ಭಟ್ಕಳದಲ್ಲಿ ಇಂದಿನಿಂದ ಹಲಸು ಮೇಳ

| Published : Jul 18 2025, 12:47 AM IST

ಸಾರಾಂಶ

ಹಲಸು ಮೇಳದಲ್ಲಿ ೬೦-೭೦ ಮಳಿಗೆಗಳಿಗೆ ಅವಕಾಶವಿದ್ದು, ವಿವಿಧ ಕಡೆಯಿಂದ ರೈತರು ಬಂದು ತಾವು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲಿದ್ದಾರೆ.

ಭಟ್ಕಳ: ಪಟ್ಟಣದ ಮಾರುತಿ ನಗರದ ರಾಘವೇಂದ್ರ ಮಠದ ಸನಿಹದಲ್ಲಿ ರಂಜನ್ ಇಂಡೇನ್ ಏಜೆನ್ಸಿ ಹಾಗೂ ಸ್ಪಂದನಾ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಜುಲೈ 18, 19, 20ರಂದು ಮೂರು ದಿನಗಳ ಹಲಸು ಮತ್ತು ಹಣ್ಣಿನ ಮೇಳ ಏರ್ಪಡಿಸಲಾಗಿದೆ ಎಂದು ಮೇಳದ ಆಯೋಜಕ ಬ್ರಹ್ಮಾವರದ ಗಣೇಶ ಶೆಟ್ಟಿ ಹೇಳಿದರು.

ಈ ಕುರಿತು ಪಟ್ಟಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹಲಸು ಮೇಳದ ಕುರಿತು ಮಾಹಿತಿ ನೀಡಿದರು.

ಹಲಸು ಮೇಳದಲ್ಲಿ ೬೦-೭೦ ಮಳಿಗೆಗಳಿಗೆ ಅವಕಾಶವಿದ್ದು, ವಿವಿಧ ಕಡೆಯಿಂದ ರೈತರು ಬಂದು ತಾವು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲಿದ್ದಾರೆ. ಹಲಸಿನ ಜೊತೆಗೆ ಇತರೆ ಹಣ್ಣುಗಳು ಕೂಡ ಲಭ್ಯವಿರಲಿದೆ ಎಂದರು.ಚಂದ್ರ ಬೊಕ್ಕೆ, ಇಂಡೋನೇಶಿಯಾದ ಹಲಸು, ಗಮ್‌ಲೆಸ್ ಹಲಸು, ಹಲಸಿನ ಹಣ್ಣಿನ ಐಸ್ ಕ್ರೀಮ್, ಮಿಲ್ಕ್ ಶೇಕ್, ಹೋಳಿಗೆ, ಜಿಲೇಬಿ, ಸಾಟ್, ಕಡಬು, ಮುಳ್ಕ, ಕೇಸರಿ ಬಾತ್, ಪಾಯಸ, ಹಪ್ಪಳ, ಚಿಪ್ಸ್, ಗುಜ್ಜೆ ಉಪ್ಪಿನಕಾಯಿ, ಪೋಡಿ, ಕಬಾಬ್, ಪತ್ರೋಡೆ, ಹಲಸಿನ ಹಣ್ಣಿನ ಐಸ್ ಕ್ರೀಂ ದೊರೆಯಲಿದೆ. ಮೇಳದಲ್ಲಿ ಇತರೆ ಹಣ್ಣುಗಳು, ಆಯುರ್ವೇದ ಉತ್ಪನ್ನಗಳು, ಹಲಸು, ಮಾವು ಸೇರಿದಂತೆ ಉತ್ತಮ ತಳಿಯ ಗಿಡಗಳು ಕೂಡ ದೊರೆಯಲಿದೆ. ಹಲಸಿನ ಮೇಳವನ್ನು ಭಟ್ಕಳದ ಜನತೆ ಸದುಪಯೋಗಪಡಿಸಿಕೊಳ್ಳಬೇಕು. ಮೇಳದಲ್ಲಿ ಹೆಚ್ಚು ವ್ಯಾಪಾರ ಆಗುವುಂತೆ ಮಾಡಿ ಇಲ್ಲಿಗೆ ವಿವಿಧ ಉತ್ಪನ್ನ ತಂದಿರುವ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ರಂಜನ ಇಂಡೇನ್ ಎಜೆನ್ಸಿನ ಮಾಲಕಿ ಶಿವಾನಿ ಶಾಂತರಾಮ ಮಾತನಾಡಿ, ಭಟ್ಕಳದಲ್ಲಿ ಎಲ್ಲರ ಸಹಕಾರದಿಂದ ಪ್ರಪ್ರಥಮ ಬಾರಿಗೆ ಹಲಸಿನ ಮತ್ತು ಹಣ್ಣು ಮೇಳ ಆಯೋಜಿಸಲಾಗಿದೆ. ಹಲಸಿನ ಮೇಳದಿಂದ ಹಲಸು ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದರೊಂದಿಗೆ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶವಿದೆ ಎಂದು ಹೇಳಿದರು.

ಕೃಷಿಕ ಸಮಾಜದ ಅಧ್ಯಕ್ಷ ಶ್ರೀಧರ ಹೆಬ್ಬಾರ ಮಾತನಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸ್ಪಂದನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಘವೇಂದ್ರ ನಾಯ್ಕ, ರೋಟರಿಯನ್ ನಜೀರ್ ಕಾಶಿಮಜಿ, ಶಾಂತಾರಾಮ ಭಟ್ಕಳ, ಸ್ಪಂದನ ಚಾರಿಟೇಬಲ್ ಟ್ರಸ್ಟ್‌ನ ಸದಸ್ಯರಾದ ಭವಾನಿ ಶಂಕರ ನಾಯ್ಕ, ಪಾಂಡು ನಾಯ್ಕ ಇದ್ದರು.