ಲೋಕಸಭಾ ಚುನಾವಣೆ: ವಿರೋಧದ ನಡುವೆಯೂ ಜಗದೀಶ್‌ ಶೆಟ್ಟರ್‌ಗೆ ಟಿಕೆಟ್‌

| Published : Mar 25 2024, 12:52 AM IST / Updated: Mar 25 2024, 09:14 AM IST

Jagadeesh Shetter

ಸಾರಾಂಶ

ನಿರೀಕ್ಷೆಯಂತೆ ಅಳೆದು ತೂಗಿ ಬಿಜೆಪಿ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರಿಗೆ ಬೆಳಗಾವಿ ಲೋಕಸಭಾ ಟಿಕೆಟ್ ಘೋಷಣೆ ಮಾಡಿದೆ.

ಬ್ರಹ್ಮಾನಂದ ಹಡಗಲಿಕನ್ನಡಪ್ರಭ ವಾರ್ತೆ ಬೆಳಗಾವಿನಿರೀಕ್ಷೆಯಂತೆ ಅಳೆದು ತೂಗಿ ಬಿಜೆಪಿ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರಿಗೆ ಬೆಳಗಾವಿ ಲೋಕಸಭಾ ಟಿಕೆಟ್ ಘೋಷಣೆ ಮಾಡಿದೆ.

ಈ ಮೂಲಕ ಬೆಳಗಾವಿ ಜಿಲ್ಲೆಯ ಸ್ಥಳೀಯ ನಾಯಕರ ಆಗ್ರಹವನ್ನು ಪರಿಗಣಿಸದೆಯೇ ಬಿಜೆಪಿ ಹೈ ಕಮಾಂಡ್ ಶೆಟ್ಟರ್‌ಗೆ ಮನ್ನಣೆ ನೀಡಿದೆ. 

ಸತತ ನಾಲ್ಕು ಬಾರಿ ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗಿದ್ದ ದಿ.ಸುರೇಶ ಅಂಗಡಿ ಅವರ ಸಂಬಂಧಿಯೂ ಆಗಿರುವ ಶೆಟ್ಟರ್‌ ಅವರ ಆಯ್ಕೆ ಅಂಗಡಿ ಕುಟುಂಬಕ್ಕೂ ಕೂಡ ವಿರೋಧಿಸಲೂ ಆಗದ, ಒಪ್ಪಿಕೊಳ್ಳಲೂ ಆಗದ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಹಲವರಿದ್ದರು ಆಕಾಂಕ್ಷಿಗಳು: ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಹಲವರು ಆಕಾಂಕ್ಷಿಗಳಾಗಿದ್ದರು. ಈ ಪೈಕಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಹಾಲಿ ಸಂಸದೆ ಮಂಗಲ ಅಂಗಡಿ, ಮಾಜಿ ಸಚಿವ ಮುರುಗೇಶ ನಿರಾಣಿ ಸೇರಿದಂತೆ ಹಲವರು ಟಿಕೆಟ್ ಮೇಲೆ ಕಣ್ಣಿಟ್ಟಿದ್ದರು. 

ಜತೆಗೆ ವಿಜಯಪುರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೆಸರು ಕೂಡ ಕೇಳಿ ಬಂದಿತ್ತು. ಆದರೆ, ಕೊನೆಗೂ ಹೈಕಮಾಂಡ್ ಶೆಟ್ಟರ್‌ ಹೆಸರನ್ನೇ ಅಂತಿಮಗೊಳಿಸಿದೆ.

ಯಡಿಯೂರಪ್ಪ ಕೈ ಮೇಲು: ಈ ಹಿಂದೆ 2023ರ ವಿಧಾನಸಭೆ ಚುನಾವಣೆ ವೇಳೆ ಟಿಕೆಟ್ ನೀಡದ್ದಕ್ಕೆ ಮುನಿಸಿಕೊಂಡು ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರಿದ್ದ ಶೆಟ್ಟರ್‌ರನ್ನು ಮನವೊಲಿಸಿ ಮತ್ತೆ ಬಿಜೆಪಿಗೆ ಕರೆತರುವಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಯಶಸ್ವಿಯಾಗಿದ್ದರು.

ಶೆಟ್ಟರ್‌ಗೆ ಬೆಳಗಾವಿ ಟಿಕೆಟ್ ನೀಡುವ ಮೂಲಕ ಯಡಿಯೂರಪ್ಪ ಅವರ ಕೈ ಮೇಲಾಗಿದೆ.ಶೆಟ್ಟರ್‌ ಕೂಡ ಹಾವೇರಿ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು. ಆದರೆ, ಹೈಕಮಾಂಡ್ ಅವರನ್ನು ಪರಿಗಣಿಸದೇ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಿತು. 

ಇದರಿಂದ ತೀವ್ರ ಮುನಿಸಿಕೊಂಡ ಶೆಟ್ಟರ್‌ ಅವರನ್ನು ಸಮಾಧಾನಪಡಿಸಲು ಬೆಳಗಾವಿ ಕ್ಷೇತ್ರದ ಟಿಕೆಟ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. 

ಹಾಲಿ ಸಂಸದೆ ಮಂಗಲ ಅವರು ಶೆಟ್ಟರ್‌ ಬಂದರೆ ತಮ್ಮ ಅಭ್ಯಂತರವಿಲ್ಲ ಎಂದು ಹಿಂದೆ ಹೇಳಿಕೆ ನೀಡಿದ್ದು ಕೂಡ ಹೈ ಕಮಾಂಡ್‌ಗೆ ವರವಾಯಿತು.

ಶೆಟ್ಟರ್‌ಗಿತ್ತು ತೀವ್ರ ವಿರೋಧ: ಜಗದೀಶ್‌ ಶೆಟ್ಟರ್‌ ಅವರು ಬೆಳಗಾವಿಯಿಂದ ಸ್ಪರ್ಧಿಸುವುದಕ್ಕೆ ಸ್ಥಳೀಯ ನಾಯಕರಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ, ಮಾಜಿ ಸಂಸದ ಕೆಎಲ್ಇ ಕಾರ್ಯಾಧ್ಯಕ್ಷ ಪ್ರಭಾಕರ್ ಕೋರೆ ಅವರ ನಿವಾಸದಲ್ಲಿ ಸಭೆ ಸೇರಿದ್ದ ಬೆಳಗಾವಿ ಪ್ರಮುಖರು, ಶೆಟ್ಟರ್‌ ಬದಲಾಗಿ ಸ್ಥಳೀಯ ನಾಯಕರಿಗೇ ಟಿಕೆಟ್ ನೀಡುವಂತೆ ಹೈಕಮಾಂಡ್‌ಗೆ ಒತ್ತಾಯಪಡಿಸಿದ್ದರು.

 ಮಾತ್ರವಲ್ಲ, ಶೆಟ್ಟರ್‌ ಬರುವ ಮುನ್ಸೂಚನೆ ಅರಿತ ಕೆಲವರು ‘ಗೋ ಬ್ಯಾಕ್’ ಆಭಿಯಾನವನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಆರಂಭಿಸಿದ್ದರು. 

ಇದಲ್ಲದೇ, ಸ್ಥಳೀಯ ಮುಖಂಡರಿಗೆ ಟಿಕೆಟ್ ನೀಡಬೇಕೆಂದು ರಾಜ್ಯಸಭಾ ಸದಸ್ಯ ಕಡಾಡಿ ಅವರ ನೇತೃತ್ವದ ನಿಯೋಗವು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಕೂಡ ಸಲ್ಲಿಸಿತ್ತು.

 ಆದರೆ, ಕೊನೆಗೂ ಶೆಟ್ಟರ ಅವರನ್ನು ಕರೆ ತಂದ ಯಡಿಯೂರಪ್ಪ ಅವರು ಶೆಟ್ಟರಗೆ ಟಿಕೆಟ್ ಕೊಡಿಸುವ ಮೂಲಕ ತಾವು ಕೊಟ್ಟ ವಚನವನ್ನು ಉಳಿಸಿಕೊಂಡಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಸ್ಥಳೀಯ ನಾಯಕರ ವಿರೋಧದ ನಡುವೆಯೂ ಬಿಜೆಪಿ ಹೈಕಮಾಂಡ್ ಶೆಟ್ಟರ್ ಅವರನ್ನು ಬೆಳಗಾವಿ ಲೋಕಸಭಾ ಅಭ್ಯರ್ಥಿಯಾಗಿ ಭಾನುವಾರ ಘೋಷಿಸಿದೆ. 

ಬಿಜೆಪಿಯ ಭದ್ರಕೋಟೆಯಾಗಿರುವ ಬೆಳಗಾವಿ ಕ್ಷೇತ್ರವನ್ನು ಶೆಟ್ಟರ್‌ ಅವರು ಬರುವ ಮೂಲಕ ಮೊದಲ ಬಾರಿ ಹೊರಗಿನವರಿಗೆ ಟಿಕೆಟ್ ನೀಡಲಾಗಿದೆ. 

ಇದು ತೀವ್ರ ಸವಾಲನ್ನು ಒಡ್ಡುವ ಲಕ್ಷಣಗಳು ಗೋಚರಿಸುತ್ತಿವೆ. ಇದರ ನಡುವೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪುತ್ರ ಮೃಣಾಲ ಹೆಬ್ಬಾಳಕರ ಸ್ಪರ್ಧೆ ಶೆಟ್ಟರ್‌ ಅವರಿಗೆ ಪ್ರಬಲ ಪೈಪೋಟಿ ನೀಡುವ ಎಲ್ಲ ಲಕ್ಷಣಗಳು ಕಾಣುತ್ತಿವೆ.