ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಉತ್ತರ ಕರ್ನಾಟಕದ ಆರಾಧ್ಯ ದೈವ ಸಿದ್ಧಾರೂಢರ ಮಹಾರಥೋತ್ಸವವು ಶನಿವಾರ ಸಡಗರ, ಸಂಭ್ರಮ, ಸಹಸ್ರಾರು ಭಕ್ತರ ಉದ್ಘೋಷಗಳ ನಡುವೆ ವಿಜೃಂಭಣೆಯಿಂದ ನಡೆಯಿತು. ತೇರಿಗೆ ಮೇಲಿನಿಂದ ಪುಷ್ಪಾರ್ಚನೆ ಮಾಡಿದ್ದು ವಿಶೇಷ."ಶ್ರೀ ಸಿದ್ಧಾರೂಢ ಮಹಾರಾಜ ಕೀ ಜೈ, ಜೈ ಜೈ ಸಿದ್ಧಾರೂಢ, ಹುಬ್ಬಳ್ಳಿ ಎಂಬುದು ಕಲ್ಯಾಣ; ಸಿದ್ಧಾರೂಢ ಬಸವಣ್ಣ "..! ಸೇರಿದಂತೆ ಹಲವಾರು ಜಯಘೋಷಗಳು ಆಕಾಶದಲ್ಲಿ ಪ್ರತಿಧ್ವನಿಸಿದಂತೆ ಕೇಳಿ ಬರುತ್ತಿದ್ದವು.
ಶಕ್ತಿ ಯೋಜನೆ: ಹೆಚ್ಚಿದ ಭಕ್ತಗಣಪ್ರತಿವರ್ಷ 3.5 ಲಕ್ಷದಿಂದ 3.5 ಲಕ್ಷ ವರೆಗೂ ಜಮೆಯಾಗುತ್ತಿದ್ದ ಭಕ್ತಗಣ, ಈ ಶಕ್ತಿ ಯೋಜನೆಯಿಂದ ಕೊಂಚ ಜಾಸ್ತಿಯಾಗಿತ್ತು. 5- 6 ಲಕ್ಷಕ್ಕೂ ಅಧಿಕ ಜನಸ್ತೋಮ ಜಮೆಯಾಗಿತ್ತು. ಮಹಾರಾಷ್ಟ್ರ, ಗೋವಾ, ಆಂಧ್ರ, ತೆಲಂಗಾಣ, ತಮಿಳನಾಡು ಸೇರಿದಂತೆ ಕರ್ನಾಟಕದ ಕಲಬುರಗಿ, ಬೀದರ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಜನರು ಅಜ್ಜನ ರಥೋತ್ಸವದ ಸಂಭ್ರಮವನ್ನು ಕಣ್ತುಂಬಿಕೊಂಡರು.
ಅಜ್ಜನ ರಥ ಮಠದಿಂದ ರಥಬೀದಿಯ ಮೂಲಕ ಮಹಾದ್ವಾರ ತಲುಪುತ್ತಿದ್ದಂತೆ ಲಕ್ಷಾಂತರ ಭಕ್ತರು ಭಾವಪರವಶರಾಗಿ ದೈವ ಸ್ವರೂಪಿ ಸಿದ್ಧಾರೂಢರಿಗೆ ಜೈಕಾರ ಹಾಕಿ ಸಂಭ್ರಮಿಸಿದರು. ಮಠದಿಂದ ಸ್ವಲ್ಪ ದೂರ ಬರುತ್ತಿದ್ದಂತೆ ತೇರಿಗೆ ಮೇಲಿಂದ ಪುಷ್ಪಾರ್ಚನೆ ಮಾಡಿದ್ದು ಗಮನ ಸೆಳೆಯಿತು.ರಥಕ್ಕೆ ಚಾಲನೆ
ಸಂಜೆ ಮಠದ ಆವರಣದಲ್ಲಿ ಶ್ರೀ ಸಿದ್ಧಾರೂಢ ಸ್ವಾಮೀಜಿಗಳ ರಥೋತ್ಸವಕ್ಕೆ ಶ್ರೀಮಠದ ಆಡಳಿತಾಧಿಕಾರಿಯೂ ಆಗಿರುವ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಜಿ. ಶಾಂತಿ ಚಾಲನೆ ನೀಡಿದರು. ಮಠದ ಗಣ್ಯರು, ಭಕ್ತಸಮೂಹ ರಥವನ್ನು ಎಳೆಯಲು ಪ್ರಾರಂಭಿಸುತ್ತಿದ್ದಂತೆ ಭಕ್ತರು ಉತ್ತತ್ತಿ, ಲಿಂಬೆ, ಬಾಳೆಹಣ್ಣು, ಪೇರಲ ಸೇರಿ ಚಿಕ್ಕ ಹಣ್ಣುಗಳನ್ನು ಭಕ್ತಿಯಿಂದ ತೂರಿದರು. ಹಾಗೆಯೇ ಪ್ರಸಾದ ರೂಪದಲ್ಲಿ ಅದನ್ನು ಆರಿಸಿಕೊಳ್ಳಲು ಕೂಡ ಭಕ್ತರಲ್ಲಿ ಪೈಪೋಟಿ ಉಂಟಾಗಿತ್ತು.ವಿವಿಧ ಮೇಳ
ಜಗ್ಗಲಗಿ ಮೇಳ, ಕರಡಿಮಜಲು, ಡೊಳ್ಳು ಕುಣಿತ ಸೇರಿ ಭಜನಾ ತಂಡಗಳು ರಥದ ಮುಂದೆ ಮುಂದೆ ಸಾಗುತ್ತಿದ್ದವು. ಇವುಗಳೊಟ್ಟಿಗೆ ಜನ ನೃತ್ಯದ ಮೂಲಕ ಭಕ್ತಿ ತೋರಿಸಿದರು. ಅದರ ಹಿಂದೆಯೇ ಸಿದ್ಧಾರೂಢ ಅಜ್ಜ ರಥದಲ್ಲಿ ವಿರಾಜಮಾನವಾಗಿ ಕುಳಿತು ರಥ ಬೀದಿಯಲ್ಲಿ ಸಾವಧಾನವಾಗಿ ಆಗಮಿಸುತ್ತಿದ್ದ. ಈ ವೈಭವ ಕಣ್ತುಂಬಿಕೊಂಡ ಭಕ್ತಸಮೂಹ ಅಜ್ಜನಿಗೆ ಜೈಕಾರ ಹಾಕುತ್ತ ಕೈ ಮುಗಿಯುತ್ತ ನಿಂತಿತ್ತು.ಮಠದಿಂದ ಮಹಾದ್ವಾರದ ವರೆಗಿನ ರಥಬೀದಿಯ ಇಕ್ಕೆಲಗಳು ಭರ್ತಿಯಾಗಿದ್ದವು. ರಥಬೀದಿಯಂತೂ ಕಾಲಿಡಲೂ ಆಗದಷ್ಟು ಕಿಕ್ಕಿರಿದು ಭಕ್ತರಿಂದ ತುಂಬಿ ಹೋಗಿತ್ತು. ರಥಬೀದಿ ಅಕ್ಕಪಕ್ಕದಲ್ಲಿನ ಅಜ್ಜನ ತೇರನ್ನು ರಥಬೀದಿಯ ಅಕ್ಕಪಕ್ಕದ ಕಟ್ಟಡಗಳು, ಗಿಡಮರಗಳು ಸಹ ಗೋಪುರಗಳ ಮೇಲೆ ನಿಂತು ಜನ ವೀಕ್ಷಿಸಿದರು. ಯುವಕರು ತಮ್ಮ ಹತ್ತಿರ ರಥ ಬರುತ್ತಿದ್ದಂತೆ ಮೊಬೈಲ್‌ನಲ್ಲಿ ಫೋಟೋ ತೆಗೆದುಕೊಂಡು ಸಂಭ್ರಮಿಸಿದರು.
ಇನ್ನು ಸ್ಥಳೀಯ ಭಕ್ತರು ಅಲ್ಲಲ್ಲಿ ರಥಕ್ಕೆ ಹಣ್ಣುಕಾಯಿ ಸೇವೆ ಸಲ್ಲಿಸಿದರು. ಸಂಜೆ 7 ಗಂಟೆಗೆ ರಥ ಮಹಾದ್ವಾರ ತಲುಪುತ್ತಿದ್ದಂತೆ ಪಟಾಕಿ, ಸಿಡಿಮದ್ದು ಸಿಡಿಸಿ ಸಂಭ್ರಮಿಸಲಾಯಿತು. ಅಲ್ಲಿ ಧಾರ್ಮಿಕ ಕೈಂಕರ್ಯ ಕೈಗೊಂಡ ಬಳಿಕ ರಥ ತಿರುಗಿ ಮಠದತ್ತ ಸಾಗಿತು.ಪುನಃ ಸಿದ್ಧಾರೂಢನ ಹೆಜ್ಜೆಯನ್ನೇ ಅನುಕರಿಸಿದ ಭಕ್ತರು ರಥದ ಹಿಂದೆಯೇ ಮಠದತ್ತ ತಾವೂ ತೆರಳಿದರು. ಅಜ್ಜನ ರಥೋತ್ಸವದಲ್ಲಿ ಪಾಲ್ಗೊಂಡು ಧನ್ಯತೆ ಅನುಭವಿಸಲು ಮೂರ್ನಾಲ್ಕು ದಿನಗಳಿಂದಲೇ ವಿವಿಧ ಜಿಲ್ಲೆಗಳಿಂದ ಜನತೆ ಆಗಮಿಸಿದ್ದರು. ಹಲವರು ಮಠದಲ್ಲೇ ಶಿವರಾತ್ರಿಯ ಜಾಗರಣೆ ಕೈಗೊಂಡಿದ್ದರು.
ಸಾಲುಗಟ್ಟಿದ ವಾಹನಗಳುಹಲವರು ನೆಂಟರಿಷ್ಟರ, ಸ್ನೇಹಿತರ ಮನೆಯಲ್ಲಿದ್ದು ರಥೋತ್ಸವದ ವೇಳೆಗೆ ಮಠದತ್ತ ಹೆಜ್ಜೆ ಹಾಕಿದ್ದರು. ಮಠಕ್ಕೆ ಬಂದು ಸೇರುವ ಆರ್.ಎನ್. ಶೆಟ್ಟಿ ಫ್ಯಾಕ್ಟರಿ ರಸ್ತೆ, ಹೆಗ್ಗೇರಿ ರಸ್ತೆ, ಗಿರಣಿಚಾಳ್ ರಸ್ತೆ, ಹಳೇಹುಬ್ಬಳ್ಳಿ ಮಾರ್ಕೇಟ್ ರಸ್ತೆ, ಆನಂದನಗರ ರಸ್ತೆ, ಕಲಘಟಗಿ ರಸ್ತೆಗಳಲ್ಲೆಲ್ಲ ವಾಹನಗಳು ಮೂರ್ನಾಲ್ಕು ಕಿಮೀ ಉದ್ದಕ್ಕೂ ಸಾಲುಗಟ್ಟಿದ್ದವು. ಗೋಕುಲ ರಸ್ತೆ, ಕಿತ್ತೂರು ಚೆನ್ನಮ್ಮ ವೃತ್ತ, ವಿಕಾಸನಗರ ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸಿ ರಥಬೀದಿಗೆ ಬಂದಿದ್ದರು ಭಕ್ತರು. ಹಾಗಾಗಿ ಎಲ್ಲೆಲ್ಲೂ ಟ್ರಾಫಿಕ್ ಜಾಮ ಸಹಜವಾಗಿತ್ತು.
ಉಚಿತ ಆಟೋಅಜ್ಜನ ಜಾತ್ರೆಯಿಂದಾಗಿ ಇಲ್ಲಿನ ಹೊಸ ಬಸ್ ನಿಲ್ದಾಣ, ಹಳೇ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ವಿವಿಧೆಡೆಗಳಿಂದ ಆಟೋ ಚಾಲಕರು ಹಾಗೂ ಮಾಲೀಕರ ಸಂಘದಿಂದ ಉಚಿತವಾಗಿ ಆಟೋ ಸೇವೆ ನೀಡಲಾಗಿತ್ತು. ಸರಿಸುಮಾರು 300ಕ್ಕೂ ಹೆಚ್ಚು ಆಟೋಗಳು ಉಚಿತವಾಗಿ ಸೇವೆ ಸಲ್ಲಿಸಿದವು.