ಛಲವೊಂದಿದ್ದರೆ ಬಡತನ, ಹಿಂದುಳಿದಿರುವಿಕೆ ಎಂಬ ಯಾವುದೂ ಸಾಧನೆಗೆ ಅಡ್ಡಿಯಾಗುವುದಿಲ್ಲ. ಇದನ್ನು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹೆಣ್ಣುಮಗಳೊಬ್ಬರು ಜಾಗತಿಕ ಮಟ್ಟದಲ್ಲಿ ಸಾಬೀತುಪಡಿಸಿದ್ದಾರೆ.

- ಬೆಂಗಳೂರಿನ ಮರ ವಿಜ್ಞಾನ-ತಂತ್ರಜ್ಞಾನ ಸಂಸ್ಥೆಯಲ್ಲಿ ಸಸ್ಯರೋಗ ಶಾಸ್ತ್ರಜ್ಞೆ, ವಿಜ್ಞಾನಿಯಾಗಿ ಸೇವೆ

- - -

- ಜಾಗತಿಕ ಸಂಶೋಧನೆಗಾಗಿ 9,700 ಅಮೆರಿಕನ್ ಡಾಲರ್ ಆರ್ಥಿಕ ನೆರವು ಮಂಜೂರು, ವಿದೇಶಕ್ಕೆ ಪ್ರಯಾಣ

- ಮಧ್ಯ ಯೂರೋಪ್‌ನ ಸ್ಲೋವೇನಿಯಾ ದೇಶದ ಲುಬ್ಜ್ಲಾನಾ ವಿ.ವಿ.ಯಲ್ಲಿ ನೀಡಲಾಗುವ 2025ರ ಫೆಲೋಶಿಪ್‌ - ಈ ಬಾರಿ ವಿಶ್ವದ 11 ಸದಸ್ಯ ರಾಷ್ಟ್ರಗಳಿಂದ ಕೇವಲ 11 ಜನರನ್ನು ಮಾತ್ರ ಫೆಲೋಶಿಪ್‌ ಗೌರವಕ್ಕೆ ಆಯ್ಕೆ

- - -

ಕನ್ನಡಪ್ರಭ ವಾರ್ತೆ ಜಗಳೂರು

ಛಲವೊಂದಿದ್ದರೆ ಬಡತನ, ಹಿಂದುಳಿದಿರುವಿಕೆ ಎಂಬ ಯಾವುದೂ ಸಾಧನೆಗೆ ಅಡ್ಡಿಯಾಗುವುದಿಲ್ಲ. ಇದನ್ನು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹೆಣ್ಣುಮಗಳೊಬ್ಬರು ಜಾಗತಿಕ ಮಟ್ಟದಲ್ಲಿ ಸಾಬೀತುಪಡಿಸಿದ್ದಾರೆ.

ತಾಲೂಕಿನ ಜ್ಯೋತಿಪುರ ಗ್ರಾಮದ ಪ್ರತಿಭಾನ್ವಿತ ವಿಜ್ಞಾನಿ ಡಾ. ವಿ.ರತ್ನ ಅವರು ಮಧ್ಯ ಯೂರೋಪ್‌ನ ಸ್ಲೋವೇನಿಯಾ ದೇಶದ ಲುಬ್ಜ್ಲಾನಾ ವಿಶ್ವವಿದ್ಯಾನಿಲಯದಲ್ಲಿ ನೀಡಲಾಗುವ ‘2025ರ ಪ್ರತಿಷ್ಠಿತ **(International Tropical Timber Organization ** (ಐಟಿಟಿಒ) ಫೆಲೋಶಿಪ್‌ಗೆ ಆಯ್ಕೆಯಾಗುವ ಮೂಲಕ ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ್ದಾರೆ.

​ಜಪಾನ್‌ನ ಯೊಕೊಹಾಮಾದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಅಂತರ ರಾಷ್ಟ್ರೀಯ ಉಷ್ಣವಲಯ ಮರದ ಸಂಸ್ಥೆ **(ITTO)** ನೀಡುವ ಈ ಉನ್ನತ ಮಟ್ಟದ ತರಬೇತಿಗೆ ವಿಶ್ವದಾದ್ಯಂತ ತೀವ್ರ ಪೈಪೋಟಿ ಇರುತ್ತದೆ. ಈ ಬಾರಿ ವಿಶ್ವದ 11 ಸದಸ್ಯ ರಾಷ್ಟ್ರಗಳಿಂದ ಕೇವಲ 11 ಜನರನ್ನು ಮಾತ್ರ ಈ ಗೌರವಕ್ಕೆ ಆಯ್ಕೆ ಮಾಡಲಾಗಿದ್ದು, ಆ ಪೈಕಿ ಆಯ್ಕೆಯಾದ ಅರ್ಧದಷ್ಟು ಮಹಿಳಾ ವಿಜ್ಞಾನಿಗಳಲ್ಲಿ ಭಾರತದ ಡಾ.ರತ್ನ ಅವರೂ ಒಬ್ಬರಾಗಿದ್ದಾರೆ ಎಂಬುದು ವಿಶೇಷ.

​ಯೂರೋಪ್‌ನಲ್ಲಿ ಉನ್ನತ ಸಂಶೋಧನಾ ತರಬೇತಿ:

​ಡಾ.ರತ್ನ ಅವರು ಸದ್ಯ ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಮಾನ ಬದಲಾವಣೆ ಸಚಿವಾಲಯದ ಅಧೀನದಲ್ಲಿರುವ ಬೆಂಗಳೂರಿನ ''''ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ'''' **(IWST)** ಯಲ್ಲಿ ಸಸ್ಯರೋಗ ಶಾಸ್ತ್ರಜ್ಞೆ ಹಾಗೂ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ​ಇದೀಗ ಐಟಿಟಿಒ ಸಂಸ್ಥೆಯಡಿ "ಮರಗಳ ಸುಧಾರಿತ ಸ್ಥಳ ಮೌಲ್ಯಮಾಪನ ಮತ್ತು ಸಂರಕ್ಷಣೆ " **(Advanced Standing Tree Assessment and Conservation)** ಎಂಬ ವಿಷಯದ ಕುರಿತು ಜೂನ್ 1 ರಿಂದ ಜುಲೈ 31 ರವರೆಗೆ ಸ್ಲೋವೇನಿಯಾ ವಿಶ್ವವಿದ್ಯಾನಿಲಯದಲ್ಲಿ ಉನ್ನತಮಟ್ಟದ ಸಂಶೋಧನಾ ತರಬೇತಿ ಪಡೆಯಲಿದ್ದಾರೆ. ಈ ಜಾಗತಿಕ ಸಂಶೋಧನೆಗಾಗಿ ಅವರಿಗೆ 9,700 ಅಮೆರಿಕನ್ ಡಾಲರ್ ಆರ್ಥಿಕ ನೆರವು (ಸ್ಕಾಲರ್‌ಶಿಪ್) ಕೂಡ ಮಂಜೂರಾಗಿದ್ದು, ಅವರು ವಿದೇಶ ಪ್ರಯಾಣ ಬೆಳೆಸಿದ್ದಾರೆ.

​ಗ್ರಾಮೀಣ ಪ್ರತಿಭೆಯ ಅಸಾಧಾರಣ ಹಾದಿ:

​ಡಾ.ರತ್ನ ಅವರ ಈ ಸಾಧನೆಯ ಹಿಂದಿರುವುದು ಕಡುಬಡತನ ಮತ್ತು ಕಠಿಣ ಪರಿಶ್ರಮದ ಕಥೆ. ಜಗಳೂರು ತಾಲೂಕಿನ ಜ್ಯೋತಿಪುರ ಗ್ರಾಮದ ಸಾಮಾನ್ಯ ದಲಿತ ಕುಟುಂಬದಲ್ಲಿ ಜನಿಸಿದ ಅವರ ತಂದೆ ವೆಂಕಟೇಶ್ ಡಿ-ಗ್ರೂಪ್ ದಿನಗೂಲಿ ನೌಕರ. ತಾಯಿ ಮಹಾಂತಮ್ಮ ಅಂಗನವಾಡಿ ಕಾರ್ಯಕರ್ತೆಯಾಗಿದ್ದಾರೆ. ಪೋಷಕರ ಕಷ್ಟವನ್ನು ಕಣ್ಣಾರೆ ಕಂಡಿದ್ದ ರತ್ನ, ಶಿಕ್ಷಣವನ್ನೇ ಅಸ್ತ್ರವಾಗಿಸಿಕೊಂಡು, ಸಾಧನೆಯಲ್ಲಿ ತೊಡಗಿದವರು.

​ಶಿಕ್ಷಣದ ಹೆಜ್ಜೆಗಳು:

​ಪಿಯುಸಿ ಶಿಕ್ಷಣವನ್ನು ಜಗಳೂರಿನ ನಾಲಂದ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ. ಬಿಎಸ್ಸಿ (ಅಗ್ರಿ)ಯಲ್ಲಿ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾನಿಲಯದಲ್ಲಿ ಪದವಿ. ಎಂಎಸ್ಸಿ ಹಾಗೂ ಪಿಎಚ್‌.ಡಿ: ಬೆಂಗಳೂರಿನ ಪ್ರತಿಷ್ಠಿತ ಜಿಕೆವಿಕೆ **(GKVK)** ವಿಶ್ವವಿದ್ಯಾನಿಲಯದಲ್ಲಿ ಸಸ್ಯರೋಗ ಶಾಸ್ತ್ರ ಸಂಶೋಧನಾ ವಿಷಯದಲ್ಲಿ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಗಳಿಸಿದ್ದಾರೆ.

​ವಿದ್ಯಾರ್ಥಿ ಜೀವನದಲ್ಲೂ ಅತ್ಯಂತ ಪ್ರತಿಭಾವಂತರಾಗಿದ್ದ ಡಾ.ರತ್ನ ಅವರು ಹಲವಾರು ಮೆರಿಟ್ ಸ್ಕಾಲರ್‌ಶಿಪ್‌ಗಳನ್ನು ಪಡೆದುಕೊಂಡಿದ್ದರು. ಅಷ್ಟೇ ಅಲ್ಲದೇ, ‘ಯುಎಎಸ್ ಬಿ ಸೈನ್ಸ್ ವರ್ಕ್ 2021’ ರಲ್ಲಿ **(UASB Science Work 2021)** ಅತ್ಯುತ್ತಮ ಮೌಖಿಕ ಪ್ರಬಂಧ ಮಂಡನೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.

​ಹಳ್ಳಿಗರ ಸಂಭ್ರಮ, ಹೆಮ್ಮೆಯ ಮಹಾಪೂರ:

​ಬರಪೀಡಿತ ತಾಲೂಕಿನ ಹಳ್ಳಿಯೊಂದರಿಂದ ಹೊರಟು, ಇಂದು ಯೂರೋಪ್ ದೇಶದ ಅತ್ಯುನ್ನತ ವಿಶ್ವವಿದ್ಯಾನಿಲಯದಲ್ಲಿ ಜಾಗತಿಕ ಪರಿಸರ ಮತ್ತು ಮರಗಳ ಸಂರಕ್ಷಣೆ ಕುರಿತು ಸಂಶೋಧನೆ ನಡೆಸಲು ಆಯ್ಕೆಯಾಗಿರುವ ಡಾ. ರತ್ನ ಅವರ ಸಾಧನೆಗೆ ಜಗಳೂರು ತಾಲೂಕಿನಾದ್ಯಂತ ಶ್ಲಾಘನೆ ವ್ಯಕ್ತವಾಗುತ್ತಿದೆ. ಮಗಳ ಅಸಾಧಾರಣ ಸಾಧನೆಗೆ ಪೋಷಕರಾದ ವೆಂಕಟೇಶ್, ಮಹಾಂತಮ್ಮ, ಸಹೋದರ ಡಾ. ಪ್ರವೀಣ್ ಹಾಗೂ ಜ್ಯೋತಿಪುರ ಗ್ರಾಮಸ್ಥರು ಸೇರಿದಂತೆ ತಾಲೂಕಿನ ಗಣ್ಯರು ಹೆಮ್ಮೆಯಿಂದ ಶುಭ ಹಾರೈಸಿದ್ದಾರೆ. ಗ್ರಾಮೀಣ ಭಾಗದ ಹೆಣ್ಣುಮಕ್ಕಳಿಗೆ ಡಾ.ರತ್ನ ಅವರ ಸಾಧನೆ ದಾರಿದೀಪವಾಗಿದೆ.

- - -

-31ಜೆ.ಜಿ.ಎಲ್.1: ಡಾ. ವಿ.ರತ್ನ