ಸಾರ್ವಜನಿಕ ಅಭಿಪ್ರಾಯ ರೂಪಿಸುವ ಪತ್ರಿಕೋದ್ಯಮ: ಬಸವರಾಜ ಹೊರಟ್ಟಿ

| Published : Jul 09 2024, 12:54 AM IST

ಸಾರಾಂಶ

ಮಾಧ್ಯಮ ಕ್ಷೇತ್ರಕ್ಕೆ ಬರುವವರು ಭಾಷೆಯ ಮೇಲೆ ಹಿಡಿತ, ತಂತ್ರಜ್ಞಾನ ಕಲಿಯುವದು ಬಹಳ ಮುಖ್ಯ. ಪ್ರಸ್ತುತ ಮಾಧ್ಯಮ ಭಿನ್ನವಾಗಿ ಬೆಳೆಯುತ್ತದೆ. ಆದ್ದರಿಂದ ಇಂದು ವಾಕ್ ಚಾತುರ್ಯ ಬಹಳ ಮುಖ್ಯವಾಗಿದೆ. ಓದುಗರನ್ನು ಮತ್ತು ವೀಕ್ಷಕರನ್ನು ಆಕರ್ಷಿಸುವ ತಂತ್ರಗಾರಿಕೆಯನ್ನು ಕಲಿಯಬೇಕು.

ಧಾರವಾಡ:ಪತ್ರಿಕೋದ್ಯಮ ಕ್ಷೇತ್ರ ಅಗಾಧವಾಗಿ ಬೆಳೆದಿದ್ದು ಸಾರ್ವಜನಿಕ ಅಭಿಪ್ರಾಯ ರೂಪಿಸುವಲ್ಲಿ ಪತ್ರಿಕೋದ್ಯಮ ಪಾತ್ರ ಬಹಳ ಇದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಕವಿವಿ ಪತ್ರಿಕೋದ್ಯಮ ವಿಭಾಗವು ಕವಿವಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ '''' ಕೃತಕ ಬುದ್ಧಿಮತ್ತೆ ಯುಗದಲ್ಲಿ ಸಮೂಹ ಸಂವಹನದ ಸವಾಲುಗಳು ಮತ್ತು ಅವಕಾಶಗಳು'''' ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ‌ರೈನ್ ಬೋ ಮಾಧ್ಯಮ ಹಬ್ಬದಲ್ಲಿ ಕವಿವಿ ಪತ್ರಿಕೋದ್ಯಮ ಹಳೆಯ ವಿದ್ಯಾರ್ಥಿ ಸಾಧಕರಿಗೆ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿದ್ಯಾರ್ಥಿಗಳ ಒಕ್ಕೂಟದ ವೆಬ್‌ಸೈಟ್‌ ಲೋಕಾರ್ಪಣೆ ಮಾಡಿ ಮಾತನಾಡಿದರು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮೂರು ಅಂಗಗಳನ್ನು ಮೀರಿ ಪತ್ರಿಕಾ ಕ್ಷೇತ್ರ ಬಹಳ ಮುಖ್ಯವಾಗಿದೆ ಎಂದರು.

ಕವಿವಿ ಪತ್ರಿಕೋದ್ಯಮ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಎ.ಎಸ್. ಬಾಲಸುಬ್ರಹ್ಮಣ್ಯ, ಮಾತನಾಡಿ, ಮಾಧ್ಯಮ ಕ್ಷೇತ್ರಕ್ಕೆ ಬರುವವರು ಭಾಷೆಯ ಮೇಲೆ ಹಿಡಿತ, ತಂತ್ರಜ್ಞಾನ ಕಲಿಯುವದು ಬಹಳ ಮುಖ್ಯ. ಪ್ರಸ್ತುತ ಮಾಧ್ಯಮ ಭಿನ್ನವಾಗಿ ಬೆಳೆಯುತ್ತದೆ. ಆದ್ದರಿಂದ ಇಂದು ವಾಕ್ ಚಾತುರ್ಯ ಬಹಳ ಮುಖ್ಯವಾಗಿದೆ. ಓದುಗರನ್ನು ಮತ್ತು ವೀಕ್ಷಕರನ್ನು ಆಕರ್ಷಿಸುವ ತಂತ್ರಗಾರಿಕೆಯನ್ನು ಕಲಿಯಬೇಕು ಎಂದು ಹೇಳಿದರು.ಕವಿವಿ ಪತ್ರಿಕೋದ್ಯಮ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಎಂ. ಗಂಗಾಧರಪ್ಪ ಮಾತನಾಡಿ, ಪ್ರಾರಂಭದಲ್ಲಿ ಕವಿವಿ ಪತ್ರಿಕೋದ್ಯಮ ವಿಭಾಗವು ಅನೇಕ ಸವಾಲುಗಳನ್ನು ಎದುರಿಸಿ ಇಂದು 40 ವರ್ಷ ಪೂರೈಸಿರುವದು ಸಂತಸದ ಸಂಗತಿ ಎಂದರು.ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಕೆ.ಬಿ. ಗುಡಸಿ ಮಾತನಾಡಿದರು. ಕನ್ನಡಪ್ರಭ ಕಾರ್ಯನಿರ್ವಾಹಕ ಸಂಪಾದಕ ವಿಜಯ ಮಲಗಿಹಾಳ, ಹುಬ್ಬಳ್ಳಿ ಆವೃತ್ತಿಯ ಮುಖ್ಯ ವರದಿಗಾರ ಶಿವಾನಂದ ಗೊಂಬಿ, ಸುವರ್ಣ ಸುದ್ದಿ ವಾಹಿನಿಯ ಆನಂದ ಬೈದನಮನೆ, ಪತ್ರಕರ್ತರಾದ ಗಿರೀಶ ದೊಡ್ಡಮನಿ ಸೇರಿ ಮಾಧ್ಯಮ ಕ್ಷೇತ್ರದ ಹಿರಿಯರನ್ನು ಸನ್ಮಾನಿಸಲಾಯಿತು.