ಹುಬ್ಬಳ್ಳಿಯ ಕೆಎಂಸಿಆರ್‌ಐನಲ್ಲಿ ಐವಿಎಫ್‌ ಸೆಂಟರ್‌!

| Published : Sep 11 2024, 01:04 AM IST

ಸಾರಾಂಶ

ಕೆಎಂಸಿಆರ್‌ಐನಲ್ಲಿ ಐವಿಎಫ್‌ ಸೆಂಟರ್‌ ಇನ್ನು ಎರಡ್ಮೂರು ತಿಂಗಳಲ್ಲಿ ಪ್ರಾರಂಭವಾಗಲಿದೆ. ಇಲ್ಲಿ ಬಿಪಿಎಲ್‌ ಕಾರ್ಡ್‌ದಾರರಿಗೆ ಉಚಿತ ಹಾಗೂ ಮಧ್ಯಮ ವರ್ಗದವರಿಗೆ (ಎಪಿಎಲ್‌) ಶೇ. 30ರಷ್ಟು ಚಾರ್ಜ್‌ ಆಗಲಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ (ಕೆಎಂಸಿಆರ್‌ಐ) ಯಲ್ಲಿ ಐವಿಎಫ್‌ ಸ್ಥಾಪನೆಯ ಕೆಲಸ ಸದ್ದಿಲ್ಲದೇ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಇನ್ನು ಎರಡ್ಮೂರು ತಿಂಗಳಲ್ಲಿ ಐವಿಎಫ್‌ ಸೆಂಟರ್‌ ಕಾರ್ಯಾರಂಭ ಮಾಡಲಿದೆ. ಬಳಿಕ ಐವಿಎಫ್‌ ಸೆಂಟರ್‌ ಹೊಂದಿದ ರಾಜ್ಯದ ಮೊದಲ ಸರ್ಕಾರಿ ವೈದ್ಯಕೀಯ ಕಾಲೇಜ್‌ ಎಂಬ ಹೆಗ್ಗಳಿಕೆ ಹುಬ್ಬಳ್ಳಿಯ ಕೆಎಂಸಿಆರ್‌ಐ ಹೊಂದಲಿದೆ.

"ಮಕ್ಕಳಿರಲವ್ವ ಮನೆ ತುಂಬ " ಎಂಬ ನಾಣ್ಣುಡಿ ಇದೆ. ಆದರೆ ಈಗಿನ ಆಧುನಿಕ ಬದುಕಿನ ಶೈಲಿಯಿಂದ ಮಕ್ಕಳಾಗುವುದು ಕಷ್ಟಸಾಧ್ಯ ಎಂಬಂತಾಗಿದೆ. ಬಯಸಿದರೂ ಮಕ್ಕಳಾಗುವುದು ಕಷ್ಟ ಎಂಬಂತಹ ಪರಿಸ್ಥಿತಿ ಈಗಿನ ಜೀವನಶೈಲಿಯಿಂದ ಆಗುತ್ತಿದೆ. ಈ ಕಾರಣದಿಂದಲೇ ಪ್ರತಿನಗರಗಳಲ್ಲಿ ಖಾಸಗಿ ಐವಿಎಫ್‌ ಸೆಂಟರ್‌ಗಳು ತಲೆ ಎತ್ತುತ್ತಿವೆ. ಆದರೆ ಐವಿಎಫ್‌ ಚಿಕಿತ್ಸೆಯಿಂದ ಮಕ್ಕಳನ್ನು ಪಡೆಯುವುದು ಬಡವರು, ಮಧ್ಯಮವರ್ಗಕ್ಕೆ ಅಷ್ಟೊಂದು ಸುಲಭವಲ್ಲ. ಒಂದು ಮಗುವನ್ನು ಪಡೆಯಬೇಕೆಂದರೆ ಹಣದ ಹೊಳೆಯನ್ನೇ ಹರಿಸಬೇಕಾಗುತ್ತದೆ. ಒಂದು ಮಗುವಿಗೂ ಕನಿಷ್ಠವೆಂದರೂ ₹8ರಿಂದ ₹ 10 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಬೇಕಾಗುತ್ತದೆ ಎಂಬುದು ಅಂದಾಜು. ಸರ್ಕಾರಿ ಆಸ್ಪತ್ರೆ ಅಥವಾ ಕಾಲೇಜ್‌ಗಳಲ್ಲಿ ಈ ವ್ಯವಸ್ಥೆ ಇಲ್ಲದೇ ಬಡವರು ತೊಂದರೆ ಅನುಭವಿಸುವಂತಾಗುತ್ತದೆ.

ಇದನ್ನು ತಪ್ಪಿಸಲು ಆಧುನಿಕ ಶೈಲಿಯೆನಿಸಿರುವ ಐವಿಎಫ್‌ ಮೂಲಕ ಬಡವರೂ ಮಕ್ಕಳು ಪಡೆಯುವಂತಾಗಲಿ ಎಂಬ ಉದ್ದೇಶದಿಂದ ಸರ್ಕಾರ ಹುಬ್ಬಳ್ಳಿಯ ಕೆಎಂಸಿ ಆರ್‌ಐನಲ್ಲಿ ಐವಿಎಫ್‌ ಸೆಂಟರ್‌ ತೆರೆಯುತ್ತಿದೆ.

ಟೆಂಡರ್‌ ಪ್ರಕ್ರಿಯೆ:

ಕೆಎಂಸಿಆರ್‌ಐನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಐವಿಎಫ್‌ ಸಿವಿಲ್‌ ವರ್ಕ್‌ಗೆ ಈಗಾಗಲೇ ಟೆಂಡರ್‌ ಕರೆಯಲಾಗಿದೆ. ಇದಕ್ಕಾಗಿ ಸರ್ಕಾರ ₹ 46.7 ಲಕ್ಷ ಬಿಡುಗಡೆ ಮಾಡಿದೆ. ಇದರಲ್ಲಿ ಸಿವಿಲ್‌ ವರ್ಕ್‌ ಮಾಡಲಾಗುವುದು. ಟೆಂಡರ್‌ ಪ್ರಕ್ರಿಯೆ ಇನ್ನೊಂದು ವಾರದಲ್ಲಿ ಪೂರ್ಣವಾಗಲಿದ್ದು, ನಂತರ ವರ್ಕ್‌ ಆಡರ್‌ ಕೊಡಲಾಗುತ್ತಿದೆ. ಇನ್ನು ಯಂತ್ರೋಪಕರಣಗಳನ್ನು ಖಾಸಗಿ ಕಂಪನಿಗಳ ಸಿಎಸ್‌ಆರ್‌ ಫಂಡ್‌ ಬಳಸಲಾಗುತ್ತಿದೆ. ಸರಿಸುಮಾರು ₹ 90 ಲಕ್ಷ ಯಂತ್ರೋಪಕರಣಗಳಿಗೆ ಬೇಕಾಗಲಿವೆ. ಇಲ್ಲಿ ಸಿವಿಲ್‌ ವರ್ಕ್‌ ಪ್ರಾರಂಭವಾಗುತ್ತಿದ್ದಂತೆ ಉಪಕರಣಗಳು ಬರಲಿವೆ ಎಂದು ಕೆಎಂಸಿಆರ್‌ಐ ಮೂಲಗಳು ತಿಳಿಸಿವೆ.

ಇಲ್ಲಿ ಪ್ರಾರಂಭವಾದರೆ ಲಕ್ಷಗಟ್ಟಲೇ ಕೊಟ್ಟು ಖಾಸಗಿ ಐವಿಎಫ್‌ ಸೆಂಟರ್‌ಗೆ ಹೋಗುವ ಬದಲು ಬಡವರು ಮತ್ತು ಮಧ್ಯಮ ವರ್ಗದವರು ಕೂಡ ಉಚಿತ ಅಥವಾ ರಿಯಾಯಿತಿ ದರದಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.

ಒಟ್ಟಿನಲ್ಲಿ ಮಕ್ಕಳಿಲ್ಲದ ಬಡವರು, ಮಧ್ಯಮ ವರ್ಗದ ಜನತೆಗೆ ಈ ಸೆಂಟರ್‌ ಆಶಾಕಿರಣದಂತೆ ಭಾಸವಾಗುತ್ತಿರುವುದಂತೂ ಸತ್ಯ.ಕೆಎಂಸಿಆರ್‌ಐನಲ್ಲಿ ಐವಿಎಫ್‌ ಸೆಂಟರ್‌ ಇನ್ನು ಎರಡ್ಮೂರು ತಿಂಗಳಲ್ಲಿ ಪ್ರಾರಂಭವಾಗಲಿದೆ. ಇಲ್ಲಿ ಬಿಪಿಎಲ್‌ ಕಾರ್ಡ್‌ದಾರರಿಗೆ ಉಚಿತ ಹಾಗೂ ಮಧ್ಯಮ ವರ್ಗದವರಿಗೆ (ಎಪಿಎಲ್‌) ಶೇ. 30ರಷ್ಟು ಚಾರ್ಜ್‌ ಆಗಲಿದೆ ಎಂದು ಕೆಎಫ್‌ಸಿಆರ್‌ಐ ನಿರ್ದೇಶಕ ಡಾ. ಎಸ್‌.ಎಫ್‌. ಕಮ್ಮಾರ ಹೇಳಿದರು.