ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಕಾಂಗ್ರೆಸ್ಸಿನವರು ಏನೇ ಅಲವತ್ತುಗೊಂಡರೂ ಮೂರನೆಯ ಬಾರಿಗೆ ನರೇಂದ್ರ ಮೋದಿ ಅವರು ಪ್ರಧಾನಿ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಸರ್ವಾಧಿಕಾರಿ ಆಡಳಿತ ಬರುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಕ್ಕೆ ಈ ರೀತಿ ತಿರುಗೇಟು ನೀಡಿದರು.
ಮೋದಿ ಅವರು ಮೊದಲ ಮುಖ್ಯಮಂತ್ರಿಯಾದಾಗಲಿಂದಲೂ ಇದೇ ರೀತಿ ಹೇಳುತ್ತಲೇ ಬಂದಿದ್ದಾರೆ. ಕಾಂಗ್ರೆಸ್ಸಿನ 60 ವರ್ಷದ ಆಡಳಿತದಲ್ಲಿ 94 ರಾಜ್ಯ ಸರ್ಕಾರಗಳನ್ನು ಕಿತ್ತೆಸೆದವರು ಇವರು. ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಅತ್ಯಂತ ನಿಷ್ಕೃಷ್ಟವಾಗಿ ನಡೆದುಕೊಳ್ಳುತ್ತಿದ್ದರು. ಬೇರೆ ಪಕ್ಷದ ಮುಖ್ಯಮಂತ್ರಿಗಳಿದ್ದರಂತೂ ಭೇಟಿಯಾಗಲು ಅವಕಾಶವನ್ನೂ ಕೊಡುತ್ತಿರಲಿಲ್ಲ. ತುರ್ತು ಪರಿಸ್ಥಿತಿ ಹೇರಿದ್ದರು. ಆಗ ಜನರೆಷ್ಟು ತೊಂದರೆ ಅನುಭವಿಸಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು ಎಂದರು.ಇವರಿಂದ ಪ್ರಜಾಪ್ರಭುತ್ವದ ಪಾಠ ಕಲಿಯುವ ಅಗತ್ಯ ನಮಗಿಲ್ಲ. ಮೋದಿ ಅವರಿಂದ ಪ್ರಜಾಪ್ರಭುತ್ವ ಸರಿಯಾದ ದಾರಿಯಲ್ಲಿದೆ. ಮತ್ತಷ್ಟು ಸದೃಢವಾಗಿದೆ. ಇವರು ಎಷ್ಟೇ ಅಲವತ್ತುಗೊಂಡರೂ ಮೋದಿ 3ನೇ ಬಾರಿಗೆ ಪ್ರಧಾನಿಯಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಇವರು ಹೀಗೆ ಅಳುತ್ತಲೇ ಇರಬೇಕಷ್ಟೇ ಎಂದರು.
ಸೀತಾರಾಮನ್, ಜೈಶಂಕರಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ನಿಚ್ಚಳ ಎಂದ ಜೋಶಿ, ಈ ಇಬ್ಬರೂ ಪ್ರಭಾವಿ ಸಚಿವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ. ಆದರೆ ಎಲ್ಲಿಂದ ಎನ್ನುವುದು ಇನ್ನು ತೀರ್ಮಾನವಾಗಿಲ್ಲ. ಕ್ಷೇತ್ರದ ಬಗ್ಗೆ ಸ್ಪಷ್ಟತೆ ಇಲ್ಲ ಎಂದರು.
ಮಂಡ್ಯ ಸಮಸ್ಯೆ ಬಗೆಹರಿಯುತ್ತೆಮಂಡ್ಯ ಲೋಕಸಭೆ ಟಿಕೆಟ್ ಹಂಚಿಕೆ ವಿವಾದ ಪರಿಹಾರ ಕಾಣಲಿದೆ. ಬಿಜೆಪಿಯಿಂದ ಏನೂ ಸಮಸ್ಯೆಯಿಲ್ಲ. ಅಂತೆಯೇ ಜೆಡಿಎಸ್ ನಿಂದಲೂ ಅಂಥ ಸಮಸ್ಯೆಯಿಲ್ಲ. ಪಕ್ಷದ ರಾಷ್ಟ್ರೀಯ ನಾಯಕರು ಬಗೆಹರಿಸಲಿದ್ದಾರೆ ಎಂದು ತಿಳಿಸಿದರು.
ಒಂದು ಮನೆಯಲ್ಲೇ ಕೆಲವೊಮ್ಮೆ ಹೊಂದಾಣಿಕೆ ಕಷ್ಟವಾಗಿರುತ್ತದೆ. ಹಾಗಿರುವಾಗ ದೊಡ್ಡ ಪಕ್ಷ, ಲಕ್ಷಾಂತರ ಮುಖಂಡರು, ಕಾರ್ಯಕರ್ತರು ಇರುವಾಗ ಸಮಸ್ಯೆ ಸಹಜ. ಆದರೆ, ಅದೆಲ್ಲ ಬಗೆಹರಿಯುತ್ತದೆ. ಸುಮಲತಾ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಇಬ್ಬರ ಸಹಕಾರದಿಂದ ಟಿಕೆಟ್ ಹಂಚಿಕೆ ವಿವಾದ ಅಂತ್ಯ ಕಾಣಲಿದೆ ಎಂದು ವಿಶ್ವಾಸ ವ್ಯಕ್ತಡಿಸಿದರು.ಸಿಎಂ ಅಧಿಕಾರ ದುರುಪಯೋಗ
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದವರ ವಿರುದ್ಧ ಎಫ್‌ಐಆರ್ ಹಾಕುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ಹಲವಾರು ಸಂಗತಿಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರು ಏಕ ವಚನದಲ್ಲೇ ಬಾಯಿಗೆ ಬಂದ ಹಾಗೆ ಮಂದಿಗೆ ಬೈಯುತ್ತಾರೆ. ಅವರ ಬಗ್ಗೆ ಏನೂ ಆಗಲ್ಲ. ಅದರೆ, ಅನಂತಕುಮಾರ್ ಹೆಗಡೆ ಬಗ್ಗೆ ಆಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಯಾರೋ ಏನೋ ಪೋಸ್ಟ್ ಮಾಡಿದರೆ ಎಫ್‌ಐಆರ್ ದಾಖಲಾಗುತ್ತದೆ. ಸರ್ಕಾರದ ನಡೆ ಮತ್ತು ಯಾವ ರೀತಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಜೋಶಿ ಹೇಳುವ ಮೂಲಕ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಪ್ರಕರಣ ದಾಖಲಿಸಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.ಕಾಂಗ್ರೆಸ್ಸಿಗೆ 52 ಸೀಟು ಬರಲ್ಲ
ಈ ಬಾರಿ ಲೋಕಸಭೆಯಲ್ಲಿ ಕಾಂಗ್ರೆಸ್ ಗೆ 52 ಸೀಟು ಬರುವುದಿಲ್ಲ. ಅಂಥ ಸ್ಥಿತಿಗೆ ಕಾಂಗ್ರೆಸ್ ತಲುಪಿದೆ. ತೃಣಮೂಲ ಕಾಂಗ್ರೆಸ್ ಬಳಿ ಸೀಟು ಹಂಚಿಕೆಗೆ ಕೈ ಜೋಡಿಸಿ ಕುಳಿತಿದ್ದಾರೆ ಎಂದು ಲೇವಡಿ ಮಾಡಿದರು.