ಕನ್ನಡಪ್ರಭ ವಾರ್ತೆ ಸಕಲೇಶಪುರ
ಮುಂಗಾರು ಮೊದಲ ಮಳೆಯೊಂದಿಗೆ ಹೂವಾಗುವ ಹಲವು ಬಗೆಯ ಹಣ್ಣುಗಳು ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಹಣ್ಣು ನೀಡುತ್ತಿದ್ದು, ಈ ಬಾರಿ ಎಲ್ಲ ಬಗೆಯ ಹಣ್ಣುಗಳ ಇಳುವರಿ ಅಧಿಕವಾಗಿದೆ. ಕಾಡಿಗೆ ತೆರಳುವ ಜನರು ಹಣ್ಣುಗಳನ್ನು ತುಂಬಿಕೊಂಡು ಮನೆ ಸೇರುತ್ತಿದ್ದಾರೆ. ಹಲಸು: ಪಶ್ಚಿಮಘಟ್ಟದ ಕಾಡು ಹಾಗೂ ಕಾಫಿತೋಟಗಳಲ್ಲಿ ಈ ಬಾರಿ ಅಧಿಕ ಎನ್ನುವಷ್ಟು ಹಲಸಿನ ಫಸಲಿದ್ದು, ಬಕ್ಕೆ ಹಾಗೂ ಬೀಳುವ ಹಣ್ಣುಗಳು ಎಲ್ಲೆಲ್ಲೂ ಕಾಣಸಿಗುತ್ತಿದ್ದು ತಿನ್ನುವವರಿಲ್ಲದೆ ಕರಗಿ ಸುರಿಯುತ್ತಿವೆ.ಮಾವು:ತಾಲೂಕಿನಲ್ಲಿ ಮಾವಿನ ಫಸಲು ಈ ಬಾರಿ ಅಧಿಕವಾಗಿದ್ದು ಅದರಲೂ ಈ ಬಾರಿ ಹಿಂದೆ ಎಂದು ಫಸಲು ನೀಡದ ಮರಗಳು ಸಹ ಈ ಬಾರಿ ಫಸಲು ಮೂಡುವ ಮೂಲಕ ವಿಸ್ಮಯ ಮೂಡಿಸುತ್ತಿವೆ. ಅದರಲ್ಲೂ ವಿವಿಧ ಗಾತ್ರ ಹಾಗೂ ರುಚಿಯ ಕಾಡು ಮಾವಿನ ಹಣ್ಣುಗಳು ಈ ಬಾರಿ ಹೆಚ್ಚಿದ್ದು ಕಾಡುಮಾವಿನ ಹಣ್ಣಿನ ಗೊಜ್ಜು ಮಾಡದ ಮನೆಯೆ ಇಲ್ಲ ಎಂದರು ತಪ್ಪಾಗದು.ನೇರಲೆ:ನೇರಳೆ ಫಸಲು ಸಹ ಈ ಬಾರಿ ಅಧಿಕವಾಗಿದ್ದು ‘ಸಕ್ಕರೆ ರೋಗ ನಿಯಂತ್ರಣಕ್ಕೆ ನೇರಳೆ ಹಣ್ಣು ಮದ್ದು’ ಎಂಬ ಮಾತಿನಿಂದ ಜನರು ಮುಂಜಾನೆ ಎದ್ದು ನೇರಲೆ ಮರದಡಿಗೆ ಓಡುತ್ತಿದ್ದಾರೆ. ಇದರಲ್ಲಿ ಜಮ್ಮ ನೇರಳೆ(ದೊಡ್ಡನೇರಳೆ) ಹಾಗೂ ಸಣ್ಣ ನೇರಳೆ ಹಣ್ಣು ಎಂಬ ಎರಡು ವಿಧಗಳಿದ್ದು ಸಣ್ಣನೇರಳೆ ರುಚಿಗೆ ಎತ್ತಿದ ಕೈ.ಪನ್ನೇರಳೆ:ಅಧಿಕ ನೀರಿನಾಂಶ ಇರುವ ಅತ್ಯಂತ ರುಚಿಕರವಾದ ಪನ್ನೇರಳೆ ಹಣ್ಣು ಈಗ ತಾಲೂಕಿನ ಕಾಡುಮೇಡುಗಳಲೆಲ್ಲ ಫಸಲು ಬಿಟ್ಟಿದ್ದು, ತಾಲೂಕಿಗೆ ಆಗಮಿಸುವ ಪ್ರವಾಸಿಗರು ಪನ್ನೇರಳೆ ಸವಿದು ಸಂತೃಪ್ತಿ ಪಡುತ್ತಿದ್ದಾರೆ.ಸೀಬೆಹಣ್ಣು:ತಾಲೂಕಿನ ಕಾಡುಗಳಲ್ಲಿ ಈಗ ಸೀಬೆ ಹಣ್ಣುಗಳೆ ಗೋಚರಿಸುತ್ತಿವೆ. ಈ ಬಾರಿ ಸೀಬೆಹಣ್ಣುಗಳು ಭಾರಿ ಪ್ರಮಾಣದಲ್ಲಿ ಫಸಲು ನೀಡಿದ್ದು, ಕೆಂಪು ಹಾಗೂ ಬಿಳಿ ಬಣ್ಣದ ಸೀಬೆ ತಿನ್ನುವವರಿಲ್ಲದೆ ಹಣ್ಣುಗಳು ನೆಲಸೇರುತ್ತಿವೆ. ಸಕ್ಕರೆರೋಗ ನಿಯಂತ್ರಣಕ್ಕೆ ಸೀಬೆಮದ್ದು ಎಂಬ ಕಾರಣವಿದ್ದರೂ ಸೀಬೆ ಹಣ್ಣು ಮುಟ್ಟುವವರಿಲ್ಲದಾಗಿದೆ. ಪಕ್ಷಿಗಳ ಅಚ್ಚುಮೆಚ್ಚಿನ ಹಣ್ಣುಗಳು ಈಗ ಪಕ್ಷಿಗಳಿಗೂ ಬೇಸರ ತರಿಸಿವೆ. ಚೊಟ್ಟೆಹಣ್ಣು:ಮುಳ್ಳುಗಿಡದಲ್ಲಿ ಬಿಳಿಬಣ್ಣದಲ್ಲಿರುವ ಚೊಟ್ಟೆ ಹಣ್ಣು ಸಾಮಾನ್ಯವಾಗಿ ಮಲೆನಾಡು ಹಾಗೂ ಅರೆಮಲೆನಾಡಿನಲ್ಲಿ ಮಾತ್ರ ಕಾಣಸಿಗುತ್ತಿದ್ದು, ಏಪ್ರಿಲ್ ಹಾಗೂ ಮೇ ಮದ್ಯಭಾಗದವರಗೆ ಫಸಲು ನೀಡುವ ಈ ಹಣ್ಣನ್ನು ಕೊಯ್ದ ಹತ್ತು ನಿಮಿಷದೊಳಗೆ ತಿನ್ನಬೇಕು, ತಪ್ಪಿದಲ್ಲಿ ಕಪ್ಪುವರ್ಣಕ್ಕೆ ತಿರುಗುವ ಹಣ್ಣನ್ನು ತಿನ್ನುವುದು ಕಷ್ಟಕರ ಇದರಿಂದಾಗಿಯೇ ಮಾರುಕಟ್ಟೆಯಲ್ಲಿ ಈ ಹಣ್ಣಿನ ಲಭ್ಯತೆ ಇಲ್ಲ. ಹೆಸನಣ್ಣು:ತಾಲೂಕಿನ ಎಲ್ಲೆಡೆ ದೊರೆಯುವ ಹೆಸನಣ್ಣು ಅತ್ಯಂತ ರುಚಿಕರ ಹಣ್ಣು. ನೋಡಲು ಸಣ್ಣ ಗಾತ್ರದ ಹಲಸಿನಂತೆ ಕಾಣುವ ಈ ಹಣ್ಣು ಕಾಯಿಯಾಗಿರುವಾಗ ಹಸಿರಾಗಿದ್ದು ನಂತರ ಹಣ್ಣಾಗುವ ವೇಳೆಗೆ ಕೆಂಪು ವರ್ಣಕ್ಕೆ ತಿರುಗುವ ಈ ಹಣ್ಣನ್ನು ಮಲೆನಾಡಿಗರ ಹೊರತುಪಡಿಸಿ ಅನ್ಯರು ಸವಿದಿರುವುದು ಅಪರೂಪ.ಗಿರಿಕೆಹಣ್ಣು;ಅಲ್ಪ ಹುಳಿಯಾಗಿದ್ದರೂ ಆರೋಗ್ಯಕ್ಕೆ ಅತ್ಯುತ್ತಮ ಎನ್ನಲಾಗುತ್ತದೆ. ಹಸಿರು ಬಣ್ಣದಿಂದ ಕೂಡಿರುವ ಕಾಯಿ ಹಣ್ಣಾಗುವ ವೇಳೆಗೆ ಹಳದಿಬಣ್ಣಕ್ಕೆ ತಿರುಗುತ್ತಿದ್ದು ಇದು ಸಹ ಇಂದಿನ ಜನಾಂಗಕ್ಕೆ ತಿಳಿಯದಂತಹ ಹಣ್ಣು ಆದರೂ ಈ ಹಣ್ಣಿನ ಮರ ಮಲೆನಾಡಿನ ಎಲ್ಲೆಡೆ ಕಂಡು ಬರುತ್ತಿದೆ.ಹಾಲೆಹಣ್ಣು:ಮೆಣದಿಂದ ಕೂಡಿರುವ ಹಾಲೆಹಣ್ಣಿಗೆ ಹುಳುಗಳ ಕಾಟ ಅತಿಹೆಚ್ಚು. ಮೆಣದಿಂದ ಕೂಡಿದ ಈ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಜಂತುಹುಳುಗಳು ಸಮಸ್ಯೆ ನಿವಾರಣೆಯಾಗಲಿದೆ ಎಂಬ ಪ್ರತೀತಿಯಿಂದ ಹಿಂದಿನ ಜನರು ಹಾಲೆ ಹಣ್ಣನ್ನು ಹುಡುಕಿಕೊಂಡು ಹೋಗುತ್ತಿದ್ದರು. ಆದರೆ, ಇಂದು ಈ ಹಣ್ಣಿನ ಮಹತ್ವದ ಅರಿವಿಲ್ಲದ ಜನಾಂಗಕ್ಕೆ ಹಣ್ಣು ಸವಿಯುವ ಭಾಗ್ಯವೂ ಇಲ್ಲದಾಗಿದೆ.ಈಚಲಹಣ್ಣು:ಪಶ್ಚಿಮಘಟ್ಟದ ಹಲವೆಡೆ ಈಚಲು ಈಗ ಹಣ್ಣಾಗಿದ್ದು ಪ್ರವಾಸಿಗರು ಹಣ್ಣನ್ನು ಹುಡುಕಿಕೊಂಡು ಹೋಗಿ ಸವಿಯುತ್ತಿದ್ದಾರೆ.ಉರುಬಲಹಣ್ಣು: ಬಳ್ಳಿಯಲ್ಲಿ ಬಿಡುವ ಉರುಬಲ ಹಣ್ಣು ನೋಡಲು ಕಡಲೆಕಾಯಿ ತರಹವಿದ್ದು ಸವಿಯಲು ಅಲ್ಪ ಹುಳಿಯಾಗಿದ್ದರೂ ಆರೋಗ್ಯಕ್ಕೆ ಉತ್ತಮ ಎಂಬ ಮಾತಿದೆ. ಬಹುತೇಕ ಕಾಡು ಪ್ರದೇಶಗಳಲ್ಲಿ ಮಾತ್ರ ದೊರೆಯುವ ಈ ಹಣ್ಣು ಈಗ ಅಪರೂಪವಾಗಿದೆ.ಗರ್ಜಿಹಣ್ಣು:ಅತ್ಯಂತ ಸಹಿಯಾಗಿರುವ ಉಂಡೆ ಗಾತ್ರದ ಗರ್ಜಿ ಹಣ್ಣು ಅರೆಅರಣ್ಯ ಪ್ರದೇಶದಲ್ಲಿ ಮಾತ್ರ ದೊರೆಯುತ್ತಿದ್ದು, ಅರೆ ಅರಣ್ಯ ಪ್ರದೇಶಗಳು ಈಗ ನಾಶವಾಗುತ್ತಿರುವುದರಿಂದ ಈ ಹಣ್ಣಿನ ಬಳ್ಳಿಗಳು ನಾಶದ ಅಂಚಿಗೆ ತಲುಪಿವೆ.
ಹೆಚ್ಚು ಔಷಧಿಗಳ ಗುಣ ಹೊಂದಿರುವ ಚಕೋತ ಕಾಫಿ ತೋಟಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತಿದ್ದು ಚಕೋತದ ಔಷಧಿಗುಣ ತಿಳಿದಿರುವ ಜನರು ಚಕೋತಕ್ಕೆ ಉಪ್ಪು ಖಾರ ಹಾಕಿ ಸವಿಯುವುದು ಮಲೆನಾಡಿನಲ್ಲಿ ಮಾಮೂಲಿ. ಅಬ್ಬಲ, ಬಕ್ಕಲ, ಜೆಪ್ಲ: ಇವು ಸಹ ಕಾಡು ಹಾಗೂ ಕಾಫಿ ತೋಟಗಳಲ್ಲಿ ಕಂಡುಬರುವ ಹಣ್ಣಿನ ಮರಗಳು. ಮುಂಗಾರು ವೇಳೆ ಈ ಮರಗಳಲ್ಲೂ ಹಣ್ಣು ಮೂಡುತ್ತಿದ್ದು, ತಿನ್ನುವವರಿಗೆ ಅತ್ಯಂತ ರುಚಿಕರ ಹಣ್ಣು. ಹೀಗೆ ಸಾಕಷ್ಟು ಹಣ್ಣುಗಳು ಕಾಡುಪ್ರದೇಶದಲ್ಲಿ ಫಸಲು ಮೂಡಿದ್ದು ಕಾಡುಹಣ್ಣು ತಿಂದವರಿಗಷ್ಟೆ ಗೊತ್ತು ಇವುಗಳ ರುಚಿ.