ಕನ್ನಡಪ್ರಭ ವಾರ್ತೆ ಭದ್ರಾವತಿ
ದೇಶದ ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಮ್‌ರವರು ಕೇವಲ ಅಸ್ಪೃಶ್ಯರು, ದಲಿತರಿಗಾಗಿ ಹೋರಾಟ ನಡೆಸಲಿಲ್ಲ. ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ನಾಯಕ. ಇಂತಹ ನಾಯಕನ ಜನ್ಮ ದಿನಾಚರಣೆ ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ ಎಲ್ಲರೂ ಸೇರಿ ಆಚರಿಸುವಂತಾಗಬೇಕೆಂದು ಉಪನ್ಯಾಸಕ ಡಾ. ಕೆ.ಎಚ್ ಕುಮಾರಸ್ವಾಮಿ ಹೇಳಿದರು.ತಾಲೂಕು ಆಡಳಿತ, ತಾಪಂ, ನಗರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಭಾನುವಾರ ತಾಪಂ ಆವರಣದಲ್ಲಿ ಆಯೋಜಿಸಲಾಗಿದ್ದ ಡಾ. ಬಾಬು ಜಗಜೀವನರಾಮ್‌ರವರ ೧೧೯ನೇ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಬಾಬು ಜಗಜೀವನರಾಮ್‌ರವರು ಸಹ ತಮ್ಮ ಬಾಲ್ಯದಲ್ಲಿಯೇ ಸ್ವಾತಂತ್ರ್ಯ ಚಳುವಳಿಗಳಲ್ಲಿ ಪಾಲ್ಗೊಂಡು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದರಲ್ಲದೆ ಆನಂತರ ದೇಶವನ್ನು ಸಮಗ್ರವಾಗಿ ರೂಪಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿದೆ. ಸಂವಿಧಾನ ರಚನೆ ಕರಡು ಸಮಿತಿಯಲ್ಲಿ ಸದಸ್ಯರಾಗಿ ಡಾ. ಬಿ.ಆರ್ ಅಂಬೇಡ್ಕರ್‌ರವರ ನಿಲುವುಗಳನ್ನು ಬಲಪಡಿಸಿದರು. ಸರ್ಕಾರ ರಚನೆ ನಂತರ ಸುಧೀರ್ಘವಾದ ತಮ್ಮ ರಾಜಕೀಯ ಬದುಕಿನಲ್ಲಿ ಹಲವಾರು ಪರಿಣಾಮಕಾರಿ ಯೋಜನೆಗಳನ್ನು ಜಾರಿಗೆ ತಂದರು ಎಂದರು.ದೇಶದ ಎಲ್ಲಾ ಸಮುದಾಯಗಳ, ವರ್ಗಗಳ ದೀನದಲಿತರು, ಶೋಷಿತರು, ಅಸ್ಪೃಶ್ಯರು ಸೇರಿದಂತೆ ಎಲ್ಲರ ಏಳಿಗೆಗಾಗಿ ಯೋಜನೆಗಳನ್ನು ರೂಪಿಸಿದರು. ಸ್ವಾತಂತ್ರ್ಯ ನಂತರ ದೇಶದಲ್ಲಿ ಉಂಟಾದ ಆಹಾರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿದರು. ಹಲವಾರು ನೀರಾವರಿ ಯೋಜನೆಗಳನ್ನು ರೂಪಿಸಿದರು. ತಮ್ಮ ಸುದೀರ್ಘ ರಾಜಕೀಯದಲ್ಲಿ ದೇಶದ ಸರ್ವತೋಮುಖ ಅಭಿವೃದ್ಧಿಗೆ ಹಲವಾರು ಯೋಜನೆ ರೂಪಿಸುವ ಮೂಲಕ ಇಂದಿಗೂ ಜನಮಾನಸದಲ್ಲಿ ಉಳಿದು ಕೊಂಡಿದ್ದಾರೆ ಎಂದರು.
ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್ ಮತ್ತು ಹಿರಿಯ ಸದಸ್ಯ ಬಿ.ಕೆ ಮೋಹನ್ ಸೇರಿದಂತೆ ಇನ್ನಿತರರು ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಬಿ.ಕೆ ಸಂಗಮೇಶ್ವರ್, ತಹಸೀಲ್ದಾರ್ ಪರುಸಪ್ಪ ಕುರುಬರ, ತಾಪಂ ಕಾರ್ಯನಿರ್ವಹಣಾಧಿಕಾರಿ ಎಂ. ಆಶಾಲತ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ನಗರಸಭೆ ಪೌರಾಯುಕ್ತ ಕೆ.ಎನ್ ಹೇಮಂತ್, ಸದಸ್ಯರಾದ ಚನ್ನಪ್ಪ, ಬಸವರಾಜ ಬಿ. ಆನೇಕೊಪ್ಪ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ದಲಿತ ಮುಖಂಡರಾದ ಶಿವಬಸಪ್ಪ, ಬಿ.ಎ ಮಂಜುನಾಥ್, ವಿ. ವಿನೋದ್, ಎಂ. ಶಿವಕುಮಾರ್, ನಾಗರಾಜ್, ಶಿವಪ್ಪ, ರಾಜೇಂದ್ರ, ಮಂಜುಳ ರಾಮಚಂದ್ರ, ಪುಟ್ಟರಾಜ್ ಸೇರಿದಂತೆ ಇನ್ನಿತರರು ಇದ್ದರು.
ಸಿದ್ದಾರ್ಥ ಅಂಧರ ಕೇಂದ್ರದ ಕಲಾವಿದರು ಪ್ರಾರ್ಥಿಸಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಶಿಕುಮಾರ್ ನಿರೂಪಿಸಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೆ.ಜಿ ಶಿವಕುಮಾರ್ ಸ್ವಾಗತಿಸಿದರು.
ಕಾರ್ಯಕ್ರಮಕ್ಕೂ ಮೊದಲು ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಿಂದ ಬಾಬು ಜಗಜೀವನರಾಮ್‌ರವರ ಭಾವಚಿತ್ರದೊಂದಿಗೆ ತಾಪಂ ಕಚೇರಿವರೆಗೂ ಮೆರವಣಿಗೆ ನಡೆಸಲಾಯಿತು.