ದಾಬಸ್‍ಪೇಟೆ: ಜಗದ್ದುರು ರೇಣುಕಾಚಾರ್ಯರೇ ಸ್ಥಾಪಿಸಿರುವ ಮೇಲಣಗವಿ ಮಠ ಶ್ರೇಷ್ಠ ಇತಿಹಾಸ, ಭವ್ಯ ಪರಂಪರೆ ಹೊಂದಿದೆ. ಇಂತಹ ಪುಣ್ಯಕ್ಷೇತ್ರದಲ್ಲಿ ಜನಿಸಿದ್ದೇ ನಮ್ಮೆಲ್ಲರ ಸೌಭಾಗ್ಯ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಚಿವ ಈಶ್ವರ ಖಂಡ್ರೆ ಹೇಳಿದರು

ದಾಬಸ್‍ಪೇಟೆ: ಜಗದ್ದುರು ರೇಣುಕಾಚಾರ್ಯರೇ ಸ್ಥಾಪಿಸಿರುವ ಮೇಲಣಗವಿ ಮಠ ಶ್ರೇಷ್ಠ ಇತಿಹಾಸ, ಭವ್ಯ ಪರಂಪರೆ ಹೊಂದಿದೆ. ಇಂತಹ ಪುಣ್ಯಕ್ಷೇತ್ರದಲ್ಲಿ ಜನಿಸಿದ್ದೇ ನಮ್ಮೆಲ್ಲರ ಸೌಭಾಗ್ಯ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಚಿವ ಈಶ್ವರ ಖಂಡ್ರೆ ಹೇಳಿದರು.

ಸೋಂಪುರ ಹೋಬಳಿಯ ಮೇಲಣಗವಿ ಮಠದಲ್ಲಿ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಧರ್ಮ ಪ್ರಧಾನವಾದ ರಾಷ್ಟ್ರ. ಕಾಲಕಾಲಕ್ಕೆ ಋಷಿಗಳು, ಸಂತರು, ಸ್ವಾಮೀಜಿಗಳು, ಪವಾಡ ಪುರುಷರು ಆಯಾ ಕಾಲಮಾನಕ್ಕೆ ಸಮಾಜ ಬೆಳಗುವ ಕೆಲಸ ಮಾಡಿದ್ದಾರೆ. ಅದೇ ರೀತಿ ಜಗದ್ಗುರು ರೇಣುಕಾಚಾರ್ಯರು ರಾಷ್ಟ್ರಾದ್ಯಂತ ಸಂಚರಿಸಿ ಸಮಾಜದ ಹಿತಕ್ಕಾಗಿ ಧಾರ್ಮಿಕ ಜಾಗೃತಿ ಮೂಡಿಸಿದ್ದಾರೆ ಎಂದರು.

ಜಗತ್ತಿಗೆ ಸಾಮಾಜಿಕ ನ್ಯಾಯ ನೀಡಿದ್ದೇ ವೀರಶೈವ ಲಿಂಗಾಯತ ಸಮುದಾಯ ಎಂಬುವನ್ನು ನಾವು ಮರೆಯುವಂತಿಲ್ಲ, ನಾವು ಭೌತಿಕ ಸುಖಕ್ಕಾಗಿ ಹಣ, ಕೀರ್ತಿ ಗಳಿಸಲು ಮಾನವೀಯ, ನೈತಿಕ ಮೌಲ್ಯಗಳನ್ನು ಮರೆಯುತ್ತಿದ್ದೇವೆ. ಪ್ರೀತಿ, ವಿಶ್ವಾಸ ನಂಬಿಕೆ ಬಿಟ್ಟು ದ್ವೇಷ, ಅಸೂಯೆ, ಹಿಂಸೆಗಳಿಂದ ಒತ್ತಡದಲ್ಲಿ ಬದುಕುತ್ತಿದ್ದೇವೆ. ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ಸಂಘರ್ಷ ಹೆಚ್ಚಾಗುತ್ತಿದೆ. ಯುದ್ದದಿಂದ ಅಮಾನವೀಯ ಕೃತ್ಯಗಳು ನಡೆಯುತ್ತಿವೆ. ಧಾರ್ಮಿಕ ಸಭೆಗಳಿಂದ ಸಂಸ್ಕಾರ, ನೈತಿಕ ಮೌಲ್ಯಗಳನ್ನು ಕಲಿಯಬೇಕಿದೆ ಎಂದು ಹೇಳಿದರು.

ಪ್ರತಿಯೊಬ್ಬರು ವ್ಯಸನ ಮುಕ್ತ ಸಮಾಜಕ್ಕೆ ಕೈಜೋಡಿಸಬೇಕು. ಧರ್ಮೋ ರಕ್ಷಿತ ರಕ್ಷತಃ ಎಂಬಂತೆ ಧರ್ಮವನ್ನು ನಾವು ರಕ್ಷಿಸಿದರೇ ನಮ್ಮನ್ನು ಧರ್ಮ ರಕ್ಷಿಸುತ್ತದೆ. ನವಕರ್ನಾಟಕ, ನವಭಾರತ ನಿರ್ಮಾಣಕ್ಕೆ ಮಠಮಾನ್ಯಗಳ ಕೊಡುಗೆ ಅಪಾರ. ಅದರಲ್ಲೂ ವೀರಶೈವ ಲಿಂಗಾಯತ ಮಠಗಳು ಶಿಕ್ಷಣ, ದಾಸೋಹ, ಆಶ್ರಯ ಸಂಸ್ಕಾರ ನೀಡಿ ಅಗ್ರಸ್ಥಾನದಲ್ಲಿವೆ. ಜಾತ್ರೆಗಳು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಸಂಸ್ಕಾರವನ್ನು ಗಟ್ಟಿಗೊಳಿಸಿ ಎಲ್ಲರನ್ನೂ ಒಟ್ಟುಗೂಡಿಸುತ್ತವೆ.

ನಮ್ಮ ತಂದೆ ದಿ.ಭೀಮಣ್ಣ ಖಂಡ್ರೆಯವರು ಮಹಾಸಭಾದ ಅಧ್ಯಕ್ಷರಾಗಿದ್ದರು. ಅವರ ಹಾದಿಯಲ್ಲೇ ನಾನು ನಡೆಯುತ್ತೇನೆ ಎಂದರು.

ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ಮಠದ ಅಭಿವೃದ್ಧಿ ಕಾರ್ಯಗಳು, ಸೇವಾ ಕಾರ್ಯಗಳನ್ನು ಕಳೆದ ಐದು ವರ್ಷದಿಂದ ನೋಡುತ್ತಾ ಬರುತ್ತಿದ್ದೇನೆ. ಮಠದ ಋಣಿಯಾಗಿ ಸೇವಕನಾಗಿ ಕೆಲಸ ಮಾಡುತ್ತೇನೆ. ನನ್ನ ಕ್ಷೇತ್ರದ ಎಲ್ಲಾ ಮಠಗಳ ಅಭಿವೃದ್ಧಿಗೆ ಕೈ ಜೋಡಿಸಿ ಮಠಾಧೀಶರ ಜೊತೆ ಇರುತ್ತೇನೆ. ಇಂತಹ ಕ್ಷೇತ್ರದಲ್ಲಿ ಶಾಸಕನಾಗಿರುವುದು ನನ್ನ ಪುಣ್ಯ ಎಂದರು.

ಮೇಲಣಗವಿ ಮಠದ ಡಾ.ಶ್ರೀ ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮೇಲಣಗವಿ ಮಠ ನಮ್ಮ ಪರಂಪರೆಗೆ ಮಹತ್ವ ನೀಡುತ್ತದೆ. ರಂಭಾಪುರಿ ಪೀಠಕ್ಕೆ ಸುಮಾರು 12000 ಶಾಖಾ ಮಠಗಳಿದ್ದು, ಅದರಲ್ಲಿ ರೇಣುಕಾಚಾರ್ಯರ ಶಿಷ್ಯಪರಂಪರೆಯಿಂದ ಆರಂಭವಾದರೆ ಮೇಲಣಗವಿ ಮಠವೂ ರೇಣುಕರಿಂದಲೇ ಸ್ಥಾಪನೆ ಮಾಡಿರುವ ಇತಿಹಾಸವಿದೆ. ರೇಣುಕರು ತನ್ನ ಉತ್ತರಾಧಿಕಾರಿಗೆ ದೀಕ್ಷೆ ಕೊಡುವ ಸಂದರ್ಭದಲ್ಲಿ ಕಲಶಕ್ಕಾಗಿ ತನ್ನ ದಂಡದಿಂದ ತೀರ್ಥವನ್ನು ಉದ್ಭವಿಸಿದ ಒಳಕಲು ತೀರ್ಥದಲ್ಲಿ ಇಂದಿಗೂ ನೀರು ಬತ್ತಿಲ್ಲ. 5000 ಅಡಿಯ ಬೆಟ್ಟದ ಮೇಲೂ ನೀರು ಸಿಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ವಿಭೂತಿಪುರ ಮಠದ ಶ್ರೀ ಮಹಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಸಚ್ಚಿದಾನಂದಮೂರ್ತಿ, ಮುಖಂಡ ಅಗಳಕುಪ್ಪೆ ಗೋವಿಂದರಾಜು, ಎನ್‌ಪಿಎ ಮಾಜಿ ಅಧ್ಯಕ್ಷ ನಾರಾಯಣಗೌಡ, ಸದಸ್ಯ ಅಂಚೆಮನೆ ಪ್ರಕಾಶ್, ನಗರಸಭೆ ಸದಸ್ಯ ಪ್ರದೀಪ್, ಗ್ರಾಪಂ ಮಾಜಿ ಅಧ್ಯಕ್ಷ ಉಮಾಶಂಕರ್, ಪಂಚಾಕ್ಷರಿ, ಅಭಾವಿಲೀಂ ಮಾಜಿ ಅಧ್ಯಕ್ಷ ಕೆ.ಸಿ.ಅಣಪ್ಪ ಮತ್ತಿತ್ತರಿದ್ದರು.

ಪೋಟೋ 2 :

ಮೇಲಣಗವಿ ಮಠದಲ್ಲಿ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಧಾರ್ಮಿಕ ಸಭೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಚಿವ ಈಶ್ವರ ಖಂಡ್ರೆ ಅವರನ್ನು ಶ್ರೀಗಳು ಸನ್ಮಾನಿಸಿದರು.