ಖಾಸ್ಗತ ಜಾತ್ರೋತ್ಸವದಲ್ಲಿ ಭಕ್ತರಿಗೆ ಜಿಲೇಬಿ ಪ್ರಸಾದ

| Published : Jul 17 2024, 12:50 AM IST

ಸಾರಾಂಶ

ಎರಡು ದಿನಗಳ ಕಾಲ ಖಾಸ್ಗತಮಠದ ಭಕ್ತರಿಗೆ ಸಿಗಲಿದೆ ಜಿಲೇಬಿ ಪ್ರಸಾದ.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಪಟ್ಟಣದಲ್ಲಿ ಶ್ರೀ ಖಾಸ್ಗತೇಶ್ವರ ಜಾತ್ರೆ ನಡೆದಿರುವುದರಿಂದ ನಿತ್ಯ ದಾಸೋಹ ನಡೆಯುತ್ತಿದೆ. ಈ ಬಾರಿ ೫೦ ಸಾವಿರಕ್ಕೂ ಮೇಲ್ಪಟ್ಟು ಭಕ್ತರಿಗೆ ನಿತ್ಯ ಫಕ್ವಾನ ಭೋಜನದ ಪ್ರಸಾದದ ಜೊತೆಗೆ ಜಿಲೇಬಿ ಪ್ರಸಾದ ಸಿಗಲಿದೆ.ರಾಜ್ಯದ ಧಾರ್ಮಿಕ ಕ್ಷೇತ್ರದ ಮಠಗಳಲ್ಲಿಯೇ ಅತ್ಯಂತ ಹೆಸರು ಮಾಡಿರುವ ಶ್ರೀ ಖಾಸ್ಗತಮಠವು ಲಕ್ಷಾಂತರ ಭಕ್ತಸಮೂಹವನ್ನು ಹೊಂದಿದೆ. ಈ ಭಾಗದಲ್ಲಿ ಅಜ್ಜನ ಜಾತ್ರೆ ಎಂದೇ ಪ್ರಚಲಿತಹೊಂದಿದ್ದು, ಜು.೧೭ ಮತ್ತು ೧೮ ರಂದು ಭಕ್ತರಿಗೆ ಜಿಲೇಬಿ ಪ್ರಸಾದದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಹಿಂದಿನ ಪೀಠಾಧೀಪತಿ ಲಿಂ.ವಿರಕ್ತ ಮಹಾಸ್ವಾಮಿಗಳ ನುಡಿಯಂತೆ ಅವರ ಮೇಲೆ ಭಕ್ತರು ಇಟ್ಟಿದ್ದ ಭಕ್ತಿ, ಪ್ರೀತಿ, ವಾತ್ಸಲ್ಯ ಈಗಲೂ ಕೂಡ ಮಠದ ಮೇಲೆ ಭಕ್ತರು ತೋರಿಸುತ್ತಿದ್ದಾರೆ. ಜತೆಗೆ ಈಗಿನ ಶ್ರೀಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗದೇವರು ಕೂಡ ಭಕ್ತರೇ ಶ್ರೀಮಠದ ಆಸ್ತಿ ಎಂದು ಹೇಳುತ್ತಿದ್ದಾರೆ.

ಜಾತ್ರೋತ್ಸವದ ದಾಸೋಹ ವ್ಯವಸ್ಥೆಗೆ ಎಲ್ಲ ಗ್ರಾಮ, ಪಟ್ಟಣಗಳಿಂದ ಅವಶ್ಯಕ ದವಸ ದಾನ್ಯಗಳಲ್ಲದೇ ರೊಟ್ಟಿ ಇನ್ನಿತರೆ ವಸ್ತುಗಳನ್ನು ಭಕ್ತಾದಿಗಳು ಅರ್ಪಿಸುತ್ತಿದ್ದಾರೆ. ಭಕ್ತರ ದವಸ್ಯ ಧಾನ್ಯಗಳಿಂದ ನಿತ್ಯ ವಿವಿಧ ರೀತಿಯ ಪ್ರಸಾದ ತಯಾರಿಸಿ ಭಕ್ತರಿಗೆ ನೀಡಲಾಗುತ್ತಾ ಬರಲಾಗುತ್ತಿದೆ. ಈ ಬಾರಿ ಶ್ರೀಮಠದ ಬಾಲಶಿವಯೋಗಿ ಶ್ರೀಗಳ ಮಾತಿನಂತೆ ಜಿಲೇಬಿ ಪ್ರಸಾದವನ್ನು ೫೦ ಸಾವಿರಕ್ಕೂ ಮೇಲ್ಪಟ್ಟು ಭಕ್ತರಿಗೆ ಉಣಬಡಿಸುವ ಸಲುವಾಗಿ ತಯಾರಿ ಮಾಡಿಕೊಳ್ಳಲಾಗಿದೆ.

ಜಾತ್ರೆಗೆ ಪಟ್ಟಿ ಎತ್ತುವ ಕಾರ್ಯ ಸ್ಥಗಿತ:

ಈ ಹಿಂದೆ ಜಾತ್ರೆಯ ಸಮಯದಲ್ಲಿ ಭಕ್ತಾಧಿಗಳ ಮನೆ ಮನೆಗೆ ಶ್ರೀ ಖಾಸ್ಗತರ ಪಲ್ಲಕ್ಕಿಯೊಂದಿಗೆ ಪಟ್ಟಿ(ದೇಣಿಗೆ) ಸಂಗ್ರಹ ಮಾಡಲಾಗುತ್ತಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ಶ್ರೀಮಠದಿಂದ ದೇಣಿಗೆ ಪಟ್ಟಿ ಎತ್ತುವ ಕಾರ್ಯವನ್ನು ಶ್ರೀಮಠದ ಬಾಲ ಶಿವಯೋಗಿ ಶ್ರೀಸಿದ್ದಲಿಂಗದೇವರು ಸ್ಥಗಿತಗೊಳಿಸಿದ್ದಾರೆ. ಸದ್ಯ ಶ್ರೀಮಠಕ್ಕೆ ಭಕ್ತರೇ ಬಂದು ಜಾತ್ರೆ ಉತ್ಸವದ ಜೊತೆಗೆ ದಾಸೋಹದ ವ್ಯವಸ್ಥೆಗೆ ತಮ್ಮ ಕೈಲಾದಷ್ಟು ಕಾಣಿಕೆ ನೀಡಿ ಹೋಗುತ್ತಿದ್ದಾರೆ.

---ಭಕ್ತರೇ ಶ್ರೀಮಠದ ಆಸ್ತಿ ಎಂದು ನಾನು ಶ್ರೀ ಖಾಸ್ಗತರ ಹಾಗೂ ಶ್ರೀ ವಿರಕ್ತಶ್ರೀಗಳ ವಾಣಿಯಂತೆ ನಡೆದಿದ್ದೇನೆ. ಎಲ್ಲ ಭಕ್ತರು ಶ್ರೀಮಠದ ಆಸ್ತಿ ಎಂದು ಭಾವಿಸಿದ್ದೇನೆ. ಈ ಹಿಂದೆ ಈ ಈರ್ವ ಶ್ರೀಗಳು ನಡೆದುಕೊಂಡು ಬಂದ ಹಾಗೆ ನಾನು ಕೂಡ ಹಾಗೇ ಸಾಗುತ್ತಿದ್ದೇನೆ. ಲಿಂ.ವಿರಕ್ತಶ್ರೀಗಳು ನನಗೆ ಕನಸಿನಲ್ಲಿ ಹೇಳಿದಂತೆ ಈ ಬಾರಿಯ ಜಾತ್ರೆಯಲ್ಲಿ ಜಿಲೇಬಿ ಪ್ರಸಾದ ಭಕ್ತಾಧಿಗಳಿಗೆ ನೀಡಲಾಗುತ್ತಿದೆ

- ಬಾಲಶಿವಯೋಗಿ ಶ್ರೀಸಿದ್ದಲಿಂಗ ದೇವರು, ಶ್ರೀ ಖಾಸ್ಗತ ಮಠ ತಾಳಿಕೋಟೆ