ಎಲ್ಲರ ಬಂಧಿಸುತ್ತಿದ್ರೆ ಜೈಲುಗಳೇ ಸಾಲಲ್ಲ: ಜ್ಞಾನೇಂದ್ರ
KannadaprabhaNewsNetwork | Published : Oct 28 2023, 01:15 AM IST
ಎಲ್ಲರ ಬಂಧಿಸುತ್ತಿದ್ರೆ ಜೈಲುಗಳೇ ಸಾಲಲ್ಲ: ಜ್ಞಾನೇಂದ್ರ
ಸಾರಾಂಶ
ಇಮಾಮರು ತಲೆ ಮತ್ತು ಭುಜದ ಮೇಲೆ ನವಿಲುಗರಿಯಿಂದ ಹೊಡೆದು ಆಶೀರ್ವಾದ ಮಾಡುತ್ತಾರೆ. ಈ ರೀತಿ ನವಿಲುಗರಿ ಸಂಗ್ರಹಿಸಿದ್ದಕ್ಕೆ ಅರೆಸ್ಟ್ ಮಾಡುವುದಾದರೆ ಮಾಡಲಿ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಕೆಲವು ದಿನಗಳಿಂದ ಹುಲಿ ಉಗುರಿನ ಪೆಂಡೆಂಟ್ ಧರಿಸಿದವರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗುತ್ತಿದೆ. ನೂರಾರು ವರ್ಷಗಳಿಂದ ಪರಂಪರಾಗತವಾಗಿ ವನ್ಯಜೀವಿಗಳ ವಸ್ತುಗಳನ್ನು ಇಟ್ಟುಕೊಂಡಿರುವುದೇ ಅಪರಾಧ ಎನ್ನುವ ರೀತಿಯಲ್ಲಿ ಬಂಧಿಸುತ್ತಿದ್ದರೆ, ರಾಜ್ಯದ ಜೈಲುಗಳೇ ಸಾಕಾಗುವುದಿಲ್ಲ ಎಂದು ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಶುಕ್ರವಾರ ತೀರ್ಥಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಹುಲಿ ಉಗುರು ಪೆಂಡೆಂಟ್ ಧರಿಸಿದವರ ಫೋಟೋ ವೈರಲ್ ಮಾಡುತ್ತಿದ್ದಾರೆ. ಪ್ರಚಾರದ ಗೀಳಿಗೆ ಬಿದ್ದವರಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಿಂದೆ ಮುಂದೆ ಯೋಚಿಸದೇ ಬಂಧನಕ್ಕೆ ಒಳಪಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು. ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಕಾಡೆಮ್ಮೆ, ಕಾಡುಕೋಣ ಮತ್ತು ಜಿಂಕೆ ಕೊಂಬುಗಳನ್ನು ಅಲಂಕಾರಕ ವಸ್ತುಗಳಾಗಿ ಮನೆಯಲ್ಲಿ ಇಟ್ಟಿದ್ದಾರೆ. ಈ ಹಿಂದೆ ಕಾಡಿನಲ್ಲಿ ಸತ್ತು ಬಿದ್ದಿದ್ದ ಹುಲಿ ಮತ್ತು ಇತರ ವನ್ಯಜೀವಿಗಳ ವಸ್ತುಗಳನ್ನು ಸಂಗ್ರಹ ಮಾಡಿ ಮಾರಾಟ ಮಾಡಲಾಗುತ್ತಿತ್ತು. ಅದನ್ನು ಧೈರ್ಯದ ಪ್ರತೀಕ ಎಂದು ಖರೀದಿ ಮಾಡಿ, ಪೋಷಕರು ತಮ್ಮ ಮಕ್ಕಳಿಗೆ ಹಾಕುತ್ತಿದ್ದರು. ಇದನ್ನು ಕೆಲವರು ಚಿನ್ನದ ಪೇಡೆಂಟ್ ಮಾಡಿಕೊಂಡು ಅಲಂಕಾರಿಕವಾಗಿ ಧರಿಸುತ್ತಿದ್ದಾರೆ. ವನ್ಯಜೀವಿ ಕಾಯ್ದೆ ಬರುವ ಮೊದಲು ಸಂಗ್ರಹಿಸಿದ್ದ ವಸ್ತುಗಳನ್ನೇ ಅವರು ಧರಿಸಿದರೆ, ಅವರಿಗೆ ಜೈಲಿಗೆ ಹಾಕುವ ಅವಶ್ಯಕತೆ ಏನಿದೆ? ಎಂದು ಪ್ರಶ್ನಿಸಿದರು. ಈ ಕೂಡಲೇ ರಾಜ್ಯ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ಈ ಕುರಿತು ಚರ್ಚೆ, ವಿಮರ್ಶೆ ನಡೆಸಬೇಕು. ಏಕಾಏಕಿ ಯಾರನ್ನೂ ಬಂಧಿಸುವುದು ಸರಿಯಲ್ಲ. ಅರಣ್ಯ ಮಂತ್ರಿಗಳು ಮತ್ತು ಹಿರಿಯ ಅಧಿಕಾರಿಗಳು ಈ ಕುರಿತು ಚರ್ಚೆ ನಡೆಸಿ, ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. - - - ಟಾಪ್ ಕೋಟ್ ಶಿವಮೊಗ್ಗ ಜಿಲ್ಲೆ ಹಣಗೆರೆಕಟ್ಟೆಯಲ್ಲಿ ಹಿಂದೂ, ಮುಸ್ಲಿಂ ಭಾವೈಕ್ಯತೆ ಧಾರ್ಮಿಕ ಕೇಂದ್ರವಿದೆ. ಇಲ್ಲಿ ಇಮಾಮರು ತಲೆ ಮತ್ತು ಭುಜದ ಮೇಲೆ ನವಿಲುಗರಿಯಿಂದ ಹೊಡೆದು ಆಶೀರ್ವಾದ ಮಾಡುತ್ತಾರೆ. ಈ ರೀತಿ ನವಿಲುಗರಿ ಸಂಗ್ರಹಿಸಿದ್ದಕ್ಕೆ ಅರೆಸ್ಟ್ ಮಾಡುವುದಾದರೆ ಮಾಡಲಿ. ಹುಲಿ ಬೇಟೆಯಾಡುವ ರೀತಿಯಲ್ಲಿ ಟಿಪ್ಪು ಭಾವಚಿತ್ರ ಇದೆ. ಇದನ್ನು ನೋಡಿ ಜನರು ಪ್ರಚೋದನೆಗೆ ಒಳಗಾಗಿ ಹುಲಿ ಬೇಟೆ ಆರಂಭಿಸಿದರೆ ಎಂದು ಟಿಪ್ಪು ಹುಲಿ ಬೇಟೆಯಾಡುವ ಫೋಟೋ ಇಟ್ಟುಕೊಂಡವರ ಮನೆಯವರನ್ನು ಅರೆಸ್ಟ್ ಮಾಡಲು ಸಾಧ್ಯವೇ? - ಆರಗ ಜ್ಞಾನೇಂದ್ರ, ಮಾಜಿ ಗೃಹ ಸಚಿವ - - - (-ಫೋಟೋ: ಆರಗ ಜ್ಞಾನೇಂದ್ರ)