ಕಲ್ಲಹಳ್ಳ ಹಾಡಿಯಲ್ಲಿ ಕಳಪೆ ಕಾಮಗಾರಿ

| Published : May 09 2025, 12:30 AM IST

ಸಾರಾಂಶ

ಜೋಡಿಸಿರುವ ಎಲ್ಲಾ ಪೈಪ್ ಗಳಿಂದಲೂ ಕೂಡ ನೀರು ಸೋರಿಕೆ ಆಗುತ್ತಿದ್ದು ಪ್ರತಿದಿನ ಚರಂಡಿಗಳಲ್ಲಿ ನೀರು ತುಂಬಿ ಮನೆ ಸುತ್ತಮುತ್ತ ನೀರು ನಿಲ್ಲುವುದರಿಂದ ಅನೈರ್ಮಲ್ಯ ತಾಂಡವಾಡುತ್ತಿದೆ.

ಕನ್ನಡಪ್ರಭ ವಾರ್ತೆ ಸರಗೂರು

ತಾಲೂಕಿನ ಬಿ. ಮಟಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಕಲ್ಲಹಳ್ಳ ಹಾಡಿಯಲ್ಲಿನ ಜಲಜೀವನ್ ಮಿಷನ್ ನ ಕಾಮಗಾರಿಯು ಕಳಪೆ ಗುಣಮಟ್ಟದಿಂದ ಕೂಡಿದೆ. ಕಳೆದ ಒಂದು ವರ್ಷದಲ್ಲಿ ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳು ಇಲಾಖೆ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ.

ಜೋಡಿಸಿರುವ ಎಲ್ಲಾ ಪೈಪ್ ಗಳಿಂದಲೂ ಕೂಡ ನೀರು ಸೋರಿಕೆ ಆಗುತ್ತಿದ್ದು ಪ್ರತಿದಿನ ಚರಂಡಿಗಳಲ್ಲಿ ನೀರು ತುಂಬಿ ಮನೆ ಸುತ್ತಮುತ್ತ ನೀರು ನಿಲ್ಲುವುದರಿಂದ ಅನೈರ್ಮಲ್ಯ ತಾಂಡವಾಡುತ್ತಿದೆ. ಕುಡಿಯುವ ನೀರಿನ ಪೈಪ್ ಲೈನ್ ಒಡೆದು ನೀರು ಸೋರುವುದರಿಂದ ಕುಡಿಯುವ ನೀರಿಗೆ ಕಲುಷಿತ ನೀರು ಸೇರಿ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ.

ಲಕ್ಷಾಂತರ ಖರ್ಚು ಮಾಡಿದ್ದೇವೆ ಎಂದು ಬಿಲ್ಲು ಮಾಡಿಕೊಂಡು ಕಳಪೆ ಗುಣಮಟ್ಟದ ಕಾಮಗಾರಿ ಮಾಡಿರುವುದರಿಂದ ಒಂದೆಡೆ ನೀರು ಪೋಲಾಗಿ ಹೋಗುತ್ತಿದ್ದರೆ ಇನ್ನೊಂದೆಡೆ ನೀರು ಕಲುಷಿತವಾಗುತ್ತಿದೆ. ಹಾಗಾಗಿ ಈ ಕೂಡಲೇ ಕಳಪೆ ಕಾಮಗಾರಿಯನ್ನು ಸರಿಪಡಿಸಿ ಜನಗಳಿಗೆ ಉತ್ತಮ ಗುಣಮಟ್ಟದ ನೀರಿನ ನಲ್ಲಿಗಳ ಸಂಪರ್ಕ ಕಲ್ಪಿಸಿ ಸೋರುವಿಕೆಯನ್ನು ತಡೆಗಟ್ಟಿ ನೈರ್ಮಲ್ಯ ಕಾಪಾಡಬೇಕು ಎಂದು ಕಲ್ಲಹಳ್ಳ ಜನತೆ ಸಂಬಂಧಪಟ್ಟ ಗುತ್ತಿಗೆದಾರರು ಉತ್ತಮ ಕೆಲಸ ಮಾಡಿಲ್ಲ ಎಂದು ಇಲಾಖೆಯ ಗಮನಕ್ಕೆ ತಂದಿದ್ದಾರೆ ಎಂದು ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿ ಸಂಚಾಲಕ ಟಿ.ಆರ್‌. ಸುನಿಲ್ ತಿಳಿಸಿದರು.

ಈ ವೇಳೆ ಹಾಡಿಯ ಮುಖಂಡರಾದ ಸೋಮೇಶ್, ಕಾಳಮ್ಮ, ಬಂಗಾರಿ, ಮಾದಯ್ಯ, ಪುಟ್ಟೀರಮ್ಮ ಮೊದಲಾದವರು ಇದ್ದರು.