ಹೂವಿನಹಡಗಲಿಯ ಇಟ್ಟಗಿ ಮಳೆ ಮಾಪನಕೇಂದ್ರ 22 ವರ್ಷದಿಂದ ಸ್ಥಗಿತ

| Published : Aug 26 2024, 01:38 AM IST

ಸಾರಾಂಶ

ಇಟ್ಟಗಿ ಹೋಬಳಿ ಕೇಂದ್ರದಲ್ಲಿನ ಮಳೆ ಮಾಪನ ಕೇಂದ್ರವು ಕಳೆದ 22 ವರ್ಷಗಳಿಂದ ಸ್ಥಗಿತಗೊಂಡಿದೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ತಾಲೂಕಿನ ಇಟ್ಟಗಿ ಹೋಬಳಿ ಕೇಂದ್ರದಲ್ಲಿನ ಮಳೆ ಮಾಪನ ಕೇಂದ್ರವು ಕಳೆದ 22 ವರ್ಷಗಳಿಂದ ಸ್ಥಗಿತಗೊಂಡಿದೆ.

ಸಂಬಂಧಪಟ್ಟ ಅಧಿಕಾರಿಗಳು ಇತ್ತ ತಿರುಗಿ ನೋಡುತ್ತಿಲ್ಲ. ಹತ್ತಾರು ಪತ್ರ ಬರೆದರೂ ಉತ್ತರವಿಲ್ಲ. ಇದರಿಂದ ಈ ಭಾಗದಲ್ಲಿ ಪ್ರಕೃತಿ ವಿಕೋಪ, ಅತಿವೃಷ್ಟಿ, ಅನಾವೃಷ್ಟಿ ಉಂಟಾದಾಗ ನಷ್ಟ ಅಂದಾಜಿಸುವುದೇ ಕಷ್ಟವಾಗಿದೆ.

ಇಟ್ಟಗಿ ಹೋಬಳಿ ಕೇಂದ್ರ ಮಳೆ ಮಾಪನ ಇಲ್ಲದ ಕಾರಣ ಮಳೆ ಪ್ರಮಾಣ ದಾಖಲಾಗುತ್ತಿಲ್ಲ. ಅತಿವೃಷ್ಟಿ, ಅನಾವೃಷ್ಟಿ ಉಂಟಾದಾಗ ರೈತರು ಅಪಾರ ಪ್ರಮಾಣದ ನಷ್ಟ ಅನುಭವಿಸುತ್ತಾರೆ. ಬೆಳೆ ಪರಿಹಾರದಿಂದ ವಂಚಿತವಾಗುವ ಸಂಭವ ಹೆಚ್ಚಾಗುತ್ತದೆ. ಆದರೆ ಈ ವರೆಗೂ ಇಂತಹ ಪ್ರಕರಣ ಜರುಗಿಲ್ಲ. ಅಧಿಕಾರಿಗಳ ಜಂಟಿ ಸರ್ವೇ ಕಾರ್ಯ ಮಾಡಿ, ನೀಡಿರುವ ವರದಿ ಆಧಾರದ ಮೇಲೆ ಪರಿಹಾರ ವಿತರಣೆಯಾಗುತ್ತಿದೆ.

ಹೂವಿನಹಡಗಲಿ ತಾಲೂಕು 948 ಚ.ಕಿ.ಮೀ. ವಿಸ್ತೀರ್ಣ ಹೊಂದಿದ್ದು, 3 ಹೋಬಳಿ ಕೇಂದ್ರಗಳಿವೆ. 26 ಗ್ರಾಪಂ ಕೇಂದ್ರಗಳಿವೆ. 55 ಕಂದಾಯ ಗ್ರಾಮ, 57 ಉಪ ಗ್ರಾಮಗಳು ಸೇರಿ ಒಟ್ಟು 112 ಗ್ರಾಮಗಳಿವೆ. ಇದರಲ್ಲಿ ಹಿರೇಹಡಗಲಿ ಮತ್ತು ಹೂವಿನಹಡಗಲಿಯಲ್ಲಿ ಮಾತ್ರ ಮಳೆ ಮಾಪನ ಕೇಂದ್ರಗಳಿವೆ. ಇಟ್ಟಗಿ ಹೋಬಳಿಯಲ್ಲಿದ್ದ ಕೇಂದ್ರ 2002ರಿಂದ ಕಾರ್ಯನಿರ್ವಹಿಸುತ್ತಿಲ್ಲ. ಈ ವ್ಯಾಪ್ತಿಯಲ್ಲಿನ ಮಳೆ ಮಾಹಿತಿಯೇ ಅಲಭ್ಯವಾಗಿದೆ.

ತಾಲೂಕು ಕೇಂದ್ರದಿಂದ ಇಟ್ಟಗಿ 23 ಕಿ.ಮೀ., ಹೂವಿನಹಡಗಲಿ ಮತ್ತು ಹಿರೇಹಡಗಲಿ ಮಳೆ ಮಾಪನದಿಂದ ಇಟ್ಟಗಿ 38 ಕಿ.ಮೀ. ದೂರವಿದೆ.

ಮುನಿರಾಬಾದ್‌ ಜಲಮಾಪನ ಉಪ ವಿಭಾಗ ವ್ಯಾಪ್ತಿಗೆ ಹೂವಿನಹಡಗಲಿ, ಹಿರೇಹಡಗಲಿ ಮಳೆ ಮಾಪನ ಕೇಂದ್ರ ಮಾತ್ರ ಬರುತ್ತದೆ. ಇಟ್ಟಗಿಯನ್ನು ಬೆಂಗಳೂರಿನ ಕೆಎಸ್‌ಎನ್‌ಎಂಡಿಸಿ ನೋಡಿಕೊಳ್ಳುತ್ತದೆ ಎಂದು ಮಲ್ಲಿಕಾರ್ಜುನ ಶೆಟ್ಟರ್‌ ಮಾಹಿತಿ ನೀಡಿದರು.

ರಾಜ್ಯದಲ್ಲಿರುವ ಮಳೆ ಮಾಪನ ಕೇಂದ್ರ ನಿರ್ವಹಣೆಗೆ ಸರ್ಕಾರದಿಂದ ಟೆಂಡರ್‌ ಕರೆಯಲಾಗುತ್ತಿದೆ. ಆಯಾ ಕಂಪನಿಗಳು ಅವುಗಳನ್ನು ದುರಸ್ತಿ ಮಾಡಬೇಕಿದೆ. ಈಗ ಸದ್ಯ ಟೆಂಡರ್‌ ಅವಧಿ ಮುಗಿದಿದೆ. ಮುಂದಿನ ದಿನಗಳಲ್ಲಿ ಇಟ್ಟಗಿ ಮಳೆ ಮಾಪನ ಕೇಂದ್ರ, ದುರಸ್ತಿ ಮಾಡಲಾಗುವುದು ಎನ್ನುತ್ತಾರೆ ಬೆಂಗಳೂರಿನ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಎಸ್‌.ಕೆ. ರಾಮಕೃಷ್ಣ.

ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ತಪ್ಪು ಮುಚ್ಚಿಕೊಳ್ಳಲು, ಇನ್ನೊಂದು ಇಲಾಖೆಯತ್ತ ಬೊಟ್ಟು ಮಾಡಿ ತೋರಿಸದೇ ಇಟ್ಟಗಿ ಹೋಬಳಿ ಕೇಂದ್ರದಲ್ಲಿರುವ ಮಳೆ ಮಾಪನ ಕೇಂದ್ರವನ್ನು ದುರಸ್ತಿ ಮಾಡಬೇಕೆಂದು ರೈತ ಸಂಘದ ಅಧ್ಯಕ್ಷ ಸಿದ್ದಪ್ಪ ಹೊಸಮನಿ ಒತ್ತಾಯಿಸಿದ್ದಾರೆ.