ಸಾರಾಂಶ
ನಮ್ಮ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಐಟಿಐ ಶಿಕ್ಷಣ ವರದಾನ
ಶಿಗ್ಗಾಂವಿ: ಭಾರತೀಯ ಯುವಕ-ಯುವತಿಯರ ಕೌಶಲ್ಯಕ್ಕೆ ಇಡೀ ವಿಶ್ವವೇ ನಿಬ್ಬೆರಗಾಗಿದೆ. ಗುರುಕುಲ ಮಾದರಿ ಪದ್ಧತಿಯಿಂದ ಅತ್ಯಾಧುನಿಕ ತಾಂತ್ರಿಕ ಶಿಕ್ಷಣದವರೆಗಿನ ಶಿಕ್ಷಣ ಪಡೆದವರಿಗೆ ಜಗತ್ತಿನ ಎಲ್ಲ ಕ್ಷೇತ್ರಗಳಲ್ಲಿ ಬಹಳಷ್ಟು ಅವಕಾಶಗಳಿವೆ ಎಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಹುಬ್ಬಳ್ಳಿ ವಿಭಾಗೀಯ ಕಚೇರಿಯ ಜಂಟಿ ನಿರ್ದೇಶಕ ಡಾ. ಬಸವಪ್ರಭು ಹಿರೇಮಠ ತಿಳಿಸಿದರು.
ತಾಲೂಕಿನ ಗಂಜಿಗಟ್ಟಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ನಡೆದ ಪ್ರಧಾನ ಮಂತ್ರಿ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಮೇಳ ಉದ್ಘಾಟಿಸಿ ಮಾತನಾಡಿ, ನಮ್ಮ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಐಟಿಐ ಶಿಕ್ಷಣ ವರದಾನವಾಗಿದ್ದು, ಸ್ಥಳಿಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆಯಿದ್ದು, ಅಪ್ರೆಂಟಿಸ್‌ಶಿಪ್ ಮಾಡುವುದರಿಂದ ಹೆಚ್ಚಿನ ಕೌಶಲ್ಯ ಅಭಿವೃದ್ಧಿಯಾಗುತ್ತದೆ ಎಂದರು.ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಚೈತನ್ಯಕುಮಾರ ಮೋಹಿತೆ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಟೊಯೋಟಾ ಕಿರ್ಲೋಸ್ಕರ್, ಹೋಂಡಾ, ಮಾರುತಿ ಈ ಮೇಳದಲ್ಲಿ ಭಾಗವಹಿಸಿದ್ದು ಅತ್ಯಂತ ಸಂತಸ ತಂದಿದೆ ಎಂದರು.
ಸಂಸ್ಥೆಯ ಪ್ರಾಚಾರ್ಯ ಸದಾನಂದ ಬಿ.ಸಾಲಿನ್ಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಮಚಂದ್ರ ಬಿರಾದಾರ, ಸದಾಶಿವ ಹಳ್ಯಾಳ, ದೀಕ್ಷಿತ್, ವೀರೇಶ, ಎಂ.ಸಿ. ಪಾಟೀಲ, ಸೋಮೇಶ ಕೆ.ಜಿ., ಶೀಲಾ ಗೋಣಿ ಉಪಸ್ಥಿತರಿದ್ದರು.ತಾಂತ್ರಿಕ ನೆರವನ್ನು ವಿಶಾಲಾಕ್ಷಿ ಜಾಧವ, ದೀಪಾ ಜಕ್ಕಣ್ಣವರ, ಮಹ್ಮದ್ ರಫಿಕ್ ಬೆಳಗಾಲಪೇಟೆ, ಶ್ರೇಯಾ ಪಾಟೀಲ ಒದಗಿಸಿದರು. ಶಶಿಕಾಂತ ರಾಠೋಡ ಕಾರ್ಯಕ್ರಮ ನಿರ್ವಹಿಸಿದರು. ಸುಭಾಷ ಮುದಿಗೌಡ್ರ ಸ್ವಾಗತಿಸಿದರು. ವಿನಯ್ ತೋರಗಲ್ ವಂದಿಸಿದರು.