಜಮೀರ, ಸಂತೋಷ ಲಾಡ್‌, ಖರ್ಗೆ, ಸಿದ್ದರಾಮಯ್ಯ ಸುಮ್ಮನಿದ್ದರೆ ಸಾಕು. ಡಿ.ಕೆ.ಶಿವಕುಮಾರ ಟೆರರಿಸ್ಟ್‌ಗಳನ್ನು ಬ್ರದರ್ ಎನ್ನದಿದ್ದರೇ ಸಾಕು. ಸೇನೆ ಎಲ್ಲವನ್ನೂ ನಿಭಾಯಿಸುತ್ತೆ. ಸೈನ್ಯದ, ಸೈನಿಕರ ಆತ್ಮ ಸ್ಥೈರ್ಯ ಕುಗ್ಗಿಸದೆ ಸುಮ್ಮನಿದ್ದರೆ ಸಾಕು. ಇಲ್ಲ ಸಲ್ಲದ ಹೇಳಿಕೆ‌ ಕೊಡುವುದನ್ನು ಬಂದ್‌ ಮಾಡುವಂತೆ ಸೂಚನೆ ನೀಡಿದರು.

ನಗರ ಶಾಸಕ ಯತ್ನಾಳ ಹಾಗೂ ಸಚಿವ ಶಿವಾನಂದ ಪಾಟೀಲ ಸಮರ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಯತ್ನಾಳ ಪಂಥಾಹ್ವಾನ ಸ್ವೀಕಾರ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಚಿವ ಶಿವಾನಂದ ಪಾಟೀಲರ ವಿಚಾರದಲ್ಲಿ ಹೆಚ್ಚಿಗೆ ಮಾತನಾಡಲ್ಲ. ನಾನು ಪಾರ್ಲಿಮೆಂಟ್ ಅಫೇರ್ಸ್ ಮಿನಿಸ್ಟರ್ ಆಗಿ ಕೆಲಸ ಮಾಡಿದ್ದೇನೆ. ಯಾವುದೇ ಷರತ್ತುಬದ್ದ ರಾಜೀನಾಮೆ ಕಸದ ಬುಟ್ಟಿಗೆ ಹಾಕುತ್ತಾರೆ. ರಾಜಕಾರಣದಲ್ಲಿ ಎಲ್ಲರ ಭಾಷೆ ಸಭ್ಯವಾಗಿರಬೇಕು, ಟೀಕೆ ಮಾಡಲಿಕ್ಕೆ ಖಂಡನೆ ಹಾಗೂ ಮಂಡನೆ ಮಾಡಲಿಕ್ಕೆ ಭಾಷೆ ಸಭ್ಯವಾಗಿರಬೇಕು. ಭಾರತ ಅತ್ಯಂತ ಪುರಾತನ ದೇಶ, ಇಲ್ಲಿನ ವಿಚಾರ ಆಚರಣೆಗೆ ಬಹಳ ಬೆಲೆ ಇದೆ. ಖಂಡನೆ ಮಂಡನೆಗೆ ಅವಕಾಶವಿದೆ, ಬಾಯಿಗೆ ಬಂದಂತೆ ಯಾರೂ ಅಸಭ್ಯ, ಅಭದ್ರ ಭಾಷೆ ಬಳಕೆ ರಾಜಕಾರಣದಲ್ಲಿ ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಗಳು ಅನಿವಾರ್ಯ, ಅಸಭ್ಯ ಮೂಡುವಂತೆ ಯಾರೂ ಮಾತನಾಡಬಾರದು ಎಂದರು.----------