ಜಕ್ಕಲಮೊಡಗು ಜಲಾಶಯ ನೀರಿನ ಮಟ್ಟ ಏರಿಕೆ

| Published : May 24 2024, 12:45 AM IST

ಜಕ್ಕಲಮೊಡಗು ಜಲಾಶಯ ನೀರಿನ ಮಟ್ಟ ಏರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಎರಡೂ ನಗರಗಳಲ್ಲಿರುವ ತಲಾ 31 ವಾರ್ಡ್‌ಗಳಿಗೆ ಬಡಾವಣೆ ವಾರು ವಾರಕ್ಕೆ ಒಮ್ಮೆ ಜಲಾಶಯದಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕಳೆದೊಂದು ವಾರದಿಂದ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕುಗಳ ಸುತ್ತಮುತ್ತ ಸುರಿದ ಮಳೆಯಿಂದ ಇಲ್ಲಿಯ ಜಕ್ಕಲಮೊಡಗು ಜಲಾಶಯಕ್ಕೆ ಸುಮಾರು ಒಂದು ಅಡಿಯಷ್ಟು ನೀರು ಹರಿದು ಬಂದಿದೆ. ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಗಳಿಗೆ ಕುಡಿಯುವ ನೀರು ಪೂರೈಸುವ ಜಕ್ಕಲಮೊಡಗು ಜಲಾಶಯದಲ್ಲಿ ಕಳೆದ ಬಾರಿ ಮಳೆಯ ಕೊರತೆಯಿಂದಾಗಿ 64 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 58 ಅಡಿ ಸಂಗ್ರಹವಾಗಿತ್ತು. ಬಳಿಕ 24 ಅಡಿಗಳಿಗೆ ಕುಸಿದಿತ್ತು.

ಜಲಾಶಯದ ನೀರು 1 ಅಡಿ ಏರಿಕೆ

ಮಳೆ ಇಲ್ಲದೆ ಬರ ಕಾಡುತ್ತಿರುವುದು ಒಂದು ಕಡೆಯಾದರೆ, ಎರಡೂ ನಗರಗಳಿಗೆ ನೀರು ಸರಬರಾಜು ಮಾಡುವ ಜಕ್ಕಲಮೊಡಗು ಜಲಾಶಯದಲ್ಲಿ ನೀರಿನಮಟ್ಟ ದಿನದಿಂದ ದಿನಕ್ಕೆ ಕುಸಿತವಾಗುತ್ತಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಇದರಿಂದಾಗಿ ಜಲಾಶಯದ ನೀರನ್ನ ಅವಲಂಬಿತ ಎರಡು ನಗರಗಳ ಜನರು ಆತಂಕಕ್ಕೆ ಒಳಗಾಗಿದ್ದರು. ಆದರೆ ವರುಣನ ಕೃಪೆಯಿಂದ ವಾರದಿಂದ ಸುರಿಯುತ್ತಿರುವ ಮಳೆಯಿಂದ 25 ಅಡಿಗೆ ಏರಿಕೆಯಾಗಿದ್ದು, ಜನರ ಆತಂಕವನ್ನು ಸ್ವಲ್ಪ ಮಟ್ಟಿಗೆ ದೂರ ಮಾಡಿದೆ. ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಎರಡೂ ನಗರಗಳಲ್ಲಿರುವ ತಲಾ 31 ವಾರ್ಡ್‌ಗಳಿಗೆ ಬಡಾವಣೆ ವಾರು ವಾರಕ್ಕೆ ಒಮ್ಮೆ ಜಲಾಶಯದಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ. ಅಂದಾಜು 90 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯುಳ್ಳ ಚಿಕ್ಕಬಳ್ಳಾಪುರ ನಗರಕ್ಕೆ ಸುಮಾರು 9500 ಕೊಳಾಯಿ ಸಂಪರ್ಕಗಳು ಇವೆ. ಇಷ್ಟು ದೊಡ್ಡ ಪ್ರಮಾಣದ ಜನರಿಗೆ ನಿತ್ಯ 5 ಎಂಎಲ್‌ಡಿ ಪ್ರಮಾಣದಲ್ಲಿ ಜಕ್ಕಲ ಮಡುಗು ಜಲಾಶಯದ ನೀರನ್ನು ಪೂರೈಸಲಾಗುತ್ತಿದೆ.

5- 6 ದಿನಕ್ಕೊಮ್ಮೆ ನೀರು

1.40 ಲಕ್ಷ ಜನಸಂಖ್ಯೆ ಹೊಂದಿರುವ ದೊಡ್ಡಬಳ್ಳಾಪುರ ನಗರದಲ್ಲಿ, 14,500 ಕೊಳಾಯಿ ಸಂಪರ್ಕಗಳು ಇವೆ. ಪ್ರತಿ ದಿನ ನಗರಕ್ಕೆ 13 ಎಂ.ಎಲ್‌.ಡಿ (ದಶಲಕ್ಷ ಲೀಟರ್‌) ನೀರಿನ ಅಗತ್ಯವಿದೆ. ಆದರೆ, ಜಕ್ಕಲಮೊಡಗು ಜಲಾಶಯದಿಂದ ಪ್ರತಿ ದಿನ ಸರಬರಾಜು ಆಗುತ್ತಿರುವುದು 2 ಎಂ.ಎಲ್‌.ಡಿ ನೀರು ಮಾತ್ರ. ಉಳಿದ ನೀರಿಗೆ ನಗರಸಭೆ ಕೊಳವೆ ಬಾವಿಗಳನ್ನು ಅವಲಂಭಿಸಿದೆ. ನಗರದಲ್ಲಿ ಈಗ 5 ರಿಂದ 6 ದಿನಗಳಿಗೆ ಒಮ್ಮೆ ಕೊಳಾಯಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ಜಲಾಶಯದ ನೀರು ಪೂರೈಕೆ ಆಗದಿದ್ದರೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತದೆ. ನಗರದ ವಾರ್ಡ್‌ಗಳಿಗೆ ಈಗ ಪೂರೈಸುತ್ತಿರುವಂತೆಯೇ ಮುಂದೆಯೂ ವಾರಕ್ಕೆ ಒಮ್ಮೆ ನೀರು ಪೂರೈಸಿದರೆ ಚಿಕ್ಕಬಳ್ಳಾಪುರಕ್ಕೆ ಸಂಗ್ರಹದಲ್ಲಿರುವ ನೀರನ್ನು ಕನಿಷ್ಠ 45 ದಿನಗಳು ಮತ್ತು ದೊಡ್ಡಬಳ್ಳಾಪುರಕ್ಕೆ30 ದಿನಗಳು ಬಳಸಬಹುದು ಎಂದು ಜಲಮಂಡಳಿಯು ನಗರಸಭೆಗಳಿಗೆ ತಿಳಿಸಿದೆ.

ಮಳೆಯಿಲ್ಲದೆ ಎರಡು ನಗರಗಳು ನೀರಿನ ಸಮಸ್ಯೆ ಎದುರಿಸುವ ಪರಿಸ್ಥಿತಿ ಇತ್ತು, ಈಗ ಬಂದಿರುವ ನೀರು ಮತ್ತು ಜಲಾಶಯದಲ್ಲಿರುವ ನೀರು ಚಿಕ್ಕಬಳ್ಳಾಪುರ ನಗರಕ್ಕೆ 45 ದಿನಗಳಿಗಾಗುವಷ್ಟು ಮತ್ತು ದೊಡ್ಡಬಳ್ಳಾಪುರ ನಗರಕ್ಕೆ 30 ದಿನಗಳಿಗಾಗುವಷ್ಟು ಬಳಕೆಗೆ ಸಿಗುತ್ತಿರುವುದರಿಂದ ಕೊಂಚ ಸಮಾಧಾನ ತಂದಿದೆ ಎಂದು ನಗರಸಭೆ ಪೌರಾಯುಕ್ತ ಮಂಜುನಾಥ್ ಹೇಳಿದ್ದಾರೆ.ಉತ್ತಮೆ ಮಳೆಯಾಗುವ ನಿರೀಕ್ಷೆ2022ರ ಆಗಸ್ಟ್‌ನಲ್ಲಿ ಜಕ್ಕಲಮೊಡಗು ಜಲಾಶಯ ನಾಲ್ಕು ಬಾರಿ ತುಂಬಿ ಕೋಡಿ ಹರಿದಿತ್ತು. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಕೆಲವು ದಿನ ಮಳೆಯಾಗುವ ಸಾಧ್ಯತೆ ಇದೆ, ಉತ್ತಮ ಮಳೆಯಾದಲ್ಲಿ ಮತ್ತಷ್ಟು ನೀರು ಜಲಾಶಯಕ್ಕೆ ಹರಿದು ಬರಲಿದೆ.

ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ನಕಾಶೆಯಂತೆ ನಿರ್ಮಿಸಿದ್ದ ಈ ಜಲಾಶಯದ ಮಟ್ಟವನ್ನು 2007 ರಲ್ಲಿ ಸಮ್ಮಿಶ್ರ ಸರ್ಕಾರ 48.75 ಅಡಿ ಎತ್ತರಕ್ಕೆ ಏರಿಸಲು ಅನುಮೋದನೆ ನೀಡಿ ಕಾಮಗಾರಿ ಆರಂಭಿಸಿತ್ತು. ನಂತರ ಬಂದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಕಾಮಗಾರಿ ಪೂರ್ಣಗೊಂಡಿತು. ಜಕ್ಕಲಮಡುಗು ಜಲಾಶಯದ ನೀರನ್ನು ಚಿಕ್ಕಬಳ್ಳಾಪುರ ನಗರಕ್ಕೆ ಶೇ 65ರಷ್ಟು ಮತ್ತು ದೊಡ್ಡಬಳ್ಳಾಪುರ ನಗರಕ್ಕೆ ಶೇ 35ರಷ್ಟು ಬಳಸಿಕೊಳ್ಳಲಾಗುತ್ತಿದೆ.