ಕೆ.ಆರ್.ಪೇಟೆಯ ಜೆ.ಧೃತಿಗೆ 625 ಅಂಕ; ರಾಜ್ಯದಲ್ಲಿ ಟಾಪರ್ ಸಾಲಿಗೆ ಸೇರ್ಪಡೆ

| Published : May 02 2025, 11:45 PM IST

ಸಾರಾಂಶ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕೆ.ಆರ್.ಪೇಟೆ ಪಟ್ಟಣದ ಎಸ್.ಕೆ.ಚಿಕ್ಕಣ್ಣಗೌಡ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಜೆ.ಧೃತಿ 625 ಅಂಕಗಳಿಗೆ 625 ಅಂಕಗಳಿಸಿ ರಾಜ್ಯದಲ್ಲಿ ಟಾಪರ್ ವಿದ್ಯಾರ್ಥಿಗಳ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಶಾಲೆಯ ಗೀತಾಂಜಲಿ 623 ಅಂಕ ಪಡೆದು ಗಮನಾರ್ಹ ಸಾಧನೆ ಮಾಡಿದ್ದರೆ, ಆರ್.ಎಸ್.ಸ್ವಪ್ನ 620 ಅಂಕಗಳಿಸಿ ತಾಲೂಕಿನ ಕೀರ್ತಿ ಬೆಳಗಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಟ್ಟಣದ ಎಸ್.ಕೆ.ಚಿಕ್ಕಣ್ಣಗೌಡ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಜೆ.ಧೃತಿ 625 ಅಂಕಗಳಿಗೆ 625 ಅಂಕಗಳಿಸಿ ರಾಜ್ಯದಲ್ಲಿ ಟಾಪರ್ ವಿದ್ಯಾರ್ಥಿಗಳ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಶಾಲೆಯ ಗೀತಾಂಜಲಿ 623 ಅಂಕ ಪಡೆದು ಗಮನಾರ್ಹ ಸಾಧನೆ ಮಾಡಿದ್ದರೆ, ಆರ್.ಎಸ್.ಸ್ವಪ್ನ 620 ಅಂಕಗಳಿಸಿ ತಾಲೂಕಿನ ಕೀರ್ತಿ ಬೆಳಗಿದ್ದಾರೆ.

ಪರೀಕ್ಷೆಯಲ್ಲಿ ತಾಲೂಕಿಗೆ ಶೇ.60.88 ಫಲಿತಾಂಶ ಪಡೆದಿದೆ. ಒಟ್ಟು 2544 ಮಕ್ಕಳು ಪರೀಕ್ಷೆ ಬರೆದು 1549 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ತಾಲೂಕಿನ ಗವಿಮಠದ ಮೊರಾರ್ಜಿ ವಸತಿ ಶಾಲೆ ಶೇ.100 ಫಲಿತಾಂಶ ಬಂದಿದೆ ಎಂದು ಬಿಇಒ ವೈ.ಕೆ.ತಿಮ್ಮೇಗೌಡ ತಿಳಿಸಿದ್ದಾರೆ.

ಜೆ.ಧೃತಿ ಸೇರಿ ಮೂವರು ವಿದ್ಯಾರ್ಥಿಗಳಿಗೆ ಅಭಿನಂದನೆ:

ರಾಜ್ಯದ ಟಾಪರ್‌ಗಳ ಸಾಲಿನಲ್ಲಿರುವ ಜೆ.ಧೃತಿ ತಾಲೂಕಿನ ಶಿಕ್ಷಕ ದಂಪತಿ ಜ್ಞಾನೇಶ್ ಮತ್ತು ಜೆ.ರಶ್ಮಿ ಅವರ ಪುತ್ರಿ. ಕೇವಲ 2 ಅಂಕಗಳ ಹಿನ್ನಡೆಯಿಂದ ಟಾಪರ್ ಸ್ಥಾನ ವಂಚಿತಳಾದ ಗೀತಾಂಜಲಿ ತಾಪಂ ಯೋಜನಾಧಿಕಾರಿ ಶ್ರೀನಿವಾಸ್ ಮತ್ತು ಬಿ.ಕೆ.ರಾಧಾ ದಂಪತಿ ಪುತ್ರಿ. 620 ಅಂಕಗಳಿಸಿದ ಆರ್.ಎಸ್.ಸ್ವಪ್ನ ಪಟ್ಟಣದ ಸುಭಾಷ್ ನಗರದಲ್ಲಿ ಸಿಹಿ ತಿನಿಸುಗಳ ಮಾರಾಟ ವ್ಯಾಪಾರ ನಡೆಸುತ್ತಿರುವ ರಮೇಶ್ ಮತ್ತು ಸರ್ವಮಂಗಳ ದಂಪತಿಯ ಪುತ್ರಿ.

ವಿದ್ಯಾರ್ಥಿಗಳಾದ ಜೆ.ಧೃತಿ, ಗೀತಾಂಜಲಿ ಮತ್ತು ಆರ್.ಎಸ್.ಸ್ವಪ್ನ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ ಶಿಕ್ಷಣ ಇಲಾಖೆ ಪರವಾಗಿ ಅಭಿನಂದಿಸಿದರು. ಪಟ್ಟಣದ ಬಿಇಒ ಕಚೇರಿಯಲ್ಲಿ ಪೋಷಕರೊಂದಿಗೆ ಆಗಮಿಸಿದ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದ ತಿಮ್ಮೇಗೌಡರು ನಿಮ್ಮೆಲ್ಲರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.