ಸಾರಾಂಶ
- ಈ ಬಾರಿ ₹11 ಲಕ್ಷ ವೆಚ್ಚದಲ್ಲಿ ತಯಾರಾದ ನೂತನ ರಥದಲ್ಲಿ ಸ್ವಾಮಿ ಮೆರವಣಿಗೆ । ಉತ್ಸವಕ್ಕೆ ಮೆರುಗು ತಂದ ಜಾನಪದ ಕಲಾತಂಡಗಳು - - - ಕನ್ನಡಪ್ರಭ ವಾರ್ತೆ ದಾವಣಗೆರೆ ಒರಿಸ್ಸಾ ರಾಜ್ಯದ ಪುರಿಯಲ್ಲಿ ಪ್ರತಿವರ್ಷ ಅದ್ಧೂರಿಯಾಗಿ ನಡೆಯುವ ಜಗನ್ನಾಥ ಯಾತ್ರೆ ವಿಶ್ವ ಪ್ರಸಿದ್ಧವಾಗಿದೆ. ಅದೇ ಮಾದರಿಯಲ್ಲಿ ಇಸ್ಕಾನ್ ದೇವಾಲಯದಿಂದ ಆಯೋಜಿಸಿದ್ದ ಮೂರನೇ ವರ್ಷದ ಶ್ರೀ ಜಗನ್ನಾಥ ರಥಯಾತ್ರೆಯು ಇಸ್ಕಾನ್ ದಾವಣಗೆರೆ ಮುಖ್ಯಸ್ಥ ಅವಧೂತ ಚಂದ್ರದಾಸ ಸಮ್ಮುಖದಲ್ಲಿ ಸೋಮವಾರ ಮಳೆಯ ನಡುವೆಯೂ ನಗರದಲ್ಲಿ ಬಹು ವಿಜೃಂಭಣೆಯಿಂದ ನಡೆಯಿತು.
ಸೋಮವಾರ ಮಧ್ಯಾಹ್ನ ರಥಯಾತ್ರೆಯು ನಗರದ ಮಂಡಿಪೇಟೆಯ ಕೋದಂಡರಾಮ ದೇವಸ್ಥಾನದಿಂದ ಆರಂಭಗೊಂಡು, ಅಲ್ಲಿಂದ ಚಾಮರಾಜಪೇಟೆ, ಹಾಸಬಾವಿ ವೃತ್ತ, ಚೌಕಿಪೇಟೆ, ಹೊಂಡದ ಸರ್ಕಲ್, ಅರುಣ ವೃತ್ತ, ಮಹಾನಗರ ಪಾಲಿಕೆ, ಜಯದೇವ ವೃತ್ತ, ವಿದ್ಯಾರ್ಥಿ ಭವನ, ಹಾಗೂ ಜಿಲ್ಲಾಸ್ಪತ್ರೆ ಮುಂಭಾಗದಿಂದ ಸಾಗಿ ಸಂಜೆ ಹೊತ್ತಿಗೆ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪ ತಲುಪಿತು.ಜಿಟಿಜಿಟಿ ಮಳೆಯ ನಡುವೆಯೂ ಭಕ್ತರು, ಸಾರ್ವಜನಿಕರು ರಥಯಾತ್ರೆಯಲ್ಲಿ ಉತ್ಸಾಹದಿಂದ ಭಜನೆ, ಹಾಡು, ಮತ್ತು ನೃತ್ಯಗಳ ಮೂಲಕ ಜಗನ್ನಾಥನಿಗೆ ಪ್ರಾರ್ಥಿಸುತ್ತಾ ಸಾಗಿದರು. ರಥಯಾತ್ರೆಯುದ್ದಕ್ಕೂ ಭಕ್ತರಿಗಾಗಿ ಅಲ್ಲಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪ್ರತಿವರ್ಷ ಬೆಳಗಾವಿಯಿಂದ ಉತ್ಸವದ ರಥವನ್ನು ತರಿಸಲಾಗುತ್ತಿತ್ತು. ಈ ವರ್ಷ ಭಕ್ತರ ಸಹಕಾರದೊಂದಿಗೆ ₹11 ಲಕ್ಷ ವೆಚ್ಚದಲ್ಲಿ ತಯಾರಾದ ನೂತನ ರಥದಲ್ಲಿ ಶ್ರೀ ಜಗನ್ನಾಥ ಸ್ವಾಮಿ ಮೆರವಣಿಗೆ ಜಾನಪದ ಕಲಾತಂಡಗಳೊಂದಿಗೆ ನಡೆಯಿತು. ನೂತನ ರಥ ಹಾಗೂ ಉತ್ಸವವನ್ನು ಕಣ್ತುಂಬಿಕೊಳ್ಳಲು ಜನರು ರಸ್ತೆಯ ಇಕ್ಕೆಲಗಳಲ್ಲೂ ಕಿಕ್ಕಿರಿದು ಜಮಾಯಿಸಿದ್ದರು.
ರಥಯಾತ್ರೆ ಪ್ರಯುಕ್ತ ಬೆಳಗ್ಗೆ ಶ್ರೀ ನರಸಿಂಹ ಯಜ್ಞ ನೆರವೇರಿಸಲಾಯಿತು. ರಥಯಾತ್ರೆ ನಂತರ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಶ್ರೀ ಜಗನ್ನಾಥನಿಗೆ ಮಹಾಮಂಗಳಾರತಿ ನೃತ್ಯ, ನಾಟಕ ಹಾಗೂ ಸ ಇಸ್ಕಾನ್ ದಾವಣಗೆರೆ ಮುಖ್ಯಸ್ಥ ಅವಧೂತ ಚಂದ್ರದಾಸ ಅವರಿಂದ ಆಶೀರ್ವಚನ ಮತ್ತಿತರೆ ಕಾರ್ಯಕ್ರಮಗಳು ನಡೆದವು.ಮಹೋತ್ಸವದಲ್ಲಿ ರಥಯಾತ್ರಾ ಉತ್ಸವ ಸಮಿತಿ ಪದಾಧಿಕಾರಿಗಳಾದ ಮಾಜಿ ಮೇಯರ್ ಎಸ್.ಟಿ. ವೀರೇಶ್, ವಿಪಕ್ಷ ನಾಯಕ ಕೆ. ಪ್ರಸನ್ನ ಕುಮಾರ್, ಕೆ.ಬಿ. ಶಂಕರನಾರಾಯಣ, ಕಾಸಲ್ ವಿ. ಬದರಿನಾಥ್, ಬಿ. ಸತ್ಯ ನಾರಾಯಣಮೂರ್ತಿ, ನಲ್ಲೂರು ರಾಜಕುಮಾರ ಸೇರಿದಂತೆ ಅನೇಕ ಗಣ್ಯರು, ಜಗನ್ನಾಥ ಸ್ವಾಮಿಯ ಭಕ್ತರು, ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
----- -8ಕೆಡಿವಿಜಿ42, 43, 44:ಇಸ್ಕಾನ್ ದಾವಣಗೆರೆ ಮುಖ್ಯಸ್ಥ ಅವಧೂತ ಚಂದ್ರದಾಸ ಸಮ್ಮುಖದಲ್ಲಿ ಪುರಿ ಜಗನ್ನಾಥ ಸ್ವಾಮಿ ರಥಯಾತ್ರೆ ಮಳೆಯ ನಡುವೆಯೂ ಸಂಭ್ರಮ ಸಡಗರದಿಂದ ನಡೆಯಿತು.