ಸಾರಾಂಶ
ಕನ್ನಡಪ್ರಭ ವಾರ್ತೆ ಜಗಳೂರು
ಕ್ಷೇತ್ರದ ಮಾಜಿ ಶಾಸಕ ಎಚ್.ಪಿ.ರಾಜೇಶ್ ತಮ್ಮ ಸಾವಿರಾರು ಬೆಂಬಲಿಗರ ಜೊತೆ ಗುರುವಾರ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವ ಸಿ.ಟಿ.ರವಿ, ಸಂಸದ ಜಿ.ಎಂ.ಸಿದ್ದೇಶ್ವರ್, ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾಜಿ ಶಾಸಕ ಎಚ್ .ಪಿ.ರಾಜೇಶ್, ಬೈಲವಂಗಲದ ಮಾಜಿ ಶಾಸಕ ಡಾ.ವಿಶ್ವನಾಥ್ ಪಾಟೀಲ್, ಮಾಜಿ ಸಚಿವ ಬಾಬುರಾವ್ ಚೌವಾಣ್ , ಎಲಿಗಾರ್ ರಿಗೆ ಬಿಜೆಪಿ ಶಾಲು ಹಾಕಿ ಬರ ಮಾಡಿಕೊಂಡು ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಗಾಳಿ ಬೀಸುತ್ತಿದ್ದು ಮುಂದಿನ ದಿನಗಳಲ್ಲಿ ಬಹಳಷ್ಟು ಮುಖಂಡರು ಬಿಜೆಪಿ ಸೇರಲಿದ್ದು, ಪಕ್ಷದ ಬಲವರ್ಧನೆಗೆ ಬಳಸಿಕೊಳ್ಳುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮೂಲಕ 3ನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿ ಆಗಬೇಕೆನ್ನುವ ನಿಟ್ಟಿನಲ್ಲಿ ಅಭೂತಪೂರ್ವ ವಾತಾವರಣ ಉಂಟಾಗಿದೆ ಎಂದರು.
ಬದಲಾವಣೆ ಗಾಳಿ ಬೀಸುತ್ತಿದೆ:ಈ ವೇಳೆ ಮಾಜಿ ಶಾಸಕ ಎಚ್.ಪಿ.ರಾಜೇಶ್ ಪತ್ರಕರ್ತರೊಂದಿಗೆ ಮಾತನಾಡಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ನಾನು ಮೂಲತಃ ಬಿಜೆಪಿಯಿಂದಲೇ ರಾಜಕೀಯ ಪ್ರವೇಶಿಸಿದ್ದು. ಬದಲಾದ ರಾಜಕೀಯ ವಿದ್ಯಮಾನಗಳಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ಒಮ್ಮೆ ಶಾಸಕನಾಗಿ ಆಯ್ಕೆಯಾದೆ. ಆದರೆ ಕಳೆದ ಬಾರಿ ನಾನು ಗೆಲ್ಲುವ ಲಕ್ಷಣಗಳಿದ್ದರೂ ಆ ಪಕ್ಷದ ಮುಖಂಡರು ನನಗೆ ಟಿಕೆಟ್ ಕೊಡಲಿಲ್ಲ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 48 ಸಾವಿರಕ್ಕೂ ಅಧಿಕ ಮತಗಳಿಸಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಸಂಸದ ಜಿ.ಎಂ.ಸಿದ್ದೇಶ್ವರ್ ಹಾಗೂ ಮುಖಂಡರ ಆಹ್ವಾನದ ಮೇರೆಗೆ ಮತ್ತೆ ಮಾತೃಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಪಕ್ಷ ಬಲವರ್ಧನೆ ಮಾಡಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಆಡಳಿತಕ್ಕೆ ತರುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಸಂಸದ ಜಿ.ಎಂ. ಸಿದ್ದೇಶ್ವರ್ ಮಾತನಾಡಿ, ಪಕ್ಷದ ಸಿದ್ಧಾಂತ ಒಪ್ಪಿ ಯಾರೇ ಬಂದರೂ ಅವರನ್ನು ಸ್ವಾಗತಿಸುತ್ತೇವೆ. ಪಕ್ಷದ ಬಲವರ್ಧನೆ ಅವರ ಸೇವೆ ಅಗತ್ಯವಿದೆ. ಈ ಬಾರಿ ಮತ್ತೊಮ್ಮೆ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೆದ್ದೆ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಹೂಗುಚ್ಛ ನೀಡಿ ಸ್ವಾಗತಿಸಿದ ಎಸ್‌ವಿಆರ್:
ರಾಜಕೀಯವಾಗಿ ವಿರುದ್ಧ ಅಭ್ಯರ್ಥಿಯಾಗಿದ್ದ ಎಚ್.ಪಿ.ರಾಜೇಶ್ ಬಿಜೆಪಿ ಸೇರ್ಪಡೆಯಾಗುತ್ತಿದ್ದಂತೆ ಪಕ್ಷದ ಕಚೇರಿಯಲ್ಲಿ ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಪರಸ್ಪರ ಹೂಗುಚ್ಛ ವಿನಿಮಯ ಮಾಡಿಕೊಂಡರು. ನಂತರ ಎಲ್ಲರೂ ಮಾಜಿ ಸಿಎಂ ಬಿಎಸ್ವೈ ಭೇಟಿಯಾಗಿ ಆಶೀರ್ವಾದ ಪಡೆದರು.ಬಿಜೆಪಿಗೆ ಸೇರ್ಪಡೆಯಾದವರು
ಮಾಜಿ ಎಪಿಎಂಸಿ ಅಧ್ಯಕ್ಷ ಎಲ್ಬಿ. ಬೈರೇಶ್, ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎನ್.ಎಸ್.ರಾಜು, ಬಿಳಿಚೋಡು ಜಿ.ಪಂ.ಮಾಜಿ ಸದಸ್ಯೆ ಉಮಾ ವೆಂಕಟೇಶ್, ಮಾಜಿ ತಾಪಂ ಸದಸ್ಯ ಕುಬೇಂದ್ರಪ್ಪ, ಹನುಮಂತಾಪುರ ಬಸವರಾಜ್, ರೇವಣ್ಣ, ಲೋಕೇಶ್, ವೀರೇಶ್, ತಿಪ್ಪೇಸ್ವಾಮಿ ಸೇರಿ ಕ್ಷೇತ್ರದ ಸಾವಿರಾರು ಬೆಂಬಲಿಗರು ಬಿಜೆಪಿ ಸೇರ್ಪಡೆಯಾದರು.