ಸಾರಾಂಶ
ಗುಂಡ್ಲುಪೇಟೆ ಪಟ್ಟಣದಲ್ಲಿ ಗುರುವಾರ ಮಧ್ಯಾಹ್ನ ಸುರಿದ ಮಳೆಗೆ ಪಟ್ಟಣದ ಮಡಹಳ್ಳಿ ಸರ್ಕಲ್ ಚಿಕ್ಕ ಕರೆಯಂತಾಗಿದ್ದು, ಇದು ಜನರ ಆಕ್ರೋಶಕ್ಕೆ ಮತ್ತೇ ಕಾರಣವಾಗಿದೆ.
ಗುಂಡ್ಲುಪೇಟೆ: ಪಟ್ಟಣದಲ್ಲಿ ಗುರುವಾರ ಮಧ್ಯಾಹ್ನ ಸುರಿದ ಮಳೆಗೆ ಪಟ್ಟಣದ ಮಡಹಳ್ಳಿ ಸರ್ಕಲ್ ಚಿಕ್ಕ ಕರೆಯಂತಾಗಿದ್ದು, ಇದು ಜನರ ಆಕ್ರೋಶಕ್ಕೆ ಮತ್ತೇ ಕಾರಣವಾಗಿದೆ.
ಪಟ್ಟಣದಲ್ಲಿ ಮಳೆ ಬಂದಾಗಲೆಲ್ಲ ಮಡಹಳ್ಳಿ ಸರ್ಕಲ್ ಮಳೆ ನೀರು ನಿಲ್ಲುವ ಜಾಗವಾಗುತ್ತಿದೆ. ಮಡಹಳ್ಳಿ ಸರ್ಕಲ್‌ನಲ್ಲಿ ಮಳೆ ನೀರು ನಿಲ್ಲದಂತೆ ಮಾಡಲು ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ಪಟ್ಟಣದ ಮಡಹಳ್ಳಿ ಸರ್ಕಲ್‌ನಲ್ಲಿ ಮಳೆ ನೀರು ನಿಲ್ಲಲು ಕಾಗೇಹಳ್ಳವನ್ನು ಗುಂಡ್ಲುಪೇಟೆ ಪೊಲೀಸರು ಮುಚ್ಚಿರುವುದೇ ಕಾರಣ ಎಂದು ಕನ್ನಡಪ್ರಭ ಪತ್ರಿಕೆ ವರದಿ ಪ್ರಕಟಿಸಿ ತಾಲೂಕು ಆಡಳಿತದ ಗಮನ ಸೆಳೆದಿದೆ. ಕನ್ನಡಪ್ರಭ ನಿರಂತರ ವರದಿ ಪ್ರಕಟಿಸಿ ಗಮನ ಸೆಳೆದರೂ ಎಚ್ಚೆತ್ತುಕೊಳ್ಳದ ತಾಲೂಕು ಆಡಳಿತದ ವಿರುದ್ಧ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಶೈಲಕುಮಾರ್ (ಶೈಲೇಶ್) ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದೇನ್ರೀ ಪೊಲೀಸ್ರೂ ಕಾಗೇಹಳ್ಳ ಒತ್ತುವರಿ ಮಾಡಿಕೊಂಡಿದ್ದರೂ, ತೆರವುಗೊಳಿಸಲು ತಹಸೀಲ್ದಾರ್ ಸೂಚನೆ ನೀಡಿದ್ದರೂ ಕಾಗೇಹಳ್ಳ ಒತ್ತುವರಿ ತೆರವುಗೊಂಡಿಲ್ಲ. ಇದು ತಾಲೂಕು ಆಡಳಿತ ನಿರ್ಲಕ್ಷ್ಯದಿಂದಾಗಿ ಮಡಹಳ್ಳಿ ಸರ್ಕಲ್‌ನಲ್ಲಿ ನಿಲ್ಲುವ ನೀರಿನಲ್ಲಿ ಪಾದಚಾರಿಗಳು, ವಿದ್ಯಾರ್ಥಿಗಳು ನಡೆದುಕೊಂಡು ಹೋಗುತ್ತಿದ್ದಾರೆ ಎಂದು ಕಿಡಿಕಾರಿದರು. ಮಡಹಳ್ಳಿ ಸರ್ಕಲ್‌ನಲ್ಲಿ ಮಳೆ ಬಂದಾಗಲೆಲ್ಲ ಮಳೆ ನೀರು ನಿಂತು ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಸ್ಥಳೀಯ ಶಾಸಕರ ಗಮನಕ್ಕೂ ತರಲಾಗಿದೆ. ಆದರೂ ತಾಲೂಕು ಆಡಳಿತ ಮಾತ್ರ ನೀರು ನಿಲ್ಲದಂತೆ ಮಾಡಲು ಆಗಿಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗುತ್ತಿದೆ ಎಂದರು.