ಶೀಘ್ರವೇ ಜೈಕಿಸಾನ್‌ ಮಾರುಕಟ್ಟೆ ವರ್ತಕರ ಸಮಸ್ಯೆ ಪರಿಹಾರ

| Published : Oct 01 2025, 01:01 AM IST

ಸಾರಾಂಶ

ಜೈಕಿಸಾನ್‌ ವರ್ತಕರ ಬೇಡಿಕೆಯಂತೆ ಮೂರು ತಿಂಗಳ ಅವಧಿಯಲ್ಲಿ ಅವರ ಸಮಸ್ಯೆ ಪರಿಹರಿಸುತ್ತೇವೆ. ಅವಶ್ಯಕತೆ ಬಿದ್ದರೆ ಹೊಸ ಮಳಿಗೆ ನಿರ್ಮಿಸಲು ನಾವು ತಯಾರಿದ್ದೇವೆ ಎಂದು ಸಚಿವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸರ್ಕಾರಿ ಎಪಿಎಂಸಿಗೆ ಭೇಟಿ ನೀಡಿ ಸ್ವತಃ ಅಲ್ಲಿರುವ ವ್ಯವಸ್ಥೆ ಪರಿಶೀಲಿಸಿದ್ದೇನೆ. ಇನ್ನೊಂದು ವಾರದಲ್ಲಿಯೇ ಜೈಕಿಸಾನ್‌ ಮಾರುಕಟ್ಟೆ ವರ್ತಕರ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ನಗರದ ಎಪಿಎಂಸಿ ಕಚೇರಿಯಲ್ಲಿ ಜೈಕಿಸಾನ್‌ ಹಾಗೂ ಎಪಿಎಂಸಿ ಮಾರುಕಟ್ಟೆ ವರ್ತಕರೊಂದಿಗೆ ಮಂಗಳವಾರ ಸಭೆ ನಡೆಸಿ, ನಂತರ ಸರ್ಕಾರಿ ಎಪಿಎಂಸಿ ಮಾರುಕಟ್ಟೆಯಲ್ಲಿರುವ ಮಳಿಗೆಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಜೈಕಿಸಾನ್‌ ಮಾರುಕಟ್ಟೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ. ಆದ್ದರಿಂದ ಅಲ್ಲಿನ ವರ್ತಕರು ತೊಂದರೆಗೆ ಒಳಗಾಗಬಾರದು ಎಂದು ಅಲ್ಲಿನ ವರ್ತಕರಿಗೂ ಸರ್ಕಾರಿ ಎಂಪಿಎಂಸಿಯಲ್ಲಿ ವ್ಯವಸ್ಥೆ ಕಲ್ಪಿಸಲು ಬೆಳಗಾವಿ ಎಸ್ಸಿಗೆ ಸೂಚಿಸಿದ್ದೇನೆ. ಎರಡು ಮಾರುಕಟ್ಟೆಯ ವರ್ತಕರು ಹೊಂದಾಣಿಕೆಯಿಂದ ತಮ್ಮ ವ್ಯಾಪಾರ ನಡೆಸಬೇಕೆಂದು ಹೇಳಿದರು.

ಜೈಕಿಸಾನ್‌ ವರ್ತಕರ ಬೇಡಿಕೆಯಂತೆ ಮೂರು ತಿಂಗಳ ಅವಧಿಯಲ್ಲಿ ಅವರ ಸಮಸ್ಯೆ ಪರಿಹರಿಸುತ್ತೇವೆ. ಅವಶ್ಯಕತೆ ಬಿದ್ದರೆ ಹೊಸ ಮಳಿಗೆ ನಿರ್ಮಿಸಲು ನಾವು ತಯಾರಿದ್ದೇವೆ. ಹೀಗಾಗಿ ಯಾವುದೇ ಸಮಸ್ಯೆ ಇದ್ದರೂ ತಮ್ಮ ಗಮನಕ್ಕೆ ತರಬೇಕು ಎಂದರು.

ಈ ವೇಳೆ ಶಾಸಕ ಆಸೀಫ್‌ (ರಾಜು) ಸೇಠ್‌, ಬಾಬಾಸಾಬ್‌ ಪಾಟೀಲ್‌, ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌, ಉಪವಿಭಾಗಾಧಿಕಾರಿ ಶ್ರವಣ ನಾಯಿಕ, ಜಿಪಂ ಸಿಇಒ ರಾಹುಲ್‌ ಸಿಂಧೆ, ಬೆಳಗಾವಿ ಕೃಷಿ ಉತ್ಪನ್ನ ಸಮಿತಿ ಕಾರ್ಯದರ್ಶಿ ಎಪಿಎಂಸಿ ಕಾರ್ಯದರ್ಶಿ ವಿಶ್ವನಾಥ ರೆಡ್ಡಿ, ಮುಖಂಡರಾದ ಶಿವನಗೌಡ ಪಾಟೀಲ್‌, ಕೆಪಿಸಿಸಿ ಕಾರ್ಯದರ್ಶಿ ಸುನೀಲ್‌ ಹಣಮನ್ನವರ್‌ ಸೇರಿದಂತೆ ಜೈಕಿಸಾನ್‌ ಹಾಗೂ ಎಪಿಎಂಸಿ ಮಾರುಕಟ್ಟೆ ವರ್ತಕರು ಇದ್ದರು.