ಗೇಣಿದಾರರ ಪರ ಶ್ರಮಿಸಿದ ಧೀಮಂತ ನಾಯಕ ಜೆ.ಎಸ್‌.ಪಟೇಲ್‌

| Published : Jun 13 2024, 12:46 AM IST

ಸಾರಾಂಶ

ಸೊರಬ ಪಟ್ಟಣದಲ್ಲಿ ವಿಶ್ವಮಾನವ ಶಕ್ತಿ ಸತ್ಯಶೋಧಕ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ರೈತ ಮುಖಂಡ ತೇಜಸ್ವಿ ಪಾಟೀಲ್ ಭಾಗವಹಿಸಿ ಜೆ.ಹೆಚ್.ಪಟೇಲ್ ಅವರ ಕಾರ್ಯಗಳನ್ನು ಶ್ಲಾಘಿಸಿದರು.

ಕನ್ನಡಪ್ರಭ ವಾರ್ತೆ ಸೊರಬ

ಆರ್ಥಿಕವಾಗಿ ಪ್ರಬಲವಾಗಿದ್ದ ಕುಟುಂಬದಲ್ಲಿ ಬೆಳೆದರೂ ಸಾರ್ವಜನಿಕ ಜೀವನದಲ್ಲಿ ಬಡವರು ಮತ್ತು ಗೇಣಿದಾರರ ಪರವಾಗಿ ಚಿಂತನೆ ನಡೆಸಿ ಅವರ ಅಭ್ಯುದಯಕ್ಕೆ ಶ್ರಮಿಸಿದ ಧೀಮಂತರಲ್ಲಿ ಮಾಜಿ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್ ಮುಂಚೂಣಿ ನಾಯಕರಾಗಿದ್ದರು ಎಂದು ಜೆ.ಹೆಚ್.ಪಟೇಲ್ ಅವರ ಸಹೋದರ ಪುತ್ರ, ರೈತ ಮುಖಂಡ ತೇಜಸ್ವಿ ಪಟೇಲ್ ಹೇಳಿದರು.

ಮಂಗಳವಾರ ಪಟ್ಟಣದ ನಿಜಗುಣ ರೆಸಿಡೆನ್ಸಿ ಸಭಾಂಗಣದಲ್ಲಿ ವಿಶ್ವಮಾನವ ಶಕ್ತಿ ಸತ್ಯಶೋಧಕ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸಮಾಜವಾದದ ಮೇಲೆ ಅತೀವ ನಂಬಿಕೆ ಹೊಂದಿದ್ದ ಅವರು ಬದುಕಿನದ್ದಕ್ಕೂ ಅದನ್ನೇ ಅನುಸರಿಸಿದರೂಊ ಮತ್ತು ನುಡಿದಂತೆ ನಡೆದಕೊಂಡವರು. ಆದರೆ ಅವರ ರಾಜಕೀಯ ಪ್ರಭಾವ ಸ್ವಂತ ಮಕ್ಕಳಿಗೆ ಏಣಿಯಾಗಲಿಲ್ಲ. ಇತ್ತ ಹತ್ತಿರದ ಸಂಬಂಧಿಕರಿಗೂ ರಾಜಕಾರಣದಲ್ಲಿ ಬೆಳೆಸಲಿಲ್ಲ. ತಾವು ನಂಬಿದ ತತ್ವಕ್ಕೆ ಬದ್ಧ ರಾಗಿದ್ದ ಅವರು ಜನರ ಏಳಿಗೆ ಬಯಸುವ ವ್ಯಕ್ತಿ ರಾಜಕಾರಣದಲ್ಲಿ ಬೆಳೆಯಬೇಕು ಎನ್ನುವ ಉದ್ದೇಶ ಅವರದ್ದಾಗಿತ್ತು ಎಂದು ತಿಳಿಸಿದರು.

ಶಾಂತವೇರಿ ಗೋಪಾಲಗೌಡ, ರಾಮಮನೋಹರ ಲೋಹಿಯಾ, ಗಾಂಧೀಜಿ ಅವರ ಚಿಂತನೆಗಳನ್ನು ಒಪ್ಪಿಕೊಂಡಿದ್ದ ಪಟೇಲ್‌ರು ತಮ್ಮ ಅಧಿಕಾರಾವಧಿಯಲ್ಲಿ ಗೇಣಿದಾರರ ಹಾಗೂ ತಳ ಸಮುದಾಯದ ಪರವಾಗಿ ಆಡಳಿತ ನಡೆಸಿರುವುದನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಂಡರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ಸರಳ ವಿವಾಹಗಳು ಭವಿಷ್ಯದಲ್ಲಿ ಹೆಚ್ಚು ನಡೆದರೆ ಬಡವರು ಕೂಡ ಶ್ರೀಮಂತ ರಾಗಬಹುದು. ಸಮಾಜಮುಖಿ ಕೆಲಸಗಳನ್ನು ನೋಡಿ ಬದಲಾಗುವ ದಾರಿಗೆ ನಮ್ಮನ್ನು ನಾವು ತೆರೆದುಕೊಳ್ಳಬೇಕು. ಸರಳ ವಿವಾಹಗಳು ಹಿಂದೆ ನಮ್ಮ ಜನರು ಮಕ್ಕಳ ಮದುವೆಗಾಗಿ ಹೇಗೆ ಕಷ್ಟಪಡುತ್ತಿದ್ದರು ಎನ್ನುವ ವಾಸ್ತವಿಕತೆಗೆ ಹತ್ತಿರವಾಗುತ್ತಿವೆ ಎಂದು ಹೇಳಿದರು.

ವಿಶ್ವಮಾನವ ಶಕ್ತಿ ಸತ್ಯ ಶೋಧಕ ಸಮಾಜದ ಸಂಚಾಲಕ ಆರ್.ಬಿ.ಚಂದ್ರಪ್ಪ ಕೊಡಕಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿನ ಮಧ್ಯ ವ್ಯಸನದಂಥ ಮಾರಕ ಸ್ಥಿತಿಯ ಬಗ್ಗೆ ಹೋರಾಡುತ್ತಾ ಬಡವರನ್ನು ಮತ್ತಷ್ಟು ಬಡವರನ್ನಾಗಿ ಮಾಡುವ ಅದ್ದೂರಿ ವಿವಾಹ ಹಾಗೂ ಮಾರಿ ಹಬ್ಬದ ಆಚರಣೆಗಳಿಂದ ದೂರವಿರಲು ಸಮಾಜ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳುವ ಮೂಲಕ ಸಮಾಜ ಪರಿವರ್ತನೆಗೆ ದಾರಿ ಮಾಡಿಕೊಡುವುದು ಸಂಸ್ಥೆ ಉದ್ದೇಶವಾಗಿದ್ದು, ಯುವ ಜನತೆ ಇದಕ್ಕೆ ಕೈಜೋಡಿಸುವ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ಕುವೆಂಪು ಮಂತ್ರ ಮಾಂಗಲ್ಯ ಮೂಲಕ ಸರಳ ವಿವಾಹಕ್ಕೆ ಇಡೀ ಕುಟುಂಬವೇ ಇತರರಿಗೆ ಪ್ರೇರಣೆಯಾಗಿರುವ ಪತ್ರಕರ್ತ ಎಂ.ಎಲ್.ನೊಂಪಿ ಶಂಕರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆಗೈದ ಸಾಧಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ರಘು ಸ್ವಾದಿ ಚಂದ್ರಗುತ್ತಿ, ಚಂದ್ರಶೇಖರ್ ಚೌಟಿ, ಹನುಮಂತಪ್ಪ, ಜಿ.ಪಂ. ಮಾಜಿ ಸದಸ್ಯೆ ಕೆ.ಜಿ. ಲೋಲಾಕ್ಷಮ್ಮ, ಉಮೇಶ್, ಪ್ರವೀಣ್, ನಿವೃತ್ತ ಶಿಕ್ಷಕ ಎಸ್. ಕೃಷ್ಣಾನಂದ, ಮೋಹನ್‌ದಾಸ್, ಸೋಮಪ್ಪ ಕಡಸೂರು, ಶಿವಾನಂದ ಪಾಣಿ, ಲಕ್ಷ÷್ಮಣರಾವ್ ಯಂಕೆನ್, ನವಚೇತನ ಬುದ್ದಿಮಾಂದ್ಯ ಮಕ್ಕಳ ಶಾಲೆಯ ರಾಮಪ್ಪ, ರೇಣುಕಮ್ಮ, ಸದಾಶಿವ, ಶಿವಾನಂದಪ್ಪ ಇದ್ದರು.