ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಸುಕ್ಷೇತ್ರ ಯಾದಾಪುರದ ಬೆಟ್ಟದ ಮೇಲಿರುವ ನಾಡಿನ ಲಕ್ಷಾಂತರ ಭಕ್ತರ ಆರಾಧ್ಯದೈವ ಶ್ರೀ ಜೇನುಕಲ್ಲು ಸಿದ್ಧೇಶ್ವರಸ್ವಾಮಿಯವರ ಮಹಾರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ಶ್ರದ್ಧಾಭಕ್ತಿ, ಸಂಭ್ರಮ ಹಾಗೂ ವೈಭವದೊಂದಿಗೆ ನೆರವೇರಿತು. ಚೈತ್ರ ಶುದ್ಧ ಹುಣ್ಣಿಮೆಯ ಅಂಗವಾಗಿ ಜರುಗಿದ ಈ ಜಾತ್ರಾ ಮಹೋತ್ಸವದಲ್ಲಿ ಬೆಳಗ್ಗಿನಿಂದಲೇ ಭಕ್ತರ ದಟ್ಟಣೆ ಕಂಡುಬಂದಿದ್ದು, ಇಡೀ ಕ್ಷೇತ್ರ ಧಾರ್ಮಿಕ ಉತ್ಸಾಹದಿಂದ ಕಂಗೊಳಿಸಿತು.ಪ್ರತಿವರ್ಷದಂತೆ ಈ ಬಾರಿಯೂ ಜಾತ್ರಾ ಮಹೋತ್ಸವವು ಸಂಪ್ರದಾಯಬದ್ಧವಾಗಿ ಆರಂಭಗೊಂಡಿತು. ಮೊದಲ ದಿನ ಬೆಳಿಗ್ಗೆ ಧ್ವಜಾರೋಹಣ, ಸಂಜೆ ಅಂಕುರಾರ್ಪಣೆ ಹಾಗೂ ನೂರೊಂದೆಡೆ ಸೇವೆ ನೆರವೇರಿತು. ಬಳಿಕ ಬಸವೇಶ್ವರ ಉತ್ಸವ, ಉಪ್ಪರಿಗೆ ಮಂಟಪದ ಗದ್ದುಗೆ ಸಾಮ್ರಾಜ್ಯೋತ್ಸವ, ಹುಲಿವಾಹನ ಉತ್ಸವ, ಸೂರ್ಯಮಂಡಲೋತ್ಸವ, ಬೆಳ್ಳಿಪಲ್ಲಕ್ಕಿ ಉತ್ಸವ, ಬಿಲ್ವವೃಕ್ಷೋತ್ಸವ, ಹರಕೆ ಹೊತ್ತ ಮಹಿಳೆಯರಿಂದ ಬಾಯಿಬೀಗ ಧಾರಣೆ, ಚಂದ್ರಮಂಡಲೋತ್ಸವ, ಅಗ್ನಿಕುಂಡೋತ್ಸವ ಹಾಗೂ ಕೆಂಚಮ್ಮನವರ ದೇವಸ್ಥಾನದಲ್ಲಿ ಗುಗ್ಗಳ ಸೇವೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ಭಕ್ತಿಭಾವದಿಂದ ಜರುಗಿದವು.ಸಂಪ್ರದಾಯದಂತೆ ಮಂಗಳವಾದ್ಯಗಳ ನಾದದ ನಡುವೆ ನಡೆ-ಮುಡಿ ಸೇವೆ ನೆರವೇರಿಸಲಾಯಿತು. ಬಳಿಕ ಬಗೆಬಗೆಯ ಹೂವುಗಳು ಹಾಗೂ ಬಣ್ಣಬಣ್ಣದ ವಸ್ತ್ರಗಳಿಂದ ಸಿಂಗರಿಸಲ್ಪಟ್ಟ ಮಹಾರಥದಲ್ಲಿ ಶ್ರೀ ಜೇನುಕಲ್ಲು ಸಿದ್ದೇಶ್ವರಸ್ವಾಮಿಯ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಮಹಾಮಂಗಳಾರತಿ ಬೆಳಗುತ್ತಿದ್ದಂತೆ ಶುಭ ಮುಹೂರ್ತದಲ್ಲಿ ಸಾವಿರಾರು ಭಕ್ತರು “ಶ್ರೀ ಸಿದ್ದೇಶ್ವರ ಸ್ವಾಮಿ” ನಾಮಸ್ಮರಣೆಯೊಂದಿಗೆ ರಥವನ್ನು ಎಳೆದು ತಮ್ಮ ಭಕ್ತಿಭಾವ ಸಮರ್ಪಿಸಿದರು.ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯದಲ್ಲಿ ಅರ್ಚಕರ ವೃಂದದಿಂದ ಸ್ವಾಮಿಯವರ ಪಾದಗಳಿಗೆ ವಿವಿಧ ಅಭಿಷೇಕ, ಅಲಂಕಾರ, ಅರ್ಚನೆ ಹಾಗೂ ವೇದಘೋಷಗಳೊಂದಿಗೆ ವಿಶೇಷ ಪೂಜೆಗಳು ನೆರವೇರಿದವು. ಬೆಟ್ಟದ ಮೇಲಿನ ದೇವಾಲಯ ಆವರಣ ಭಕ್ತರ ಜಯಘೋಷ, ಧಾರ್ಮಿಕ ವಿಧಿವಿಧಾನಗಳು ಹಾಗೂ ಪೂಜಾ ಸಂಭ್ರಮದಿಂದ ಕಂಗೊಳಿಸಿತು.ಜಾತ್ರೆಗೆ ಮತ್ತಷ್ಟು ಮೆರುಗು ತಂದದ್ದು ವಿವಿಧ ಜಾನಪದ ಕಲಾ ಪ್ರದರ್ಶನಗಳು. ಮಂಗಳವಾದ್ಯ, ವೀರಗಾಸೆ, ವೀರಭದ್ರ ಕುಣಿತ, ನಂದಿಧ್ವಜ ಕುಣಿತ ಸೇರಿದಂತೆ ಹಲವು ಕಲಾತಂಡಗಳು ನೀಡಿದ ಪ್ರದರ್ಶನಗಳು ಭಕ್ತರ ಗಮನ ಸೆಳೆದವು. ಧಾರ್ಮಿಕ ವೈಭವದ ಜೊತೆಗೆ ಜನಪದ ಸೊಗಡು ಬೆರೆತ ಈ ಉತ್ಸವವು ನೆರೆದಿದ್ದ ಜನರನ್ನು ಆಕರ್ಷಿಸಿತು.ಜಾತ್ರಾ ಮಹೋತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿತ್ತು. ಭಕ್ತರ ಅನುಕೂಲಕ್ಕಾಗಿ ಅರಸೀಕೆರೆ ನಗರದಿಂದ ಯಾದಾಪುರ ಕ್ಷೇತ್ರದವರೆಗೆ ರಾಜ್ಯ ಸಾರಿಗೆ ಸಂಸ್ಥೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿಕೊಟ್ಟಿತ್ತು. ಅಲ್ಲದೆ, ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಅಪಾರ ಸಂಖ್ಯೆಯ ಭಕ್ತರಿಗೆ ದೇವಾಲಯ ಅಭಿವೃದ್ಧಿ ಸಮಿತಿಯಿಂದ ನಿರಂತರ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು.