ಜಗದಾಳ ಗ್ರಾಮವೆಲ್ಲ ಪಗಡೆಮಯ

| Published : Oct 30 2024, 12:48 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ ತಾಲೂಕಿನ ಜಗದಾಳ ಗ್ರಾಮದಲ್ಲಿ ಬ್ರಹ್ಮದೇವರ ಜಾತ್ರೆ ನಿಮಿತ್ತ ಮಂಗಳವಾರ ಅಂತಾರಾಜ್ಯಮಟ್ಟದ ಹಗಲು ರಾತ್ರಿ ಪಗಡೆ ಪಂದ್ಯಾವಳಿಗಳು ನಡೆದು ಇಡೀ ಗ್ರಾಮದಲ್ಲಿ ಸರ್ವ ಪಗಡೆಮಯಂ ಎಂತಾಗಿತ್ತು. ಪಗಡೆ ಪಂದ್ಯಗಳು ಸಾವಿರಾರು ಜನರನ್ನು ಆಕರ್ಷಿಸಿದವು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ತಾಲೂಕಿನ ಜಗದಾಳ ಗ್ರಾಮದಲ್ಲಿ ಬ್ರಹ್ಮದೇವರ ಜಾತ್ರೆ ನಿಮಿತ್ತ ಮಂಗಳವಾರ ಅಂತಾರಾಜ್ಯಮಟ್ಟದ ಹಗಲು ರಾತ್ರಿ ಪಗಡೆ ಪಂದ್ಯಾವಳಿಗಳು ನಡೆದು ಇಡೀ ಗ್ರಾಮದಲ್ಲಿ ಸರ್ವ ಪಗಡೆಮಯಂ ಎಂತಾಗಿತ್ತು. ಪಗಡೆ ಪಂದ್ಯಗಳು ಸಾವಿರಾರು ಜನರನ್ನು ಆಕರ್ಷಿಸಿದವು.ಪಗಡೆ ಎಂದ ಕೂಡಲೇ ಕಣ್ಣ ಮುಂದೆ ಅನಾವರಣಗೊಳ್ಳುವುದು ಮಹಾಭಾರತದಲ್ಲಿ ಶಕುನಿ ಹಾಗೂ ಪಾಂಡವರ ಪಾತ್ರಗಳು. ಪಗಡೆಯಾಟದಿಂದ ತಮ್ಮ ಇಡೀ ಸರ್ವಸ್ವವನ್ನು ಕಳೆದುಕೊಳ್ಳುವ ಕಥೆ ಎಲ್ಲರ ಕಣ್ಮುಂದೆ ಇದೆ. ಆದರೆ, ಸಮೀಪದ ಜಾನಪದರ ಗ್ರಾಮ ಜಗದಾಳ ಗ್ರಾಮದಲ್ಲಿ ಪ್ರತಿ ವರ್ಷ ಬ್ರಹ್ಮದೇವರ ಹಬ್ಬದ ನಿಮಿತ್ತ ರಾಜ್ಯಮಟ್ಟದ ಹೊನಲು ಬೆಳಕಿನ ಮುಕ್ತ ಪಗಡೆ ಸ್ಪರ್ಧೆಯನ್ನು ಏಪಡಿಸುವುದರ ಜೊತೆಗೆ ಅದರಲ್ಲಿ ಜಯಶಾಲಿಯಾದವರಿಗೆ ನಗದು ಮತ್ತು ಪಾರಿತೋಷಕ ಬಹುಮಾನ ಕೂಡಾ ಕೊಡುವ ವಾಡಿಕೆ ಇದೆ.ಕಳೆದ ೩೦ ವರ್ಷಗಳಿಂದ ಪಗಡೆ ಆಟದ ಸ್ಪರ್ಧೆಯನ್ನು ಗ್ರಾಮದ ಹಿರಿಯರು ನಡೆಸಿಕೊಂಡು ಬಂದಿದ್ದು, ಅದು ಇಂದಿಗೂ ಮುಂದುವರೆದಿದೆ. ಇಂದು ನಡೆದ ಸ್ಪರ್ಧೆಯಲ್ಲಿ ಬಾಗಲಕೋಟೆ, ಬಿಜಾಪೂರ, ಗದಗ, ಬೆಳಗಾಂವ ಹಾಗೂ ಮಹಾರಾಷ್ಟ್ರ ರಾಜ್ಯದ ಸಾಂಗಲಿ, ಕೊಲ್ಲಾಪೂರ ಜಿಲ್ಲೆಗಳಿಂದ ನೂರಕ್ಕೂ ತಂಡಗಳು ಆಗಮಿಸಿದ್ದವು. ಪ್ರಥಮ ಬಹುಮಾನ ಬೈಕ್ ಸೇರಿದಂತೆ ₹೫೦,೦೦೧, ದ್ವಿತೀಯ ಬಹುಮಾನ ₹೩೦,೦೦೧, ತೃತೀಯ ಬಹುಮಾನ ₹೨೦,೦೦೧, ಚತುರ್ಥ ಬಹುಮಾನ ₹೧೦,೦೦೧ ಸೇರಿದಂತೆ ೮ ಬಹುಮಾನಗಳನ್ನು ವಿಜೇತರಿಗೆ ನೀಡಲಾಯಿತು.ಭಾರಿ ಕೂತುಹಲ ಮೂಡಿಸಿದ್ದ ಪ್ರತಿ ಪಂದ್ಯಗಳು ನೋಡುಗರ ಕಣ್ಮಣ ಸೆಳೆದವು. ಗ್ರಾಮೀಣ ಕ್ರೀಡೆಯಾಗಿರುವ ಪಗಡೆ ಈಗಲೂ ಕೂಡಾ ಇಂತಹ ಹಳ್ಳಿಗಳಲ್ಲಿ ತನ್ನದೇ ಆದ ಅಸ್ಥಿತ್ವ ಉಳಿಸಿಕೊಂಡು ಹೊರಟಿದ್ದು, ಅದಕ್ಕೆ ಜಗದಾಳ ಗ್ರಾಮದ ಬ್ರಹ್ಮದೇವರ ಹಬ್ಬದ ಜಾತ್ರಾ ಕಮೀಟಿ ಕೂಡಾ ಟೊಂಕಕಟ್ಟಿ ನಿಂತಿದೆ.ಗ್ರಾಮವೆಲ್ಲಾ ಪಗಡೆಮಯ:

ಪಗಡೆಯಾಟಕ್ಕೆ ಒಂದು ತಂಡದಲ್ಲಿ ೬ ಜನ ಆಟಗಾರರಿರುತ್ತಾರೆ. ಒಂದು ಆಟವಾಡಲು ಕನಿಷ್ಠ ೩ ಗಂಟೆಯಿಂದ ೫ ಗಂಟೆವರೆಗೆ ಸಮಯವಾದರೂ ಬೇಕು. ಹೀಗಾಗಿ ಇಡೀ ಜಗದಾಳ ಗ್ರಾಮದ ತುಂಬೆಲ್ಲ ಹಾಕಿದ್ದ ಶಾಮಿಯಾನದಲ್ಲಿ ಪಗಡೆ ಸ್ಪರ್ಧಾಳುಗಳೇ ಕಾಣಸಿಗುತ್ತ ಇಡೀ ಗ್ರಾಮವೆಲ್ಲಾ ಪಗಡೆಮಯವಾಗಿ ಕಾಣುತ್ತಿತ್ತು. ಶುಕ್ರವಾರ ರಾತ್ರಿ ಪ್ರಾರಂಭಗೊಂಡ ಪಗಡೆಯಾಟಗಳು ಸೋಮವಾರ ಇಡೀ ದಿನ ಪಗಡೆಯಾಟದಲ್ಲಿಯೇ ಗ್ರಾಮ ತಲ್ಲೀನವಾಗಿದ್ದು ವಿಶೇಷವಾಗಿತ್ತು.ಗ್ರಾಮೀಣ ಸೊಗಡು ಎದ್ದು ಕಾಣುತ್ತಿತ್ತು:

ಪಗಡೆಯಾಟವೆಂಬುವುದು ಸದ್ಯದ ಮಟ್ಟಿಗೆ ಗ್ರಾಮಗಳಿಗೆ ಮಾತ್ರ ಸೀಮಿತವಾಗಿವೆ. ಆಟವಾಡುವಾಗ ಆಗಾಗ ಚಹಾ ಸೇವನೆಯೊಂದಿಗೆ, ಎಲೆ ಅಡಿಕೆ ಜಗಿಯುವುದು ಕೆಲ ಆಟಗಾರರು ಆಟದ ಒತ್ತಡವನ್ನು ಕಡಿಮೆಗೊಳಿಸಿಕೊಳ್ಳುತ್ತಿದ್ದರು.

ಕೋಟ್‌..

ಇಂದಿನ ದಿನಗಳಲ್ಲಿ ನಮ್ಮಿಂದ ದೂರವಾಗುತ್ತಿರುವ ದೇಸಿ ಕ್ರೀಡೆಗಳನ್ನು ಪ್ರತಿಯೊಬ್ಬರು ಪ್ರೋತ್ಸಾಹಿಸಬೇಕು. ನಮ್ಮ ಮುಂದಿನ ಪೀಳಿಗೆಗೆ ದೇಸಿ ಕ್ರೀಡೆಗಳನ್ನು ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

-ಶೇಖರ ನೀಲಕಂಠ, ಸಮಾಜ ಸೇವಕ, ಜಗದಾಳ.